ಗೋವುಗಳ ರಕ್ಷಣೆಗಾಗಿ ಸಚಿವ ಸಂಪುಟ ರಚನೆ!

By Suvarna NewsFirst Published Nov 19, 2020, 11:43 AM IST
Highlights

ಗೋವುಗಳ ರಕ್ಷಣೆಗಾಗಿ ಸಚಿವ ಸಂಪುಟ ರಚನೆ!| ನ.22ರಂದು ಮಧ್ಯಾಹ್ನ 12 ಗಂಟೆಗೆ ಗೋವು ಕ್ಯಾಬಿನೆಟ್‌| ಗೋವಿನ ರಕ್ಷಣೆಗಾಗಿ ಸಂಪುಟ ರಚನೆ ಇದೇ ಮೊದಲು

 

ಭೋಪಾಲ್(ನ.19)‌: ರಾಜ್ಯದಲ್ಲಿ ಗೋವುಗಳ ರಕ್ಷಣೆ ಮತ್ತು ಗೋ ಉತ್ಪನ್ನಗಳ ಉತ್ತೇಜನಕ್ಕಾಗಿ ಮೀಸಲಾದ ಸಚಿವ ಸಂಪುಟವೊಂದನ್ನು ರಚಿಸಲು ಮಧ್ಯಪ್ರದೇಶ ಸರ್ಕಾರ ತೀರ್ಮಾನಿಸಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ತಿಳಿಸಿದ್ದಾರೆ. ಗೋವಿನ ರಕ್ಷಣೆಯ ಕುರಿತಂತೆ ಸಂಪುಟ ಸಭೆಯನ್ನು ನಡೆಸುತ್ತಿರುವುದು ಇದೇ ಮೊದಲು.

‘ಗೋವು ಕ್ಯಾಬಿನೆಟ್‌’ ಎಂದು ಕರೆಯಲ್ಪಡುವ ಈ ಸಂಪುಟ ಸಭೆಯಲ್ಲಿ ಪಶುಸಂಗೋಪನೆ, ಅರಣ್ಯ, ಪಂಚಾಯತ್‌ ಮತ್ತು ಗ್ರಾಮೀಣ ಅಭಿವೃದ್ಧಿ, ಕಂದಾಯ, ಗೃಹ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಚಿವರು ಇರಲಿದ್ದಾರೆ. ಗೋವು ಕ್ಯಾಬಿನೆಟ್‌ನ ಮೊದಲ ಸಭೆ ನ.22ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಅಗರ್‌ ಮಾಲ್ವಾ ಜಿಲ್ಲೆಯಲ್ಲಿರುವ ಗೋ ಶಾಲೆಯಲ್ಲಿ ಗೋಪಾಷ್ಟಮಿಯ ನಿಮಿತ್ತ ಈ ಸಂಪುಟ ಸಭೆಯನ್ನು ಆಯೋಜಿಸಲಾಗಿದೆ.

ಮುಖ್ಯಮಂತ್ರಿ ಚೌಹಾಣ್‌ ಅವರ ಜೊತೆ ಗೃಹ ಸಚಿವ ನರೋತ್ತಮ್‌ ಮಿಶ್ರಾ, ಅರಣ್ಯ ಸಚಿವ ವಿಜಯ್‌ ಶಾ, ಕೃಷಿ ಸಚಿವ ಕಮಲ್‌ ಪಟೇಲ್‌, ಪಂಚಾಯತ್‌ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವ ಮಹೇಂದ್ರ ಸಿಂಗ್‌ ಸಿಸೋಡಿಯಾ ಮತ್ತು ಪಶುಸಂಗೋಪನಾ ಸಚಿವ ಪ್ರೇಮ್‌ ಸಿಂಗ್‌ ಪಟೇಲ್‌ ಅವರು ಸಂಪುಟ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಗೋವಿನ ಸಗಣಿಯ ಬೆರಣಿ ಹಾಗೂ ಗೋ ಕಾಸ್ಟದ ಉತ್ಪಾದನೆ ಹೆಚ್ಚಳಕ್ಕೆ ಕಾರ್ಯಸೂಚಿ ಜಾರಿ ಹಾಗೂ ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆಒದಗಿಸುವ ಕುರಿತಂತೆ 6 ಸಚಿವಾಲಯಗಳ ಸಹಯೋಗದೊಂದಿಗೆ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!