ಉಗ್ರರ ಒಳನುಸುಳಿಸಲು ಗಡಿ ಬೇಲಿ ಕೆಳಗೆ ಸುರಂಗ!| ಪಾಕಿಸ್ತಾನದ ಮತ್ತೊಂದು ದುಷ್ಟಸಂಚು ಬೆಳಕಿಗೆ| ಅನುಮಾನಗೊಂಡು ಮಣ್ಣು ಬಗೆದಾಗ ಪತ್ತೆ
ಜಮ್ಮು(ಆ.30): ಕಾಶ್ಮೀರದಲ್ಲಿ ಅಶಾಂತಿಗೆ ಕಾರಣವಾಗಿರುವ ಉಗ್ರರ ಹತ್ಯೆ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ಮುಂದುವರಿಸಿರುವಾಗಲೇ, ಕಣಿವೆ ರಾಜ್ಯಕ್ಕೆ ಮತ್ತಷ್ಟುಭಯೋತ್ಪಾದಕರನ್ನು ನುಸುಳಿಸಲು ಪಾಕಿಸ್ತಾನ ಸುರಂಗದ ಮೊರೆ ಹೋಗಿರುವ ಸಂಗತಿ ಬೆಳಕಿಗೆ ಬಂದಿದೆ. ಅಂತಾರಾಷ್ಟ್ರೀಯ ಗಡಿ ಬೇಲಿಯ ಕೆಳಭಾಗದಲ್ಲಿ ಪಾಕಿಸ್ತಾನಿ ಉಗ್ರರು ನಿರ್ಮಿಸಿದ್ದ ಸುರಂಗವೊಂದನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಪಾಕಿಸ್ತಾನದ ಈ ದುಷ್ಟಸಂಚಿನಿಂದ ಎಚ್ಚೆತ್ತಿರುವ ಬಿಎಸ್‌ಎಫ್, ಭಾರಿ ಸಂಖ್ಯೆಯಲ್ಲಿ ಭಾರತಕ್ಕೆ ಉಗ್ರರನ್ನು ಅಟ್ಟಲು ಹಾಗೂ ಮಾದಕ ವಸ್ತು ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಣೆ ಮಾಡಲು ಇನ್ನಷ್ಟುಸುರಂಗಗಳನ್ನು ಏನಾದರೂ ತೋಡಲಾಗಿದೆಯೇ ಎಂಬುದನ್ನು ಶೋಧಿಸಲು ಬೃಹತ್ ಪ್ರಮಾಣದ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
undefined
ಚೀನಾ ಪಾಲ್ಗೊಳ್ಳುವ ರಷ್ಯಾದ ಸಮರಾಭ್ಯಾಸಕ್ಕೆ ಭಾರತ ಗೈರು!
ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿರುವ ಜಮ್ಮುವಿನ ಸಾಂಬಾ ವಲಯದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಈ ಪ್ರದೇಶದಲ್ಲಿ ಬಿಎಸ್‌ಎಫ್ ಯೋಧರು ಗುರುವಾರ ಪಹರೆ ನಡೆಸುತ್ತಿದ್ದ ವೇಳೆ ಕೆಲ ಸ್ಥಳದಲ್ಲಿ ಮಣ್ಣು ಕುಸಿದಿರುವುದು ಗಮನಕ್ಕೆ ಬಂದಿದೆ. ಅನುಮಾನಗೊಂಡ ಯೋಧರು, ಯಂತ್ರಗಳ ಮೂಲಕ ಸ್ಥಳದಲ್ಲಿ ಮಣ್ಣು ಹೊರ ತೆಗೆದಾಗ ಸುರಂಗ ಪತ್ತೆಯಾಗಿದೆ. ಈ ಸುರಂಗವು ಭಾರತ ಗಡಿ ಬೇಲಿಯಿಂದ ಕೇವಲ 50 ಮೀಟರ್ ದೂರದಲ್ಲಿದ್ದು, 20 ಮೀಟರ್ ಉದ್ದ ಹೊಂದಿದೆ. 25 ಅಡಿಯಷ್ಟುಆಳದ್ದಾಗಿದ್ದು ಇನ್ನೂ ನಿರ್ಮಾಣ ಹಂತದಲ್ಲಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿವರವಾಗಿ ಪರಿಶೀಲನೆ ನಡೆಸಿದಾಗ ಸುರಂಗದ ಬಾಯಿಗೆ ಪಾಕಿಸ್ತಾನ ಗುರುತು ಹೊಂದಿದ್ದ 8-10 ಪ್ಲಾಸ್ಟಿಕ್ ಮರಳಿನ ಚೀಲಗಳನ್ನು ತುಂಬಿದ್ದು ಕಂಡುಬಂದಿದೆ. ಈ ಚೀಲಗಳ ಮೇಲೆ ಕರಾಚಿ ಹಾಗೂ ಶಾಕರ್‌ಗಢ ಎಂದು ಬರೆಯಲಾಗಿದೆ. ಈ ಸುರಂಗದಿಂದ ಪಾಕಿಸ್ತಾನದ ಗಡಿ ನೆಲೆ ‘ಗುಲ್ಜಾರ್’ ಕೇವಲ 700 ಮೀಟರ್ ದೂರದಲ್ಲಿದೆ.
ಗಣಪತಿ ವಿಸರ್ಜನೆ: ಹಿಂದೂ ಹಬ್ಬ ಆಚರಿಸಿದ್ದಕ್ಕೆ ಶಾರೂಖ್ ಟ್ರೋಲ್
ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಒಳನುಸುಳುವಿಕೆ ತಡೆ ಪಡೆಗೆ ಕಣ್ಗಾವಲನ್ನು ಇನ್ನಷ್ಟುತೀವ್ರಗೊಳಿಸುವಂತೆ, ಯಾವುದೇ ಲೋಪಕ್ಕೆ ಅವಕಾಶ ನೀಡದಂತೆ ಬಿಎಸ್‌ಎಫ್‌ನ ನೂತನ ಮುಖ್ಯಸ್ಥ ರಾಕೇಶ್ ಅಸ್ಥಾನಾ ಸೂಚಿಸಿದ್ದಾರೆ. ಅಲ್ಲದೆ ಗಡಿ ಪ್ರದೇಶದಲ್ಲಿ ಉಗ್ರರ ಒಳನುಸುಳುವಿಕೆಗಾಗಿ ಪಾಕ್ ನಿರ್ಮಿಸಿರಬಹುದಾದ ಇಂಥ ಸುರಂಗಗಳ ಪತ್ತೆಗೆ ಬಿಎಸ್‌ಎಫ್ ಶೋಧ ಕಾರ್ಯ ಆರಂಭಿಸಿದೆ.