ಹೊಸ ಪಕ್ಷ ಸ್ಥಾಪಿಸಿ ಅಳಗಿರಿ ಎನ್‌ಡಿಎಗೆ?

By Suvarna NewsFirst Published Nov 19, 2020, 8:29 AM IST
Highlights

ಹೊಸ ಪಕ್ಷ ಸ್ಥಾಪಿಸಿ ಅಳಗಿರಿ ಎನ್‌ಡಿಎಗೆ?| ನಾಡಿದ್ದು ಅಮಿತ್‌ ಶಾ ಜತೆ ಚೆನ್ನೈನಲ್ಲಿ ಮುಖಾಮುಖಿ ಮಾತುಕತೆ| ನಾಳೆಯೇ ಮದುರೈನಲ್ಲಿ ‘ಕೆಡಿಎಂಕೆ’ ಪಕ್ಷ ಘೋಷಣೆ ಸಾಧ್ಯತೆ

ಚೆನ್ನೈ(ನ.19): ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಹಿರಿಯ ಪುತ್ರ ಹಾಗೂ ಡಿಎಂಕೆ ಉಚ್ಚಾಟಿತ ನಾಯಕ ಎಂ.ಕೆ. ಅಳಗಿರಿ ಅವರು ಹೊಸ ಪಕ್ಷ ಸ್ಥಾಪಿಸಿ, ಶೀಘ್ರದಲ್ಲೇ ಎನ್‌ಡಿಎಗೆ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ.

ಸ್ಟಾಲಿನ್‌ ಅವರು ಡಿಎಂಕೆ ಮುಖ್ಯಸ್ಥರಾದ ಬಳಿಕ ಸಂಪೂರ್ಣ ಮೂಲೆಗುಂಪಾಗಿರುವ ಅಳಗಿರಿ, ಏಪ್ರಿಲ್‌- ಮೇನಲ್ಲಿ ನಡೆಯಲಿರುವ ತಮಿಳುನಾಡಿನ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಪುಟಿದೇಳಲು ಸಿದ್ಧತೆ ನಡೆಸುತ್ತಿದ್ದಾರೆ. ಇದಕ್ಕಾಗಿ ‘ಕಲೈನರ್‌ ಡಿಎಂಕೆ’ ಅಥವಾ ‘ಕೆಡಿಎಂಕೆ’ ಎಂಬ ಪಕ್ಷವನ್ನು ಅವರು ಸ್ಥಾಪಿಸುವ ಸಂಭವವಿದೆ ಎಂದು ವರದಿಗಳು ತಿಳಿಸಿವೆ.

67 ಸಾವಿರ ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಶನಿವಾರ ಚೆನ್ನೈಗೆ ಭೇಟಿ ನೀಡುತ್ತಿದ್ದಾರೆ. ಆ ಸಂದರ್ಭದಲ್ಲಿ ಅಳಗಿರಿ ಅವರು ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಮುಖಾಮುಖಿ ಮಾತುಕತೆ ನಡೆಸಲಿದ್ದಾರೆ. ಒಂದು ವೇಳೆ, ಶಾ ಅವರ ಭೇಟಿ ಮುಂದೂಡಿಕೆಯಾಗದಿದ್ದಲ್ಲಿ, ಶುಕ್ರವಾರ ಮದುರೈನಲ್ಲಿ ತಮ್ಮ 100-200 ಕಟ್ಟರ್‌ ಬೆಂಬಲಿಗರ ಎದುರು ಹೊಸ ಪಕ್ಷವನ್ನು ಘೋಷಣೆ ಮಾಡಿ, ಮರುದಿನವೇ ಶಾ ಅವರನ್ನು ಚೆನ್ನೈನಲ್ಲಿ ಅಳಗಿರಿ ಭೇಟಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ತಮಿಳುನಾಡಿನಲ್ಲಿ ಬೇರು ಬಿಡಲು ಯತ್ನಿಸುತ್ತಿರುವ ಬಿಜೆಪಿ ಈಗಾಗಲೇ ಪ್ರಸಿದ್ಧ ಚಿತ್ರನಟಿ ಖುಷ್ಬೂ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆಯುತ್ತಿರುವುದು ಸಂಚಲನಕ್ಕೆ ಕಾರಣವಾಗಿದೆ.

ಡಿಎಂಕೆ ಮೂಲಗಳ ಪ್ರಕಾರ, ಸ್ಟಾಲಿನ್‌ ಅವರಿಗೆ ಅಳಗಿರಿ ಹೊಸ ನಡೆಯ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ‘ಅಳಗಿರಿ ಬಿಜೆಪಿ ಕಡೆ ಹೋದರೆ ಹೋಗಲಿ ಬಿಡಿ. ಅಳಗಿರಿ ಆರು ವರ್ಷಗಳಿಂದ ಎಲ್ಲೂ ಇರಲಿಲ್ಲ. ಅವರಿಗೆ ಅವರದ್ದೇ ಆದ ಕ್ಷೇತ್ರವಿಲ್ಲ. ಹಣವೂ ಇಲ್ಲ, ಬೆಂಬಲಿಗರೂ ಇಲ್ಲ. ಒಂದೆರಡು ದಿನ ಸುದ್ದಿಯಾಗುವುದು ಬಿಟ್ಟರೆ ಅವರಿಂದ ತಮಿಳುನಾಡು ರಾಜಕೀಯದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ’ ಎಂದು ಡಿಎಂಕೆ ನಾಯಕರೊಬ್ಬರು ತಿಳಿಸಿದ್ದಾರೆ.

click me!