
Independence day 2026: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಹತ್ರ ಬರ್ತಿದ್ದಂತೆ ರಾಷ್ಟ್ರ ರಾಜಧಾನಿ ದಿಲ್ಲಿ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ಎಲ್ಲಿ ನೋಡಿದ್ರೂ ಪೊಲೀಸ್ ಸರ್ಪಗಾವಲು, ಪ್ರತಿಯೊಂದು ಸ್ಥಳದಲ್ಲೂ, ರಸ್ತೆಯಲ್ಲೂ ಭಾರೀ ಭದ್ರತೆ ಏರ್ಪಡಿಸಿದ್ದಾರೆ. ಇತ್ತೀಚೆಗೆ ಪ್ರತಿಭಟನೆ, ಹಿಂಸಾಚಾರ ಉಂಟಾದ ಹಿನ್ನೆಲೆ ಸ್ವಾತಂತ್ರ್ಯೋತ್ಸವದ ದಿನದಂದು ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಕಾರಣಕ್ಕೆ ದೆಹಲಿ ಪೊಲೀಸರು ಗಸ್ತು, ವಾಹನ ತಪಾಸಣೆ, ಸೂಕ್ಷ್ಮ ಸ್ಥಳಗಳಲ್ಲಿ ಕಣ್ಗಾವಲನ್ನು ಚುರುಕುಗೊಳಿಸಿದ್ದಾರೆ.
ಈ ಬಗ್ಗೆ ಅಧಿಕಾರಿಗಳು ಮಾತನಾಡಿದ್ದು, ಎಲ್ಲಾ ಜಿಲ್ಲೆಗಳ ಪೊಲೀಸ್ ಸಿಬ್ಬಂದಿಯನ್ನು ರಸ್ತೆಗಿಳಿಸಲಾಗಿದ್ದು ಹಲವು ಕಡೆ ಹೆಚ್ಚುವರಿ ಚೆಕ್‌ಪೋಸ್ಟ್ ಹಾಕಿಸಿ ದೆಹಲಿ ಪ್ರವೇಶಿಸುವ ಪ್ರತಿಯೊಂದು ವಾಹನಗಳನ್ನ ತೀವ್ರ ತಪಾಸಣೆಗೊಳಪಡಿಸುತ್ತಿದ್ದೇವೆ. ಅನುಮಾನಾಸ್ಪದ ವ್ಯಕ್ತಿಗಳು, ವಾಹನಗಳನ್ನು ಪತ್ತೆಹಚ್ಚುವುದು, ಕ್ರಿಮಿನಲ್ ಹಿನ್ನೆಲೆಯುಳ್ಳವರ ಮೇಲೆ ನಿಗಾ ಇಡುವುದು ಹಾಗೂ ಸ್ವಾತಂತ್ರ್ಯ ದಿನಾಚರಣೆಗೆ ಬಿಗಿ ಭದ್ರತೆ ಒದಗಿಸುವುದೇ ನಮ್ಮ ಮುಖ್ಯ ಗುರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ದೆಹಲಿ ಡಿಸಿಪಿ ಅನಂತ್ ಮಿತ್ತಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಬಿಗಿ ಭದ್ರತಾ ವ್ಯವಸ್ಥೆಯ ಭಾಗವಾಗಿ ಎಲ್ಲಾ ಹಂತದ ಅಧಿಕಾರಿಗಳು ಫೀಲ್ಡ್‌ನಲ್ಲಿದ್ದಾರೆ ಎಂದು ಹೇಳಿದ್ದಾರೆ. ದಕ್ಷಿಣ ದೆಹಲಿಯ ಹಲವು ಕಡೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ, ಅನುಮಾನಾಸ್ಪದ ವ್ಯಕ್ತಿಗಳು ಮತ್ತು ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಆಗಸ್ಟ್ 15ರ ಸೂಕ್ಷ್ಮತೆ ಗಮನದಲ್ಲಿಟ್ಟುಕೊಂಡು, ಎಲ್ಲಾ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾರೆ ಎಂದು ಮಿತ್ತಲ್ ತಿಳಿಸಿದ್ದಾರೆ.
ದಕ್ಷಿಣ ವಲಯದ ಜಂಟಿ ಪೊಲೀಸ್ ಆಯುಕ್ತ ವಿಜಯ್ ಕುಮಾರ್ ಅವರ ಪ್ರಕಾರ, ಈ ವಲಯದಲ್ಲಿ ಮಹಿಳಾ ಸಿಬ್ಬಂದಿ ಸೇರಿದಂತೆ 1,600ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಗಡಿ, ಪ್ರಮುಖ ಮತ್ತು ಸಣ್ಣಪುಟ್ಟ ಪಿಕೆಟ್‌ಗಳು ಸೇರಿದಂತೆ ಸುಮಾರು 60 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಪ್ರಮುಖ ಪಿಕೆಟ್‌ಗಳಲ್ಲಿ ಟ್ರಾಫಿಕ್ ಪೊಲೀಸರು, ಪಿಸಿಆರ್ ಮತ್ತು ಸ್ಥಳೀಯ ಪೊಲೀಸರು ಒಟ್ಟಾಗಿ ತಪಾಸಣೆ ನಡೆಸುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಪೊಲೀಸ್ ತಂಡಗಳು ಕಾರು, ಬೈಕ್‌ಗಳನ್ನು ಪರಿಶೀಲಿಸುತ್ತಿದ್ದು, ಪಾರ್ಕಿಂಗ್ ಸ್ಥಳಗಳ ಮೇಲೂ ನಿಗಾ ಇಟ್ಟಿವೆ. 'ನಮ್ಮ ಮುಖ್ಯ ಗಮನ ಕ್ರಿಮಿನಲ್ ಹಿನ್ನೆಲೆಯುಳ್ಳವರ ಮೇಲಿದೆ. ನಾವು ಅವರನ್ನು, ಜೊತೆಗೆ ಅನುಮಾನಾಸ್ಪದ ವಾಹನಗಳು ಮತ್ತು ಪಾರ್ಕಿಂಗ್ ಏರಿಯಾಗಳನ್ನು ಪರಿಶೀಲಿಸುತ್ತೇವೆ' ಎಂದು ಕುಮಾರ್ ಹೇಳಿದ್ದಾರೆ.
ಭದ್ರತಾ ವ್ಯವಸ್ಥೆಯ ಭಾಗವಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಗಸ್ತು ಮತ್ತು ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ ನಾವು ಎಲ್ಲ ರೀತಿಯ ಭದ್ರತಾ ವ್ಯವಸ್ಥೆ ಮಾಡಿಕೊಂಡಿದ್ದೇವೆ. ನಮ್ಮದು ಬಹುಹಂತದ ಭದ್ರತಾ ವ್ಯವಸ್ಥೆ' ಎಂದು ಜಂಟಿ ಪೊಲೀಸ್ ಆಯುಕ್ತ ಮಧುರ್ ವರ್ಮಾ ತಿಳಿಸಿದ್ದಾರೆ. ಸ್ಟೇಷನ್ ಹೌಸ್ ಆಫೀಸರ್‌ಗಳು (SHO) ಮತ್ತು ಹಿರಿಯ ಅಧಿಕಾರಿಗಳು ತಮ್ಮ ತಮ್ಮ ಏರಿಯಾಗಳಲ್ಲಿ ಗಸ್ತು ತಿರುಗಿ ತಪಾಸಣೆ ನಡೆಸಲಿದ್ದಾರೆ.
ಪೂರ್ವ ದೆಹಲಿಯಲ್ಲೂ ಹೈ ಅಲರ್ಟ್
ಪೂರ್ವ ದೆಹಲಿಯಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ವಾತಂತ್ರ್ಯೋತ್ಸವದ ಭದ್ರತಾ ಸಿದ್ಧತೆಗಳಿಗಾಗಿ ಫೀಲ್ಡ್‌ನಲ್ಲಿದ್ದಾರೆ ಎಂದು ಡಿಸಿಪಿ ರಾಜೀವ್ ಕುಮಾರ್ ಹೇಳಿದ್ದಾರೆ. ತೀವ್ರ ತಪಾಸಣೆ ನಡೆಯುತ್ತಿದ್ದು, ಸಮಾಜಘಾತುಕ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ಡ್ರೋನ್‌ಗಳ ಮೂಲಕ ಕಣ್ಗಾವಲು
ಪೊಲೀಸರು ಕಣ್ಗಾವಲಿಗಾಗಿ ಡ್ರೋನ್‌ಗಳನ್ನೂ ಬಳಸುತ್ತಿದ್ದಾರೆ. ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಆಕಾಶದಿಂದಲೇ ನಿಗಾ ಇಡಲು ಡ್ರೋನ್‌ಗಳು ಸಹಾಯ ಮಾಡುತ್ತವೆ.
ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಹಲವು ಭಾಗಗಳಲ್ಲಿ ಜನ ಮತ್ತು ವಾಹನ ಸಂಚಾರ ಹೆಚ್ಚಾಗುವುದರಿಂದ ಈ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ಆರಂಭದಲ್ಲೇ ಪತ್ತೆಹಚ್ಚಲು ಪೊಲೀಸರು ನೆಲಮಟ್ಟದ ಕಣ್ಗಾವಲು ಮತ್ತು ತಪಾಸಣೆಯನ್ನು ಹೆಚ್ಚಿಸಿದ್ದಾರೆ.
ಈ ಬಹುಹಂತದ ಭದ್ರತೆಯಲ್ಲಿ ಸ್ಥಳೀಯ ಪೊಲೀಸರು, ಸಂಚಾರಿ ಸಿಬ್ಬಂದಿ ಮತ್ತು ಇತರ ಭದ್ರತಾ ತಂಡಗಳು ಚೆಕ್‌ಪೋಸ್ಟ್‌ಗಳು ಮತ್ತು ಸೂಕ್ಷ್ಮ ಸ್ಥಳಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ. ಗಡಿ ಪ್ರದೇಶಗಳು ಮತ್ತು ನಗರದ ಪ್ರಮುಖ ಎಂಟ್ರಿ-ಎಕ್ಸಿಟ್ ಪಾಯಿಂಟ್‌ಗಳ ಮೇಲೂ ಹದ್ದಿನ ಕಣ್ಣಿಡಲಾಗಿದೆ.
ಆಗಸ್ಟ್ 15ರಂದು ಶಾಂತಿಯುತವಾಗಿ ಸ್ವಾತಂತ್ರ್ಯೋತ್ಸವ ಆಚರಿಸಲು ಅನುಕೂಲವಾಗುವಂತೆ ಮುನ್ನೆಚ್ಚರಿಕೆ ಭದ್ರತೆ, ನಿರಂತರ ಗಸ್ತು ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವುದೇ ನಮ್ಮ ಆದ್ಯತೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ