ಸಮೃದ್ಧ ಭಾರತಕ್ಕೆ ಸ್ವಾವಲಂಬನೆ ಅಗತ್ಯ : ಪ್ರಧಾನಿ ಮೋದಿ

Kannadaprabha News   | Kannada Prabha
Published : Aug 16, 2025, 05:29 AM IST
PM Modi Speech

ಸಾರಾಂಶ

ಪ್ರಸ್ತುತ ಜಾಗತಿಕವಾಗಿ ಆರ್ಥಿಕ ಸ್ವಾರ್ಥ ಹೆಚ್ಚುತ್ತಿದೆ. ಹೀಗಿರುವಾಗ ಸಮೃದ್ಧ ಭಾರತ ನಿರ್ಮಾಣಕ್ಕೆ ಯುದ್ಧವಿಮಾನ, ವಿದ್ಯುತ್‌ ಚಾಲಿತ ಕಾರುಗಳಿಂದ ಹಿಡಿದು ಕೃತಕಬುದ್ಧಿಮತ್ತೆ ತನಕ ಎಲ್ಲಾ ಕ್ಷೇತ್ರಗಳಲ್ಲಿ ಆತ್ಮನಿರ್ಭರರಾಗುವುದು ಅತ್ಯಗತ್ಯ

ನವದೆಹಲಿ : ಪ್ರಸ್ತುತ ಜಾಗತಿಕವಾಗಿ ಆರ್ಥಿಕ ಸ್ವಾರ್ಥ ಹೆಚ್ಚುತ್ತಿದೆ. ಹೀಗಿರುವಾಗ ಸಮೃದ್ಧ ಭಾರತ ನಿರ್ಮಾಣಕ್ಕೆ ಯುದ್ಧವಿಮಾನ, ವಿದ್ಯುತ್‌ ಚಾಲಿತ ಕಾರುಗಳಿಂದ ಹಿಡಿದು ಕೃತಕಬುದ್ಧಿಮತ್ತೆ ತನಕ ಎಲ್ಲಾ ಕ್ಷೇತ್ರಗಳಲ್ಲಿ ಆತ್ಮನಿರ್ಭರರಾಗುವುದು ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಕರೆ ನೀಡಿದ್ದಾರೆ.

79ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಮಾತನಾಡಿದ ಅವರು, ‘ದೇಶವು ಆಮದಿನ ಮೇಲೆ ಹೆಚ್ಚು ಅವಲಂಬಿತವಾಗದೆ ತನ್ನ ಕಾಲಿನ ಮೇಲೆ ತಾನು ನಿಲ್ಲಬೇಕು. ಸಮಸ್ಯೆಯಾದಾಗ ಅಳುವುದನ್ನು ಬಿಟ್ಟು ಧೈರ್ಯದಿಂದ ಎದ್ದುನಿಲ್ಲಬೇಕು’ಎಂದಿದ್ದಾರೆ. ಈ ಮೂಲಕ, ಭಾರತವನ್ನು ತೆರಿಗೆ ಅಸ್ತ್ರದಿಂದ ಬಗ್ಗಿಸಿ ತನ್ನ ತಾಳಕ್ಕೆ ತಕ್ಕಂತೆ ಕುಣಿಸಲು ನೋಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಪರೋಕ್ಷವಾಗಿ ಎದಿರೇಟು ನೀಡಿದ್ದಾರೆ.

ಸಮೃದ್ಧ ಭಾರತ ನಿರ್ಮಾಣ:

ಅಮೆರಿಕ ಹೇರಿರುವ ಶೇ.50ರಷ್ಟು ತೆರಿಗೆಯಿಂದ ದೇಶದ ಹಲವು ಕ್ಷೇತ್ರಗಳ ಮೇಲೆ ವಿಪರೀತ ಪರಿಣಾಮ ಬೀರುವ ಭಯದ ನಡುವೆಯೇ, ಭಾರತ ಅನ್ಯ ದೇಶಗಳ ಮೇಲೆ ಅತಿ ಹೆಚ್ಚು ಅವಲಂಬಿತವಾಗಿರುವ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸುವಂತೆ ಮೋದಿ ಹೇಳಿದ್ದಾರೆ. ‘ಸೆಮಿಕಂಡಕ್ಟರ್‌, ಸಾಮಾಜಿಕ ಮಾಧ್ಯಮ, ರಸಗೊಬ್ಬರ, ಔಷಧಿಗಳನ್ನು ಸ್ವದೇಶಿ, ಸ್ವಾವಲಂಬಿಯಾಗಿ ಉತ್ಪಾದಿಸಬೇಕು. ಅನೇಕರ ತ್ಯಾಗದಿಂದ ಸ್ವತಂತ್ರ ಭಾರತದ ಕನಸನ್ನು ನನಸಾಗಿಸಲು ಸಾಧ್ಯವಾದರೆ, ಅಸಂಖ್ಯಾತ ಜನರ ಕಠಿಣ ಪರಿಶ್ರಮ ಮತ್ತು ಸಂಕಲ್ಪ, ಸ್ವಾವಲಂಬನೆ ಮತ್ತು ವೋಕಲ್‌ ಫಾರ್‌ ಲೋಕಲ್‌(ಸ್ಥಳೀಯ ಉತ್ಪಾದನೆ ಉತ್ತೇಜನ) ಸೇರಿಕೊಂಡು ಸಮೃದ್ಧ ಭಾರತವನ್ನು ನಿರ್ಮಿಸಬಹುದು. ಇದರಿಂದ ವಿಶ್ವವನ್ನೇ ಬದಲಿಸಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಔಷಧದಲ್ಲಿ ಸಂಶೋಧನೆ:

‘ಈಗಾಗಲೇ ಭಾರತವು ಜಗತ್ತಿನ ಔಷಧಾಲಯ ಎಂದು ಕರೆಸಿಕೊಳ್ಳುತ್ತಿದೆ. ಆದರೆ ಇಷ್ಟಕ್ಕೇ ಸುಮ್ಮನಾಗದೆ, ನಮ್ಮದೇ ಆದ ಪೇಟೆಂಟ್‌ ಪಡೆಯಲು ಔಷಧಗಳ ಸಂಶೋಧನೆ ಮತ್ತು ಅಭಿವೃದ್ಧಿಯತ್ತ ಗಮನ ಕೊಡಬೇಕು. ರೋಗ-ರುಜಿನಗಳು ಉದ್ಭವವಾದಾಗ ಯಾವುದೇ ಅಡ್ಡಪರಿಣಾಮಗಳಿಲ್ಲದ ಮಾನವ ಸಂಕುಲಕ್ಕೆ ನೆರವಾಗಬಹುದಾದಂತಹ ಕಡಿಮೆ ಬೆಲೆಯ ಮತ್ತು ಪರಿಣಾಮಕಾರಿ ಔಷಧಗಳನ್ನು ಕಂಡುಹಿಡಿಯಬೇಕು’ ಎಂದು ಮೋದಿ ಹೇಳಿದ್ದಾರೆ.

ರಸಗೊಬ್ಬರ ಆಮದು ತಗ್ಗಿಸಿ:

ಕೃಷಿ ಪ್ರಧಾನವಾಗಿರುವ ಭಾರತವು ರಸಗೊಬ್ಬರಕ್ಕಾಗಿ ವಿದೇಶಗಳ ಮೇಲೆ ಅವಲಂಬಿತವಾಗಿರುವುದನ್ನು ಉಲ್ಲೇಖಿಸಿರುವ ಮೋದಿ, ‘ರಸಗೊಬ್ಬರಗಳನ್ನು ಕಡಿಮೆ ಬಳಸಿ. ಇದರಿಂದ ಮಣ್ಣಿನ ಫಲವತ್ತತೆ ನಾಶ ಕ್ಷೀಣಿಸುವುದಲ್ಲದೆ, ಅದರ ಆಮದಿನ ಮೇಲೆ ಅಪಾರ ವಿದೇಶಿ ವಿನಿಮಯವನ್ನು ಖರ್ಚು ಮಾಡುವುದು ತಪ್ಪುತ್ತದೆ’ ಎಂದು ಕಿವಿಮಾತು ಹೇಳಿದ್ದಾರೆ. ಜತೆಗೆ, ದೇಶದಲ್ಲೇ ರಸಗೊಬ್ಬರ ಉತ್ಪಾದನೆಯಲ್ಲಿ ಸಶಕ್ತರಾಗಲು ಯುವಕರು ಮತ್ತು ಕೈಗಾರಿಕೆಗಳಿಗೆ ಕರೆ ನೀಡಿದ್ದಾರೆ.

ಖನಿಜದಲ್ಲೂ ಸ್ವಾವಲಂಬಿ:

ತಂತ್ರಜ್ಞಾನ, ಶಸ್ತ್ರಾಸ್ತ್ರ, ಸೋಲಾರ್‌, ಚಿಪ್‌, ಇವಿ, ಸೇರಿದಂತೆ ಹಲವು ಕ್ಷೇತ್ರಗಳಿಗೆ ಅತ್ಯಗತ್ಯವಾದ ಖನಿಜಗಳ ವಿಷಯದಲ್ಲೂ ಭಾರತ ಸ್ವ ಅವಲಂಬನೆ ಸಾಧಿಸಬೇಕು ಎಂದಿರುವ ಮೋದಿ, ‘ಇಂದು ಇಡೀ ಜಗತ್ತು ನಿರ್ಣಾಯಕ ಖನಿಜಗಳ ಬಗ್ಗೆ ಜಾಗರೂಕವಾಗಿದೆ. ಜನರು ಅದರ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳತೊಡಗಿದ್ದಾರೆ. ಅದಕ್ಕಾಗಿಯೇ ನಾವು ನಿರ್ಣಾಯಕ ಮಿಷನ್‌ ಒಂದಕ್ಕೆ ಚಾಲನೆ ನೀಡಿದ್ದು, 1200ಕ್ಕೂ ಅಧಿಕ ಸ್ಥಳಗಳಲ್ಲಿ ಪರಿಶೋಧನೆ ನಡೆಯಲಿದೆ’ ಎಂದು ಘೋಷಿಸಿದ್ದಾರೆ. ಜತೆಗೆ, ‘ಇಂಧನಕ್ಕಾಗಿ ನಾವು ಬೇರೆ ದೇಶಗಳ ಮೇಲೆ ಅವಲಂಬಿರಾಗಿರದೇ ಇದ್ದಿದ್ದರೆ, ಅದರ ಖರೀದಿಗೆ ವ್ಯಯಿಸಿದ ಹಣವನ್ನು ಯುವಕರು, ಬಡವರು, ರೈತರು, ಹಳ್ಳಿಗಳ ಅಭಿವೃದ್ಧಿಗೆ ಬಳಸಬಹುದಿತ್ತು’ ಎಂದ ಮೋದಿ, ಇದರ ಸಾಕಾರಕ್ಕೀಗ ಶ್ರಮಿಸುತ್ತಿದ್ದೇವೆ ಎಂದಿದ್ದಾರೆ.

ರೈತರ ಹಿತರಕ್ಷಣೆಗೆ ಬದ್ಧ:

‘ರೈತರು, ಜಾನುವಾರು ಸಾಕಣಿಕೆದಾರರು, ಮೀನುಗಾರರ ಹಿತದೊಂದಿಗೆ ಭಾರತ ರಾಜಿ ಮಾಡಿಕೊಳ್ಳುವುದಿಲ್ಲ. ಅವರನ್ನು ಗುರಿಯಾಗಿಸಿ ವಿಧಿಸಲಾಗುವ ನೀತಿಗಳ ಎದುರು ಮೋದಿ ತಡೆಗೋಡೆಯಂತೆ ನಿಂತಿದ್ದಾರೆ. ಅವರೆಲ್ಲರ ಹಿತರಕ್ಷಣೆಗೆ ಬದ್ಧರಾಗಿದ್ದೇವೆ’ ಎಂದು ಪ್ರಧಾನಿ ಪುನರುಚ್ಚರಿಸಿದ್ದಾರೆ. ಅಮೆರಿಕ ತನ್ನ ಕೃಷಿ ಉತ್ಪನ್ನಗಳನ್ನು ಭಾರತದ ಮಾರುಕಟ್ಟೆಗಳಲ್ಲಿ ಸುರಿಯಲು ಅನುವು ಮಾಡಿಕೊಡುವಂತೆ ಮನವಿ ಮಾಡುತ್ತಿರುವ ಹೊತ್ತಿನಲ್ಲೇ, ಅದು ಸಾಧ್ಯವಿಲ್ಲ ಎಂದು ಮೋದಿ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ