
ಕೋಲ್ಕತಾ/ತಿರುವನಂತಪುರಂ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತವು ಶೀಘ್ರದಲ್ಲೇ ಚಂಡಮಾರುತವಾಗಿ ರೂಪಾಂತರಗೊಳ್ಳಲಿದ್ದು, ಅ.28ರಂದು ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಭಾನುವಾರ ಎಚ್ಚರಿಸಿದೆ. ಇದರ ಪರಿಣಾಮವಾಗಿ ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣ ಮತ್ತು ಪೂರ್ವ ಭಾರತದ ಹಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ.
ಪ್ರಸ್ತುತ ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದು ಸೋಮವಾರ ಬೆಳಿಗ್ಗೆ ಹೊತ್ತಿಗೆ ತೀವ್ರಗೊಂಡು ಚಂಡಮಾರುತವಾಗಿ ಬದಲಾಗಲಿದೆ. ಅ.27ಕ್ಕೆ ಮತ್ತಷ್ಟು ತೀವ್ರಗೊಂಡು, ಅ.28ಕ್ಕೆ ಭೀಕರ ಚಂಡಮಾರುತವಾಗಿ ಮಾರ್ಪಟ್ಟು ಆಂಧ್ರದ ವಿಶಾಖಪಟ್ಟಣ ಹಾಗೂ ಬಾಪಟ್ಲ ನಡುವಿನ ಕರಾವಳಿಗೆ ಅಪ್ಪಳಿಸಲಿದೆ.
ಈ ಚಂಡಮಾರುತವು ಅ.28ರ ಮಧ್ಯಾಹ್ನದ ಹೊತ್ತಿಗೆ ಆಂಧ್ರಪ್ರದೇಶದ ಬಾಪಟ್ಲಾ ಮತ್ತು ವಿಶಾಖಪಟ್ಟಣಂ ಮಧ್ಯೆ ಹಾಗೂ ಯಾನಂ ಕರಾವಳಿಯ ಭಾಗದಲ್ಲಿ ಅಪ್ಪಳಿಸಲಿದೆ. ಆಂಧ್ರ ಹಾಗೂ ದಕ್ಷಿಣ ಒಡಿಶಾ ಕರಾವಳಿ ಪ್ರದೇಶಗಳಿಗೆ ಈಗಾಗಲೇ ಎಚ್ಚರಿಕೆಯನ್ನು ನೀಡಲಾಗಿದೆ. ಚಂಡಮಾರುತವು ವಾಯುವ್ಯ ದಿಕ್ಕಿನಲ್ಲಿ ಚಲಿಸುವುದರಿಂದ ಪಶ್ಚಿಮ ಬಂಗಾಳದ ಮೇಲೂ ತೀವ್ರ ಪರಿಣಾಮ ಬೀರಲಿದೆ. ಅ.27ರಿಂದಲೇ ಬಂಗಾಳ ಕರಾವಳಿಯಲ್ಲಿ ಬಿರುಗಾಳಿ ಬೀಸಲಿದ್ದು, ಅ.28-30ರವರೆಗೆ ಭಾರಿ ಮಳೆಯಾಗಲಿದೆ.
ಭಿಕರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಸಾರ್ವಜನಿಕ ಜೀವನ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆಯು ಮಲಪ್ಪುರಂ, ಕೋಝಿಕ್ಕೋಡ್ ಮತ್ತು ವಯನಾಡ್ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಪಾಲಕ್ಕಾಡ್, ಕಣ್ಣೂರು ಸೇರಿದಂತೆ 10 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ ಕಾಸರಗೋಡು ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಈಶಾನ್ಯ ಮಾನ್ಸೂನ್ ಚುರುಕಾಗಿರುವುದರಿಂದ ತಮಿಳುನಾಡಿನ ವಿವಿಧ ಭಾಗಗಳಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ. ವಿಶೇಷವಾಗಿ ನೀಲಗಿರಿ ಜಿಲ್ಲೆಯ ಬುರ್ಲಿಯಾರ್‌ನಲ್ಲಿ ಗರಿಷ್ಠ 25 ಸೆಂ.ಮೀ. ಮಳೆ ದಾಖಲಾಗಿದೆ. ದೇವಿಕಾಪುರಂನಲ್ಲಿ 20 ಸೆಂ.ಮೀ., ಕೆಲ್ ಕೋಟಗಿರಿ ಎಸ್ಟೇಟ್‌ನಲ್ಲಿ 20 ಸೆಂ.ಮೀ., ನೆಡುಂಗುಣಂನಲ್ಲಿ 18 ಸೆಂ.ಮೀ., ಕೂನೂರ್ ಪಿಟಿಒನಲ್ಲಿ 17 ಸೆಂ.ಮೀ., ಅಲಕರೈ ಎಸ್ಟೇಟ್‌ನಲ್ಲಿ 16 ಸೆಂ.ಮೀ. ಮಳೆ ಸುರಿದಿದೆ. ಪೂರ್ವ ಮತ್ತು ದಕ್ಷಿಣ ಭಾರತದ ಕರಾವಳಿ ರಾಜ್ಯಗಳಲ್ಲಿ ಪರಿಸ್ಥಿತಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ದುರಂತ ನಿರ್ವಹಣಾ ಪಡೆಗಳು ಹಾಗೂ ರಕ್ಷಣಾ ತಂಡಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸಜ್ಜುಗೊಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ