ಮೋದಿ ನಾಯಕತ್ವಕ್ಕೆ ಬಿಜೆಪಿ ಉಘೇ: 100 ಕೋಟಿ ಲಸಿಕೆ, 80 ಕೋಟಿ ಜನರಿಗೆ ಉಚಿತ ಆಹಾರ!

By Kannadaprabha News  |  First Published Nov 8, 2021, 7:07 AM IST

* ಕೋವಿಡ್‌ ನಿರ್ವಹಣೆಗೂ ಮೆಚ್ಚುಗೆ

* ಮೋದಿಗೆ ನಾಯಕತ್ವಕ್ಕೆ ಬಿಜೆಪಿ ಉಘೇ

* 100 ಕೋಟಿ ಲಸಿಕೆ, 80 ಕೋಟಿ ಜನರಿಗೆ ಉಚಿತ ಆಹಾರ ವಿತರಣೆಗೆ ಪ್ರಶಂಸೆ

* ಪಕ್ಷದ ಕಾರ್ಯಕಾರಿಣಿಯಲ್ಲಿ ನಿರ್ಣಯ


ನವದೆಹಲಿ(ನ.08): ಕೋವಿಡ್‌ ಸಾಂಕ್ರಾಮಿಕ (Covid Crisis) ನಿರ್ವಹಣೆ, ಲಸಿಕೆ ಉತ್ಪಾದನೆ (Vaccine Production), ಲಸಿಕೆ ವಿತರಣೆಯಲ್ಲಿ ಇಡೀ ವಿಶ್ವವೇ ಅಚ್ಚರಿ ಪಡುವಂಥ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ (narendra Modi) ಮಾಡಿದ್ದಾರೆ ಎಂದು ಭಾನುವಾರ ನಡೆದ ಬಿಜೆಪಿ ಕಾರ್ಯಕಾರಿಣಿ (BJP national executive meeting) ಜೈಕಾರ ಹಾಕಿದೆ. ಈ ಕುರಿತು ಅದು ನಿರ್ಣಯವನ್ನೂ ಅಂಗೀಕರಿಸಿದೆ. ಅಲ್ಲದೆ ಅವರ ಸಾಧನೆಯನ್ನೇ ಮುಂಬರುವ ಚುನಾವಣೆಯಲ್ಲಿ ತನ್ನ ಪ್ರಮುಖ ಗೆಲುವಿನ ಅಸ್ತ್ರವಾಗಿ ಬಳಸಿಕೊಳ್ಳುವ ನಿರ್ಧಾರವನ್ನೂ ಕೈಗೊಂಡಿದೆ.

ಕಾರ್ಯಕಾರಿಣಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (BJP President JP Nadda) ಸೇರಿದಂತೆ ಹಲವು ನಾಯಕರು, ‘ಕೋವಿಡ್‌ ನಿರ್ವಹಣೆಯಲ್ಲಿ ದೇಶ ಅಭೂತಪೂರ್ವ ಸಾಧನೆ ಮಾಡಲು ನರೇಂದ್ರ ಮೋದಿ ಅವರ ನಾಯಕತ್ವವೇ ಕಾರಣ. ಅವರ ಸತತ ಕ್ರಮಗಳಿಂದಾಗಿಯೇ ಸೋಂಕಿನ ಪ್ರಮಾಣ ಮತ್ತು ಸಾವಿನ ಪ್ರಮಾಣ ಎರಡರಲ್ಲೂ ದೇಶ ನಿಯಂತ್ರಣ ಸಾಧಿಸಿತು. ಜೊತೆಗೆ ದೇಶೀಯವಾಗಿಯೇ ಲಸಿಕೆಯನ್ನು ತ್ವರಿತವಾಗಿ ಅಭಿವೃದ್ಧಿಪಡಿಸಲು ಮೋದಿ ಅವರು ಕೈಗೊಂಡ ಕ್ರಮಗಳು ಅತ್ಯಂತ ಫಲಪ್ರದವಾದವು. ಅಲ್ಲದೆ ಕೇವಲ 9 ತಿಂಗಳ ಅವಧಿಯಲ್ಲಿ 100 ಕೋಟಿ ಡೋಸ್‌ನಷ್ಟುಲಸಿಕೆ ವಿತರಣೆ ಮಾಡುವ ಮೂಲಕ ವಿಶ್ವದಲ್ಲೇ ಅತ್ಯಂತ ವೇಗವಾಗಿ, ಅತ್ಯಂತ ಹೆಚ್ಚಿನ ಜನರಿಗೆ ಲಸಿಕೆ ನೀಡಿದ ದಾಖಲೆಗೂ ಪಾತ್ರವಾಯಿತು. ಇನ್ನು ಕೋವಿಡ್‌ ಸಾಂಕ್ರಾಮಿಕದ ಅವಧಿಯಲ್ಲಿ 80 ಕೋಟಿ ಜನರಿಗೆ ಉಚಿತವಾಗಿ ಪಡಿತರ ವಿತರಿಸಿದ್ದು ಮೋದಿ ಅವರ ಅತ್ಯುತ್ತಮ ಆಡಳಿತಕ್ಕೆ ಸಾಕ್ಷಿ’ ಎಂದು ಹೇಳಿದರು.

Latest Videos

ಜೊತೆಗೆ ಡಿಜಿಟಲೀಕರಣ ಮತ್ತು ಪಾರದರ್ಶಕತೆ ಮೂಲಕ ಮೋದಿ ಸರ್ಕಾರ ಭ್ರಷ್ಟಾಚಾರ ರಹಿತ ಆಡಳಿತ (Corruption Free Governance) ನೀಡಿದೆ. ಕೇಂದ್ರ ಮತ್ತು ಸ್ಥಳೀಯ ಆಡಳಿತದ ಫಲವಾಗಿ ಮುಂಬರುವ 4 ರಾಜ್ಯಗಳ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ. ಮೋದಿ ಅವರಿಂದಾಗಿಯೇ ಇಂದು ದೇಶ ಮತ್ತು ವಿದೇಶಗಳ ಭಾರತೀಯರು, ಸರ್ಕಾರದ ಮೇಲೆ ವಿಶ್ವಾಸ ಇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದೇಶಗಳಲ್ಲಿ ಭಾರತದ ಇಮೇಜ್‌ ಹೆಚ್ಚಿಸುವಲ್ಲಿ ಮೋದಿ ಅವರ ಆಡಳಿತ ಪ್ರಮುಖ ಪಾತ್ರ ವಹಿಸಿದೆ. ಅಲ್ಲದೆ ಹವಾಮಾನ ಬದಲಾವಣೆ ವಿಷಯದಲ್ಲೂ ಮೋದಿ ಅವರು ಕೈಗೊಂಡ ಐತಿಹಾಸಿಕ ನಿರ್ಧಾರವು ವಿಶ್ವದ ಕಣ್ಣಲ್ಲಿ ಭಾರತದ ಕಡೆಗಿನ ಅಭಿಮಾನವನ್ನು ಹೆಚ್ಚಿಸಿದೆ ಎಂದು ನಾಯಕರು ಬಣ್ಣಿಸಿದ್ದಾರೆ.

ಬಿಜೆಪಿ ಕಾರ‍್ಯಕಾರಿಣಿಗೆ ಆನ್‌ಲೈನ್‌ನಲ್ಲೇ ಸಿಎಂ, ಬಿಎಸ್‌ವೈ ಹಾಜರು

ಭಾನುವಾರ ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಪಕ್ಷದ ರಾಜ್ಯ ಘಟಕದ ಅಪೇಕ್ಷಿತ ಮುಖಂಡರು ಬೆಂಗಳೂರಿನಿಂದ ವೆಬೆಕ್ಸ್‌ ಮೂಲಕ ಭಾಗವಹಿಸಿದ್ದರು.

ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಸೇರಿದ ಮುಖಂಡರು ಸಭೆಯ ಕಲಾಪದಲ್ಲಿ ಭಾಗಿಯಾದರು.

ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ ಮತ್ತು ಜಗದೀಶ್‌ ಶೆಟ್ಟರ್‌, ಸಚಿವರಾದ ಕೆ.ಎಸ್‌.ಈಶ್ವರಪ್ಪ, ಗೋವಿಂದ ಕಾರಜೋಳ, ಆರ್‌.ಅಶೋಕ್‌, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಂಸದ ಉಮೇಶ್‌ ಜಾಧವ್‌, ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ಕುಮಾರ್‌ ಸುರಾನಾ, ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್‌ ಅವರು ಪಾಲ್ಗೊಂಡಿದ್ದರು.

ಬಿಜೆಪಿಯಿಂದ ಸರ್ವಶ್ರೇಷ್ಠ ಫಲಿತಾಂಶದ ನಿರೀಕ್ಷೆ: ನಡ್ಡಾ

 

 

5 ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡುವ ವಿಶ್ವಾಸವಿದ್ದು, ಸರ್ವಶ್ರೇಷ್ಠ ಫಲಿತಾಂಶ ಇನ್ನಷ್ಟೇ ಹೊರಬರಬೇಕಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. ಈ ಮೂಲಕ ಪಂಚರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎಂಬ ಪರೋಕ್ಷ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾನುವಾರ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಮುಂದಿನ ಗುರಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು ಎಂದು ಸಭೆಯ ಬಳಿಕ ನಡ್ಡಾ ಭಾಷಣದ ಬಗ್ಗೆ ಸಚಿವ ಧರ್ಮೇಂದ್ರ ಪ್ರಧಾನ್‌ ವಿವರಿಸಿದರು.

ಇದೇ ವೇಳೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋತಿದ್ದರೂ ಸಾಧನೆ ಕಡಿಮೆಯೇನಿಲ್ಲ ಎಂದು ಸಮರ್ಥಿಸಿಕೊಂಡ ನಡ್ಡಾ, ‘2014ರ ಲೋಕಸಭೆ ಚುನಾವಣೆ, 2016ರ ವಿಧಾನಸಭೆ ಹಾಗೂ 2019ರ ಲೋಕಸಭೆ ಚುನಾವಣೆ ಹಾಗೂ 2021ರ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಗಳಿಸಿದ ಸ್ಥಾನ ಹಾಗೂ ಮತ ಗಳಿಕೆಯನ್ನು ತುಲನೆ ಮಾಡಿ. ಬಿಜೆಪಿ ಆ ರಾಜ್ಯದಲ್ಲಿ ಹೇಗೆ ಬೆಳೆದಿದೆ ಎಂದು ಗೊತ್ತಾಗುತ್ತದೆ’ ಎಂದೂ ನಡ್ಡಾ ಹೇಳಿದರು.

click me!