ಚಳಿಗಾಲದ ಸಮರಕ್ಕೆ ಭಾರತೀಯ ಸೇನೆ ಸಜ್ಜು| ಗಡಿಯಲ್ಲಿ ಯೋಧರಿಗೆ ಚಳಿ ತಡೆವ ವಸತಿ ವ್ಯವಸ್ಥೆ| ಚೀನಾ ಸಂಘರ್ಷ ಚಳಿಗಾಲದಲ್ಲೂ ಮುಂದುವರಿದ ಹಿನ್ನೆಲೆ| ಬೆಡ್, ಕಪಾಟು ಸೇರಿ ಅನೇಕ ಸೌಕರ್ಯ ಕಲ್ಪಿಸಿದ ಭಾರತ| ಯೋಧರಿಗೆ ಈಗ ಶಂಕರಪೋಳಿಯೇ ಪೂರ್ಣ ಆಹಾರ!
ನವದೆಹಲಿ(ನ.19): ಪೂರ್ವ ಲಡಾಖ್ ಪ್ರದೇಶದಲ್ಲಿ ಚೀನಾ ಜೊತೆಗಿನ ಸಂಘರ್ಷ ಸದ್ಯಕ್ಕೆ ಬಗೆಹರಿಯುವ ಯಾವುದೇ ಲಕ್ಷಣಗಳೂ ಕಂಡುಬಾರದ ಹಿನ್ನೆಲೆಯಲ್ಲಿ ಮೈನಸ್ 40 ಡಿಗ್ರಿವರೆಗಿನ ಉಷ್ಣಾಂಶದ ಮಧ್ಯೆಯೂ ಗಡಿ ಕಾಯುವುದಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಯೋಧರಿಗೆ ಕೇಂದ್ರ ಸರ್ಕಾರ ಕಲ್ಪಿಸಿದೆ.
ಅತ್ತ ಚೀನಾ ಸರ್ಕಾರ ತನ್ನ ಯೋಧರಿಗೆ ಲಡಾಖ್‌ಗೆ ಹೊಂದಿಕೊಂಡ ಪ್ರದೇಶದಲ್ಲಿ ವಿಶೇಷ ವಸತಿ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಯನ್ನು ಕಲ್ಪಿಸಿ ಚಳಿಗಾಲದ ಹೋರಾಟಕ್ಕೆ ಸೇನೆಯನ್ನು ಸಜ್ಜುಗೊಳಿಸಿದ ಬೆನ್ನಲ್ಲೇ, ಭಾರತ ಸರ್ಕಾರ ಕೂಡಾ ತನ್ನ ಸೇನೆಯನ್ನು ಚಳಿಗಾಲದ ಸಮರಕ್ಕೆ ಅಣಿ ಮಾಡಿದೆ.
ನವೆಂಬರ್‌ನಿಂದ ಚಳಿಗಾಲ ಆರಂಭವಾದರೆ ಲಡಾಖ್ ಗಡಿಯಲ್ಲಿ 40 ಅಡಿವರೆಗೂ ಹಿಮ ಬೀಳುತ್ತದೆ. ಮೈನಸ್ 30ರಿಂದ 40 ಡಿಗ್ರಿವರೆಗೂ ತಾಪಮಾನ ಇರುತ್ತದೆ. ಈ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಲು ಯೋಧರಿಗೆ ಅಗತ್ಯವಿರುವ ವಸತಿ ಸೌಕರ್ಯವನ್ನು ಭಾರತೀಯ ಸೇನೆ ಕಲ್ಪಿಸಿದ್ದು, ಅದರ ಫೋಟೋಗಳು ವೈರಲ್ ಆಗಿವೆ.
ಮನೆ ರೂಪದ ರಚನೆಯೊಳಗೆ ಬೆಡ್‌ಗಳು, ಯೋಧರಿಗೆ ಚಳಿಯಾಗದಂತೆ ನೋಡಿಕೊಳ್ಳಲು ಹೀಟರ್‌ಗಳು, ಅಗತ್ಯ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಕಪಾಟುಗಳನ್ನು ವ್ಯವಸ್ಥೆ ಮಾಡಲಾಗಿದೆ. ವಿದ್ಯುಚ್ಛಕ್ತಿ, ನೀರು, ಆರೋಗ್ಯ ಹಾಗೂ ನೈರ್ಮಲ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಜೊತೆಗೆ ವಾಹನಗಳನ್ನು ನಿಲ್ಲಿಸಲು ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ.
ಲಾಕ್‌ಡೌನ್‌ನಿಂದಾಗಿ ಯೋಧರ ವಸತಿ ಸೌಕರ್ಯಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ನಡೆಸಲು ಸೇನೆಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ರಷ್ಯಾದಿಂದ ಟೆಂಟ್‌ಗಳನ್ನು ಖರೀದಿಸಲಾಗಿದೆ. ಚಳಿಗೆ ಕುಖ್ಯಾತಿಯಾದ ಸೈಬೀರಿಯಾದಲ್ಲಿ ಬಳಸುವಂತಹ ಟೆಂಟ್‌ಗಳು ಇವಾಗಿವೆ.
ಯೋಧರಿಗೆ ಶಂಕರಪೋಳಿ:
ಪ್ರತಿಕೂಲ ಹವಾಮಾನ ಎದುರಿಸುವುದರಲ್ಲಿ ನಿಷ್ಣಾತರಾಗಿರುವ ಇಂಡೋ-ಟಿಬೆಡ್ ಗಡಿ ಪೊಲೀಸ್ ಪಡೆಯನ್ನು ಗಡಿಯಲ್ಲಿ ನಿಯೋಜನೆ ಮಾಡಲಾಗಿದೆ. ಆ ಪಡೆಯ ಯೋಧರು ಆಹಾರಕ್ಕಾಗಿ ಶಂಕರಪೋಳಿ ಮೇಲೆ ಅವಲಂಬಿತರಾಗಿದ್ದಾರೆ. ಗೋಧಿ ಹಿಟ್ಟನ್ನು ಎಣ್ಣೆಯಲ್ಲಿ ಕರಿದು, ಸಕ್ಕರೆ ಪಾಕದಲ್ಲಿ ಅದ್ದಿ ತಯಾರಿಸುವ ಈ ತಿನಿಸನ್ನು ಯೋಧರು ಬಳಸುತ್ತಿದ್ದಾರೆ. ಇದನ್ನು ಮಾಡುವುದು ಸುಲಭ. ಒಯ್ಯುವುದೂ ಸುಲಭ. ಗೋಧಿ ಹಸಿವು ನೀಗಿಸಿದರೆ, ಸಕ್ಕರೆ ಅಂಶ ಶಕ್ತಿ ನೀಡುತ್ತದೆ ಎಂಬುದು ಸೇನಾಪಡೆಗಳ ವಾದವಾಗಿದೆ.
ಏನೇನು ಸೌಕರ್ಯ?
ಮನೆ ರೂಪದ ರಚನೆಯೊಳಗೆ ಬೆಡ್, ಹೀಟರ್, ಅಗತ್ಯ ವಸ್ತು ಸಂಗ್ರಹಕ್ಕೆ ಕಪಾಟು, ವಿದ್ಯುಚ್ಛಕ್ತಿ, ನೀರು, ಆರೋಗ್ಯಮ ನೈರ್ಮಲ್ಯ ವ್ಯವಸ್ಥೆ, ವಾಹನ ನಿಲ್ಲಿಸಲು ತಾತ್ಕಾಲಿಕ ಶೆಡ್.
ಸೌಕರ್ಯದ ಅಗತ್ಯವೇನು?
ಚಳಿಗಾಲದಲ್ಲಿ ಲಡಾಖ್ ಗಡಿಯಲ್ಲಿ 40 ಅಡಿವರೆಗೂ ಹಿಮ ಬೀಳುತ್ತದೆ. ಮೈನಸ್ 30ರಿಂದ 40 ಡಿಗ್ರಿವರೆಗೂ ತಾಪಮಾನ ಇರುತ್ತದೆ. ಇಲ್ಲಿ ಸಾಮಾನ್ಯ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಣೆ ಕಷ್ಟ. ಹೀಗಾಗಿ ವಿಶೇಷ ಸೌಕರ್ಯದ ಅವಶ್ಯಕತೆ ಇದೆ.