
ನವದೆಹಲಿ(ಸೆ.19): ಸರ್ಕಾರದ ವೆಬ್ಸೈಟ್ಗಳು, ಪ್ರಧಾನಿಯಂಥ ಗಣ್ಯರ ಕಂಪ್ಯೂಟರ್ ವ್ಯವಸ್ಥೆ, ನಾಗರಿಕರ ಸೈಬರ್ ದತ್ತಾಂಶಗಳು ಹಾಗೂ ಇತರ ಕಂಪ್ಯೂಟರ್ ವ್ಯವಸ್ಥೆಗಳನ್ನು ನೋಡಿಕೊಳ್ಳುವ ನ್ಯಾಷನಲ್ ಇನ್ಫರ್ಮೆಟಿಕ್ಸ್ ಸೆಂಟರ್‌ನ (ಎನ್ಐಸಿ) 100 ಕಂಪ್ಯೂಟರ್ಗಳ ಮೇಲೆ ಸೈಬರ್ ದಾಳಿ ನಡೆದಿದೆ. ವೈರಸ್ ಬಂದಿದ್ದು ಬೆಂಗಳೂರಿನ ಐಟಿ ಕಂಪನಿಯೊಂದರಿಂದ ಎಂದು ಪತ್ತೆಯಾಗಿದೆ.
ವೈರಸ್ ದಾಳಿ ಆಗುತ್ತಿದ್ದಂತೆಯೇ ದಿಲ್ಲಿ ಪೊಲೀಸರಿಗೆ ಎನ್ಐಸಿ ದೂರು ನೀಡಿತು. ದೂರಿನ ಅನ್ವಯ ದಿಲ್ಲಿ ಪೊಲೀಸ್ ವಿಶೇಷ ಘಟಕವು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದೆ. ಆರಂಭಿಕ ತನಿಖೆಯ ಸಂದರ್ಭದಲ್ಲಿ, ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಕಂಪನಿಯೊಂದರಿಂದ ಎನ್ಐಸಿಗೆ ಇ-ಮೇಲ್ ರವಾನೆಯಾಗಿದೆ. ಈ ಇ-ಮೇಲ್ನಲ್ಲಿನ ವೈರಸ್ನಿಂದ ಎನ್ಐಸಿಯ ಕಂಪ್ಯೂಟರ್ಗಳು ಬಾಧಿತವಾಗಿರಬಹುದು ಎಂದು ತಿಳಿದುಬಂದಿದೆ.
ಎನ್ಐಸಿಯ ಉದ್ಯೋಗಿಯೊಬ್ಬರು ಈ ಶಂಕಾಸ್ಪದ ಇ-ಮೇಲ್ ಸ್ವೀಕರಿಸಿದ್ದಾರೆ. ಆದರೆ ಅವರಿಗೆ ಇ-ಮೇಲ್ ಸರಿಯಾಗಿ ಓಪನ್ ಆಗುತ್ತಿರಲಿಲ್ಲ. ಏನೋ ಶಂಕಾಸ್ಪದ ಚಟುವಟಿಕೆ ಇದರಲ್ಲಿದೆ ಎಂದು ಭಾವಿಸಿದ ಅವರು ಇತರ ಸಹೋದ್ಯೋಗಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಶಂಕಾಸ್ಪದ ಇ-ಮೇಲ್ ತಮಗಷ್ಟೇ ಅಲ್ಲ, ತಮ್ಮ ಸಹೋದ್ಯೋಗಿಗಳಿಗೂ ಬಂದಿದ್ದು, ಅವರ ಕಂಪ್ಯೂಟರ್ಗಳೂ ಬಾಧಿತವಾಗಿವೆ ಎಂದು ಅವರ ಅರಿವಿಗೆ ಬಂದಿದೆ. ಕೂಡಲೇ ಎನ್ಐಸಿ ಎಚ್ಚರಿಕೆ ಸಂದೇಶವನ್ನು ಎಲ್ಲ ಉದ್ಯೋಗಿಗಳಿಗೂ ನೀಡಿ, ಪೊಲೀಸರ ಗಮನಕ್ಕೆ ಈ ವಿಷಯ ತಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಶಂಕಾಸ್ಪದ ಇ-ಮೇಲ್ ಅನ್ನು ಯಾವ್ಯಾವ ಕಂಪ್ಯೂಟರ್ನಲ್ಲಿ ತೆರೆಯಲಾಗಿದೆಯೋ ಆ ಕಂಪ್ಯೂಟರ್ಗಳು ಬಾಧಿತವಾಗಿವೆ. ಇದರ ಮೂಲ ಹುಡುಕಹೊರಟಾಗ ಇ-ಮೇಲ್ ರವಾನೆ ಆಗಿರುವುದು ಬೆಂಗಳೂರು ಐಟಿ ಕಂಪನಿಯೊಂದರಿಂದ ಎಂದು ಗೊತ್ತಾಗಿದೆ.
ಭಾರತದ ಭದ್ರತೆ, ನಾಗರಿಕರು, ಪ್ರಧಾನಿ, ರಾಷ್ಟ್ರೀಯ ಭದ್ರತಾ ಸಲಹೆಗಾರರು, ಗೃಹ ಸಚಿವರು ಹಾಗೂ ಸರ್ಕಾರ ಪ್ರಮುಖರ ದತ್ತಾಂಶಗಳನ್ನು ಎನ್ಐಸಿಯ ಸೈಬರ್ ಹಬ್ ನೋಡಿಕೊಳ್ಳುತ್ತದೆ. ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲೂ ಇ-ಆಡಳಿತದ ಜಾರಿಗೆ ನೆರವು ನೀಡುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ