
ನವದೆಹಲಿ (ಮೇ.19): ಕರ್ನಾಟಕ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಒಂದಾದ ‘ಶಕ್ತಿ’ ಸ್ಕೀಂ ಇದೀಗ ಬಿಜೆಪಿ ಆಡಳಿತದ ಪಶ್ಚಿಮ ಬಂಗಾಳ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆಡಳಿತ ಹೊಂದಿರುವ ಕೇರಳಕ್ಕೂ ವಿಸ್ತರಣೆಯಾಗಿದೆ. ಇದರೊಂದಿಗೆ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಡುವ ಯೋಜನೆ ದೇಶದ 9 ರಾಜ್ಯಗಳಿಗೆ ವಿಸ್ತರಿಸಿದಂತೆ ಆಗಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಸೋಮವಾರ ಕೋಲ್ಕತಾದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹಿಳೆಯರಿಗೆ ಮಾಸಿಕ 3000 ರು. ನೆರವಿನ ಅನ್ನಪೂರ್ಣ ಮತ್ತು ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಯೋಜನೆ ಜಾರಿಗೆ ಅನುಮೋದನೆ ನೀಡಲಾಯಿತು. ಜೂನ್ 1ರಿಂದ ಎರಡೂ ಯೋಜನೆ ಜಾರಿಗೆ ಬರಲಿವೆ. ಇದೇ ವೇಳೆ ಸರ್ಕಾರಿ ನೌಕರರಿಗೆ 7ನೇ ಆಯೋಗ ರಚನೆಯ ಕುರಿತೂ ಸಂಪುಟ ನಿರ್ಧಾರ ಕೈಗೊಂಡಿದೆ.
ಸೋಮವಾರವಷ್ಟೇ ಕೇರಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ವಿ.ಡಿ.ಸತೀಶನ್ ಸರ್ಕಾರ ಕೂಡ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಒದಗಿಸುವ ಯೋಜನೆಯನ್ನು ಜೂ.15ರಿಂದ ಜಾರಿಗೆ ತರುವುದಾಗಿ ಘೋಷಿಸಿದೆ. ಇದರ ಜೊತೆಗೆ ಆಶಾ ಕಾರ್ಯಕರ್ತೆಯರಿಗೆ 3,000 ರು. ಗೌರವಧನ ಹೆಚ್ಚಳ ಮತ್ತು ವಯೋವೃದ್ಧರಿಗಾಗಿ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಸೋಮವಾರ ಘೋಷಿಸಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಘೋಷಿಸಿ ಚುನಾವಣೆ ಗೆಲ್ಲುವ ವಿಧಾನ ಈಗ ಜನಪ್ರಿಯವಾಗಿದೆ. ಕರ್ನಾಟಕದಲ್ಲಿ ‘ಶಕ್ತಿ’ ಹೆಸರಿನಲ್ಲಿ ಜಾರಿಯಲ್ಲಿರುವ ಈ ಗ್ಯಾರಂಟಿ ಯೋಜನೆ ಒಟ್ಟಾರೆ ದೇಶದ 9 ರಾಜ್ಯಗಳಲ್ಲಿ ಜಾರಿಯಲ್ಲಿದೆ. ಆ ರಾಜ್ಯಗಳೆಂದರೆ: ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ