ಸಾಯಿಬಾಬಾ ಜನ್ಮಸ್ಥಾನ: ಹೇಳಿಕೆ ಹಿಂಪಡೆದ ಉದ್ಧವ್| ವಿವಾದ ಇತ್ಯರ್ಥಕ್ಕೆ ಶಿರಡಿ ಪ್ರಮುಖರ ಜತೆ ಸಿಎಂ ಸಭೆ| ಪಾಥರಿ ಜನ್ಮಸ್ಥಳ ಎಂಬ ಹೇಳಿಕೆ ಸಿಎಂರಿಂದ ವಾಪಸ್: ಸಭೆಯಲ್ಲಿದ್ದವರ ಹೇಳಿಕೆ| ಆದರೆ ಪಾಥರಿ ಅಭಿವೃದ್ಧಿಗೆ ಅನುದಾನಕ್ಕೆ ಶಿರಡಿ ಜನರ ಸಮ್ಮತಿ
ಮುಂಬೈ[ಜ.21]: ‘ಮಹಾರಾಷ್ಟ್ರದ ಪರಭಣಿ ಜಿಲ್ಲೆಯ ಪಾಥರಿ ಗ್ರಾಮವನ್ನು ಶಿರಡಿ ಸಾಯಿಬಾಬಾ ಜನ್ಮಸ್ಥಳವೆಂದು ಪರಿಗಣಿಸಲಾಗುವುದು’ ಎಂದು ಹೇಳಿ ಅದರ ಅಭಿವೃದ್ಧಿಗೆ 100 ಕೋಟಿ ರು. ಬಿಡುಗಡೆ ಮಾಡಿದ್ದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.
ಬಂದ್‌ನಿಂದಾಗಿ ಶಿರಡಿ ಸ್ತಬ್ಧ, 25 ಹಳ್ಳಿಗಳೂ ಬಂದ್!
ಉದ್ಧವ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದ ಶಿರಡಿ ಟ್ರಸ್ಟ್ ಸದಸ್ಯರು ಸೇರಿದಂತೆ ಶಿರಡಿಯ 40 ಮುಖಂಡರ ಜತೆ ಸೋಮವಾರ ಉದ್ಧವ್ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನೆ ಸಂಸದ ಸದಾಶಿವ ಲೋಖಂಡೆ, ‘ಉಪಮುಖ್ಯಮಂತ್ರಿ ಅಜಿತ್ ಪವಾರ್ ಜತೆ ಸೇರಿಕೊಂಡು ಮುಖ್ಯಮಂತ್ರಿಗಳು ಶಿರಡಿ ಟ್ರಸ್ಟ್‌ನ ಪ್ರತಿನಿಧಿಗಳ ಜತೆ ಸಭೆ ನಡೆಸಿದರು. ಈ ವೇಳೆ ಪಾಥರಿ ಗ್ರಾಮವು ಸಾಯಿಬಾಬಾ ಜನ್ಮಸ್ಥಳ ಎಂಬ ಹೇಳಿಕೆಯನ್ನು ಹಿಂಡೆಯುವುದಾಗಿ ಹೇಳಿದರು’ ಎಂದು ತಿಳಿಸಿದರು. ಆದರೆ ಈ ಬಗ್ಗೆ ಮುಖ್ಯಮಂತ್ರಿಗಳಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಇದೇ ವೇಳೆ, ‘ಪಾಥರಿ ಗ್ರಾಮಕ್ಕೆ 100 ಕೋಟಿ ರು. ಅನುದಾನ ಬಿಡುಗಡೆ ಮಾಡುವುದಕ್ಕೆ ನಿಮ್ಮ ಆಕ್ಷೇಪ ಇದೆಯೇ?’ ಎಂದು ಶಿರಡಿ ಪ್ರತಿನಿಧಿಗಳನ್ನು ಉದ್ಧವ್ ಕೇಳಿದರು. ಅದಕ್ಕೆ ಶಿರಡಿ ಪ್ರತಿನಿಧಿಗಳು, ‘ಪಾಥರಿಯನ್ನು ಬಾಬಾ ಜನ್ಮಸ್ಥಾನ ಎಂದು ಘೋಷಿಸುವುದಕ್ಕಷ್ಟೇ ನಮ್ಮ ವಿರೋಧ. ಅನುದಾನ ಬಿಡುಗಡೆಗೆ ನಮ್ಮ ಅಡ್ಡಿಯಿಲ್ಲ’ ಎಂದು ಸ್ಪಷ್ಟಪಡಿಸಿದರು ಎಂದು ಲೋಖಂಡೆ ಹೇಳಿದರು.
ಸಭೆಯಲ್ಲಿದ್ದ ಬಿಜೆಪಿ ಸಂಸದ ಸುಜಯ್ ವಿಖೆಪಾಟೀಲ್ ಕೂಡ, ‘ವಿವಾದ ಬಗೆಹರಿದಿದೆ. ಇನ್ನು ಶಿರಡಿ ಜನ ಪ್ರತಿಭಟನೆ ಮಾಡಲ್ಲ’ ಎಂದು ಹೇಳಿದರು.
ಸಾಯಿಬಾಬಾ ಜನ್ಮಸ್ಥಳ ವಿವಾದ, ಶಿರಡಿ ಅನಿರ್ದಿಷ್ಟಾವಧಿ ಬಂದ್!
ಪಾಥರಿ ಜನರ ಆಕ್ರೋಶ:
ಆದರೆ ‘ಪಾಥರಿ ಜನ್ಮಸ್ಥಳ’ ಎಂಬ ಹೇಳಿಕೆಯಿಂದ ಉದ್ಧವ್ ಹಿಂದೆ ಸರಿದಿದ್ದನ್ನು ಪಾಥರಿ ಗ್ರಾಮಸ್ಥರು ಪ್ರಶ್ನಿಸಿದ್ದು, ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.