
ಗುಜರಾತ್: ಸೂರತ್‌ನ ಪೊಲೀಸ್ ಅಧಿಕಾರಿಗಳು 62 ವರ್ಷದ ಕೊಲೆ ಆರೋಪಿಯನ್ನ ಬಂಧಿಸಿದ್ದಾರೆ. ಈತನ ಬಂಧನವು ತುಂಬಾ ರೋಚಕವಾಗಿದ್ದು, ಬರೋಬ್ಬರಿ 26 ವರ್ಷಗಳಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ. ಈತ ಪೊಲೀಸರಿಗೆ ಹೇಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಅನ್ನೋದೇ ತುಂಬಾ ಇಂಟರೆಸ್ಟಿಂಗ್ ಆಗಿದೆ.
ಅದು 2000 ಇಸವಿ. ಗುಜರಾತ್‌ನ ಸೂರತ್‌ನಲ್ಲಿ ಕೊಲೆಯೊಂದು ನಡೆದಿತ್ತು. ಆ ಕೊಲೆಯ ಆರೋಪಿಯೇ ಈಗ ಬಂಧಿತ 62 ವರ್ಷದ ವೃದ್ಧ. ಈತನ ಹೆಸರು, ಗೋಪಾಲ್ ಮಾನ್ಕರ್. ಸೂರತ್‌ನ ಪಾಂಡೇಸಾರದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾಗ ಮತ್ತೊಬ್ಬ ಕಾರ್ಮಿಕನ ಜೊತೆ ವಾಗ್ವಾದಕ್ಕೆ ಇಳಿದು ಕೋಲಿನಿಂದ ಹಲ್ಲೆ ನಡೆಸಿ ಸಾಯಿಸಿದ್ದ. ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದ. ಪೊಲೀಸರು ಪ್ರಕರಣ ದಾಖಿಸಿಕೊಂಡು ತನಿಖೆ ಆರಂಭಿಸಿದ್ದರು. ಆದರೆ ಅಸಾಮಿ 26 ವರ್ಷಗಳಿಂದ ಪೊಲೀಸರಿಗೆ ಸಿಕ್ಕಿ ಬಿದ್ದಿರಲಿಲ್ಲ.
ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಬಲ್ಹಾವಾಡಾ ಠಾಣೆಯ ನಿಮ್ರಾಣಿ ಗ್ರಾಮದ ನಿವಾಸಿ ಆಗಿದ್ದ ಮಾನ್ಕರ್, ಪೊಲೀಸರಿಂದ ತಪ್ಪಿಸಿಕೊಳ್ಳಲು ಒಂದು ರಾಜ್ಯದಿಂದ ಇನ್ನೊಂದು ರಾಜ್ಯದಿಂದ ರಾಜ್ಯಕ್ಕೆ, ಒಂದು ನಗರದಿಂದ ಇನ್ನೊಂದು ನಗರಕ್ಕೆ ಪಲಾಯನ ಮಾಡುತ್ತಲೇ ಇದ್ದ. ಮಧ್ಯಪ್ರದೇಶದ ಬರ್ವಾನಿ, ಉಜ್ಜಯಿನಿ ಮತ್ತು ಇಂದೋರ್, ಮಹಾರಾಷ್ಟ್ರದ ನಾಸಿಕ್ ಸೇರಿದಂತೆ ಅನೇಕ ಕಡೆಗಳಲ್ಲಿ ಓಡಾಡುತ್ತಿದ್ದ. ಅಂತಿಮವಾಗಿ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನೆಲೆಸಿದ್ದ.
ಇನ್ನು, ಪೊಲೀಸರಿಗೆ ತನ್ನ ಗುರುತು ಸಿಗಬಾರದೆಂಬ ಕಾರಣಕ್ಕೆ ಕಾರ್ಮಿಕನಾಗಿ ಕೆಲಸಕ್ಕೆ ಹೋಗುತ್ತಿದ್ದ. ಎಲ್ಲರ ಜೊತೆಗೂ ಸಹಜವಾಗಿಯೇ ಇರುತ್ತಿದ್ದ. ಉದ್ದೇಶಪೂರ್ವಕವಾಗಿಯೇ ಆತ ಮೊಬೈಲ್ ಫೋನ್‌ಗಳನ್ನ ಬಳಸುತ್ತಿರಲಿಲ್ಲ. ಯಾರಿಗೂ ಫೋನ್ ಕೂಡ ಮಾಡುತ್ತಿರಲಿಲ್ಲ. ತನ್ನ ಸ್ವಂತ ಹಳ್ಳಿಗೆ ಕೂಡ ಹಿಂತಿರುಗಲಿಲ್ಲ. ಹೀಗಾಗಿ ಆತ ಎಲ್ಲಿದ್ದಾನೆ ಅನ್ನೋದನ್ನ ತಿಳಿಯಲು ಪೊಲೀಸರಿಗೆ ತುಂಬಾ ಕಷ್ಟಾಗಿತ್ತು.
ಇದೊಂದು ಗಂಭೀರ ಪ್ರಕರಣ ಆಗಿರೋದ್ರಿಂದ ಪೊಲೀಸರು, ಆರೋಪಿಯನ್ನ ಬಂಧಿಸಲು ತೀವ್ರ ಪರಿಶೀಲನೆ ನಡೆಸಿದ್ದರು. ಇದರ ಮಧ್ಯೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಖಡಕ್ ಆದೇಶವೊಂದು ಬಂದಿತ್ತು. ಕೊಲೆ, ದರೋಡೆ, ಡಕಾಯಿತಿ, ಮತ್ತು ವಂಚನೆಯಂತಹ ಅಪರಾಧಗಳಲ್ಲಿ ಭಾಗಿಯಾಗಿರುವ ವಾಂಟೆಡ್ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚಿಸಿದ್ದರು. ಜೊತೆಗೆ ಅದಕ್ಕಾಗಿ ಸ್ಥಳೀಯವಾಗಿ ತಂಡ ರಚಿಸಲು ಸೂಚನೆ ನೀಡಲಾಗಿತ್ತು. ಅಂದರೆ ದೀರ್ಘಕಾಲದಿಂದ ತಲೆಮರೆಸಿಕೊಂಡಿರುವ ಶಂಕಿತರ ಸ್ಥಳೀಯ ವಿಳಾಸಗಳು, ಸಂಬಂಧಿಕರು ಮತ್ತು ಸಂಭಾವ್ಯ ಸ್ಥಳಗಳನ್ನು ಪರಿಶೀಲಿಸುವ ಕಾರ್ಯ ನಡೆದಿತ್ತು.
ಹೀಗೆ ಪೊಲೀಸರು ಪ್ರಕರಣದ ಜಾಡು ಹಿಡಿದು ಆರೋಪಿಗಳ ಸುಳಿವಿಗಾಗಿ ಬಲೆ ಬೀಸಿದಾಗ ಪಿಸಿಬಿ ಹೆಡ್ ಕಾನ್ಸ್‌ಟೇಬಲ್ ಅಶೋಕ್‌ಭಾಯ್ ಲುನಿಗೆ ಮಾನ್ಕರ್ ನಾಸಿಕ್ ಜಿಲ್ಲೆಯ ಸೈಖೇಡಾದ ಗಂಗ್‌ನಗರದಲ್ಲಿ ವಾಸಿಸುವ ಬಗ್ಗೆ ಸುಳಿವು ಸಿಗುತ್ತದೆ. ಕೊನೆಗೆ ಪೊಲೀಸರು ತಾಂತ್ರಿಕ ಕಣ್ಗಾವಲು ಮತ್ತು ಮ್ಯಾನ್ ಪವರ್ ಬಳಸಿಕೊಂಡರು. ಆತನ ಸೋದರಿಯರು ಹಾಗೂ ಸೋದರಳಿಯಂದಿರ ಪತ್ತೆ ಹಚ್ಚಿ ಮಾಹಿತಿ ಸಂಗ್ರಹಿಸಲು ಬರೋಬ್ಬರಿ ಮೂರು ವರ್ಷಗಳು ಬೇಕಾಯಿತು ಎನ್ನಲಾಗಿದೆ.
ಮಾನ್ಕರ್ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಹಿರಿಯ ಪೊಲೀಸ್ ಅಧಿಕಾರಿಗಳ ಅನುಮತಿಯೊಂದಿಗೆ ಲಾಲಾಭಾಯ್‌ನ ಇಟ್ಟಿಗೆ ಗೂಡಿನ ಬಳಿ ಆತನನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಪಾಂಡೇಸಾರ ಪೊಲೀಸ್ ಠಾಣೆಗೆ ಕರೆದುಕೊಂಡು ಬರುವ ಪ್ರಕ್ರಿಯೆಗಳು ನಡೆಯುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ