ಠಾಕ್ರೆ ಸೇನೆ ಬಳಿಕ ಶರದ್‌ ಪವಾರ್‌ ಎನ್‌ಸಿಪಿಯಲ್ಲಿ ಬಂಡಾಯ?

Published : Jun 20, 2026, 07:45 AM IST
Sharad Pawar

ಸಾರಾಂಶ

ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ, ಶರದ್ ಪವಾರ್ ಬಣದ ಹಲವು ಸಂಸದರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೊಂಡಿದೆ. ಇದು ಪಕ್ಷದಲ್ಲಿ ಮತ್ತೊಂದು ವಿಭಜನೆಯ ಆತಂಕ ಸೃಷ್ಟಿಸಿದೆ.

ಮುಂಬೈ (ಜೂ.20): ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಸಂಸದರ ಬಂಡಾಯ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ಬೆನ್ನಲ್ಲೇ, ಇದೀಗ ಶರದ್‌ ಪವಾರ್ ನೇತೃತ್ವದ ಎನ್‌ಸಿಪಿ-ಎಸ್‌ಪಿಯ ಹಲವಾರು ಸಂಸದರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಅಜಿತ್‌ ಪವಾರ್‌ ಅವರ ಎನ್‌ಸಿಪಿ ಹೇಳಿಕೊಂಡಿದೆ. ಈ ಮೂಲಕ ಈಗಾಗಲೇ ಒಮ್ಮೆ ಹೋಳಾಗಿರುವ ಪಕ್ಷ ಮತ್ತೊಮ್ಮೆ ಹೋಳಾಗುವ ಭೀತಿ ಎದುರಾಗಿದೆ. ಇತ್ತ ಟಿಎಂಸಿ, ಸೇನೆ (ಯುಬಿಟಿ) ಬಂಡಾಯದ ಹೊಡೆತಕ್ಕೆ ಸಿಲುಕಿರುವ ಇಂಡಿ ಮೈತ್ರಿಕೂಟಕ್ಕೆ ಮತ್ತೊಂದು ಏಟು ಬೀಳುವ ಸಾಧ್ಯತೆಯಿದೆ.

ಶರದ್ ಪವಾರ್ ಪಕ್ಷದ ಹಲವಾರು ಸಂಸದರು ಮತ್ತು ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹಿರಿಯ ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಧರ್ಮರಾವ್ ಅತ್ರಮ್ ಹೇಳಿಕೊಂಡಿದ್ದಾರೆ. ಆದರೆ ಎನ್‌ಸಿಪಿ-ಎಸ್‌ಪಿಯ ನಾಯಕರು ಈ ವದಂತಿಯನ್ನು ಅಲ್ಲಗಳೆದಿದ್ದಾರೆ. ಈ ನಡುವೆ, ಬಿಜೆಪಿ ತಮ್ಮ ಪಕ್ಷಗಳನ್ನು ವಿಭಜಿಸಲು ಪ್ರಯತ್ನಿಸಬಹುದು ಎಂದು ಕಾಂಗ್ರೆಸ್ ಮತ್ತು ಎನ್‌ಸಿಪಿ-ಎಸ್‌ಪಿಯ ಹಿರಿಯ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.

ಪಕ್ಷಾಂತರಕ್ಕೆ 6 ಸಂಸದರು ಅಗತ್ಯ

ಸದ್ಯ ಎನ್‌ಸಿಪಿ-ಎಸ್‌ಪಿ 8 ಲೋಕಸಭಾ ಸಂಸದರು ಹಾಗೂ ಓರ್ವ ರಾಜ್ಯಸಭಾ ಸಂಸದರನ್ನು ಹೊಂದಿದೆ. ಪಕ್ಷಾಂತರ ವಿರೋಧಿ ಕಾನೂನಿನ ಪ್ರಕಾರ, ಸಂಸದೀಯ ಪಕ್ಷದಲ್ಲಿ ವಿಭಜನೆಯಾದರೆ ಕನಿಷ್ಠ 2/3ರಷ್ಟು ಬೆಂಬಲ ಬೇಕಾಗುತ್ತದೆ. ಇಲ್ಲದಿದ್ದರೆ ಅನರ್ಹತೆಯನ್ನು ಎದುರಿಸಬೇಕಾಗುತ್ತದೆ. ಸದ್ಯ ಪಕ್ಷದಿಂದ ಕಾನೂನಾತ್ಮಕವಾಗಿ ಬೇರ್ಪಟ್ಟು ಬೇರೊಂದು ಬಣದೊಂದಿಗೆ ವಿಲೀನಗೊಳ್ಳಲು ಕನಿಷ್ಠ 6 ಸಂಸದರ ಅಗತ್ಯವಿದೆ. ಪಕ್ಷದ ಸಂಸದರಲ್ಲಿ ಸುಪ್ರಿಯಾ ಸುಳೆ, ಅಮೋಲ್ ಕೊಲ್ಹೆ, ಬಜರಂಗ್ ಸೋನಾವಾನೆ, ನೀಲೇಶ್ ಲಂಕೆ, ಸುರೇಶ್ ಮ್ಹಾತ್ರೆ, ಅಮರ್ ಕಾಳೆ, ಭಾಸ್ಕರ್ ಭಾಗರೆ ಮತ್ತು ಧೈರ್ಯಶೀಲ್ ಮೋಹಿತೆ ಪಾಟೀಲ್ ಸೇರಿದ್ದಾರೆ.

2023ರಲ್ಲಿ ಹೋಳಾಗಿದ್ದ ಪಕ್ಷ

ಎನ್‌ಸಿಪಿಯನ್ನು 1999ರಲ್ಲಿ ಶರದ್‌ ಪವಾರ್‌ ಸೇರಿದಂತೆ ಪ್ರಮುಖರು ಆರಂಭಿಸಿದ್ದರು. ನಾಯಕರ ಭಿನ್ನಮತದ ಕಾರಣ 2023ರಲ್ಲಿ ಪಕ್ಷ ವಿಭಜನೆಯಾಗಿ, 2 ಬಣಗಳು ಹುಟ್ಟಿಕೊಂಡವು, ಒಂದು ಸಂಸ್ಥಾಪಕ ಅಧ್ಯಕ್ಷ ಶರದ್ ಪವಾರ್ ನೇತೃತ್ವದಲ್ಲಿ ಮತ್ತು ಇನ್ನೊಂದು ಅವರ ಅಣ್ಣನ ಮಗ ಅಜಿತ್ ಪವಾರ್ ನೇತೃತ್ವದಲ್ಲಿ. ಕಾನೂನು ಹೋರಾಟದ ನಂತರ, ಸುಪ್ರೀಂ ಕೋರ್ಟ್ ಅಜಿತ್ ಪವಾರ್ ನೇತೃತ್ವದ ಬಣದ ಪರವಾಗಿ ತೀರ್ಪು ನೀಡಿತು. ಅದಕ್ಕೆ ಪಕ್ಷದ ಚಿಹ್ನೆ ಮತ್ತು ಹೆಸರನ್ನು ನೀಡಲಾಯಿತು. ತರುವಾಯ, ಶರದ್ ನೇತೃತ್ವದ ಬಣವು ಎನ್‌ಸಿಪಿ-ಎಸ್‌ಪಿ ಅನ್ನು ರಚಿಸಿತು.

ಎನ್‌ಡಿಎಗೆ ಮತ್ತಷ್ಟು ಬಲ

ಇತ್ತೀಚೆಗೆ ಟಿಎಂಸಿಯ 20 ಸಂಸದರು ಬಂಡಾಯ ಎದ್ದು ಎನ್‌ಡಿಎ ಬೆಂಬಲಿಸಿದ್ದಾರೆ. ಶಿವಸೇನೆಯ (ಯುಬಿಟಿ) 6 ಸಂಸದರೂ ಎನ್‌ಡಿಎ ಬೆಂಬಲಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಇದರೊಂದಿಗೆ ಲೋಕಸಭೆಯಲ್ಲಿ ಎನ್‌ಡಿಎ ಬಲ 298ರಿಂದ 324ಕ್ಕೆ ಏರಲಿದೆ. 543 ಸದಸ್ಯಬಲದ ಸದನದಲ್ಲಿ 2/3ರಷ್ಟು ಬಹುಮತಕ್ಕೆ 362 ಸೀಟು ಬೇಕು. ಹೀಗಾಗಿ ಇನ್ನೂ 38 ಸದಸ್ಯರ ಕೊರತೆ ಬೀಳಲಿದೆ. ಇದೀಗ ಎನ್‌ಸಿಪಿ-ಎಸ್‌ಪಿ ಸದಸ್ಯರ ಬೆಂಬಲ ದೊರೆತರೆ, ಕೊರತೆ ಸ್ವಲ್ಪ ಮಟ್ಟಿಗೆ ನೀಗಲಿದೆ. 2/3ರಷ್ಟು ಬಹುಮತವು ಮಹಿಳಾ ಮೀಸಲು ಸೇರಿದಂತೆ ಸಾಂವಿಧಾನಿಕ ಮಸೂದೆಗಳ ಅಂಗೀಕಾರಕ್ಕೆ ಅಗತ್ಯ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

National News Live: ಠಾಕ್ರೆ ಸೇನೆ ಬಳಿಕ ಶರದ್‌ ಪವಾರ್‌ ಎನ್‌ಸಿಪಿಯಲ್ಲಿ ಬಂಡಾಯ?
ಪತ್ನಿಯೆಂದು ಬಂದು ಹುತಾತ್ಮ ಪೈಲಟ್​ನ 21 ಲಕ್ಷ ಪರಿಹಾರ ಪಡೆದು ನಾಪತ್ತೆಯಾದಳು? ಕುಟುಂಬಸ್ಥರು ಕಂಗಾಲು