6 ದೇಶಗಳಲ್ಲಿ ಕೊರೋನಾದ 2ನೇ ಅಲೆ, 10 ರಾಜ್ಯಗಳಲ್ಲೂ ಆತಂಕ..!

By Kannadaprabha NewsFirst Published Sep 11, 2020, 7:31 AM IST
Highlights

ದೇಶದ 20 ಪ್ರಮುಖ ಕೊರೋನಾಪೀಡಿತ ರಾಜ್ಯಗಳ ಪೈಕಿ 10ರಲ್ಲಿ 2ನೇ ಸುತ್ತಿನ ಲಕ್ಷಣ ಕಂಡುಬಂದಿದೆ. ನಮ್ಮ ದೇಶ ಮಾತ್ರವಲ್ಲ, ವಿದೇಶಗಳಲ್ಲೂ ಕೊರೋನಾ ಎರಡನೇ ಹಂತದಲ್ಲಿ ಕೊರೋನಾ ವಕ್ಕರಿಸಿದೆಯಾ ಎನ್ನುವ ಅನುಮಾನ ಶುರುವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ(ಸೆ.11): ಕೊರೋನಾ ವೈರಸ್‌ 2ನೇ ಸುತ್ತಿನ ಅಬ್ಬರ ಕರ್ನಾಟಕ ಮಾತ್ರವೇ ಅಲ್ಲ, ಹಲವು ರಾಜ್ಯ ಹಾಗೂ ಕೆಲವು ದೇಶಗಳಲ್ಲೂ ಇದೇ ರೀತಿಯ ಲಕ್ಷಣ ಕಂಡುಬಂದಿದೆ.

ಮಹಾರಾಷ್ಟ್ರ, ದೆಹಲಿ, ಆಂಧ್ರ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೊರೋನಾ 2ನೇ ಸುತ್ತಿನಲ್ಲಿ ಲಗ್ಗೆ ಇಟ್ಟಿದೆ. ಫ್ರಾನ್ಸ್‌, ಸ್ಪೇನ್‌, ಬ್ರಿಟನ್‌, ಇಸ್ರೇಲ್‌ನಲ್ಲೂ ಇದೇ ರೀತಿ ಆಗುತ್ತಿದೆ. ಆದರೆ ಮೊದಲ ಬಾರಿ ಕೊರೋನಾ ಲಗ್ಗೆ ಇಟ್ಟಾಗ ಅದನ್ನು ನಿಯಂತ್ರಿಸಲು ಪರದಾಡಿದ್ದ ರಾಜ್ಯ- ದೇಶಗಳು ಸರ್ವಸಜ್ಜಿತವಾಗಿ ಕೊರೋನಾವನ್ನು ಹಿಮ್ಮೆಟ್ಟಿಸುವ ಕೆಲಸ ಮಾಡುತ್ತಿವೆ.

ಕೆಲ ವರದಿಗಳ ಪ್ರಕಾರ, ದೇಶದ 20 ಪ್ರಮುಖ ಕೊರೋನಾಪೀಡಿತ ರಾಜ್ಯಗಳ ಪೈಕಿ 10ರಲ್ಲಿ 2ನೇ ಸುತ್ತಿನ ಲಕ್ಷಣ ಕಂಡುಬಂದಿದೆ. ದೇಶದಲ್ಲೇ ಅತಿ ಹೆಚ್ಚು ಕೊರೋನಾಗೆ ತುತ್ತಾಗಿರುವ ರಾಜ್ಯವಾಗಿರುವ ಮಹಾರಾಷ್ಟ್ರದಲ್ಲಿ ಆರಂಭದಲ್ಲಿ 14 ಸಾವಿರ ಕೇಸುಗಳು ನಿತ್ಯ ಪತ್ತೆಯಾಗುತ್ತಿದ್ದವು. ಬಳಿಕ ಅವು ಏಕಾಏಕಿ 11 ಸಾವಿರಕ್ಕಿಂತ ಕೆಳಕ್ಕೆ ಬಂದಿದ್ದವು. ಈಗ 20 ಸಾವಿರದ ಗಡಿ ದಾಟಿದೆ.

ಕೊರೋನಾ ವಾರಿಯರ್ಸ್‌ಗೆ ಸಂದ ಕೆಂಪೇಗೌಡ ಪ್ರಶಸ್ತಿ, ಅಪಸ್ವರ ಸಲ್ಲ

ಆಂಧ್ರಪ್ರದೇಶದಲ್ಲಿ ದಿನವೊಂದಕ್ಕೆ 9800ಕ್ಕೂ ಅಧಿಕ ಪ್ರಕರಣಗಳು ಆಗಸ್ಟ್‌ ಮಧ್ಯಭಾಗದಲ್ಲಿ ಕಂಡುಬಂದಿದ್ದವು. ಆಗಸ್ಟ್‌ ಅಂತ್ಯದಲ್ಲಿ ದೈನಂದಿನ ಸೋಂಕು 8000ಕ್ಕಿಂತ ಕೆಳಕ್ಕೆ ಬಂದಿತ್ತು. ಆದರೆ ಈಗ ಏಕಾಏಕಿ ಏರಿಕೆ ಕಂಡು 10 ಸಾವಿರದ ಗಡಿ ದಾಟಿವೆ. ಅಸ್ಸಾಂನಲ್ಲಿ 2000ದಿಂದ 1500ಕ್ಕೆ ಇಳಿಕೆ ಕಂಡಿದ್ದ ಸೋಂಕಿತರ ಸಂಖ್ಯೆ ಮತ್ತೆ 2000ಕ್ಕಿಂತ ಅಧಿಕ ಪ್ರಮಾಣದಲ್ಲಿ ಪತ್ತೆಯಾಗುತ್ತಿವೆ. ಛತ್ತೀಸ್‌ಗಢದಲ್ಲಿ 1000ದಿಂದ 500ಕ್ಕೆ ಕುಸಿದಿದ್ದ ಪ್ರಕರಣಗಳು ಈಗ 1400ಕ್ಕಿಂತ ಅಧಿಕವಾಗಿ ಕಂಡುಬರುತ್ತಿವೆ. ದೆಹಲಿಯಲ್ಲಿ 3800ರಿಂದ 1000ಕ್ಕೆ ಇಳಿದು 4000ಕ್ಕೆ ಏರಿಕೆಯಾಗಿವೆ. ಕೇರಳದಲ್ಲಿದ್ದ 1200ರಷ್ಟಿದ್ದ ಕೇಸ್‌, ಈಗ ಡಬಲ್‌ ಆಗಿ 2500ರ ಗಡಿ ದಾಟಿವೆ. ಪಂಜಾಬ್‌ನಲ್ಲಿ 1200ರಿಂದ 1700ಕ್ಕೆ, ತೆಲಂಗಾಣದಲ್ಲಿ 1500ರಿಂದ 3000ಕ್ಕೆ, ಉತ್ತರಪ್ರದೇಶದಲ್ಲಿ 4500ರಿಂದ 6000ಕ್ಕೆ ಹೆಚ್ಚಳವಾಗಿವೆ.

ಇನ್ನು ಜಾಗತಿಕವಾಗಿ ಫ್ರಾನ್ಸ್‌ನಲ್ಲಿ ಕೊರೋನಾ ವೈರಸ್‌ ಮಾಚ್‌ರ್‍ನಲ್ಲಿ ತುತ್ತತುದಿಗೆ ತಲುಪಿ 7 ಸಾವಿರ ಪ್ರಕರಣಗಳು ವರದಿಯಾಗಿದ್ದವು. ಬಳಿಕ ಬಹುತೇಕ ಕೊರೋನಾ ನಿಯಂತ್ರಣಕ್ಕೆ ಬಂದಿತ್ತು. ನಿತ್ಯ ಪ್ರಕರಣಗಳ ಸಂಖ್ಯೆ 1000ಕ್ಕೆ ಇಳಿದಿತ್ತು. ಆದರೆ ಲಾಕ್‌ಡೌನ್‌ ತೆರವಾದ ಬಳಿಕ ದೈನಂದಿನ ಪ್ರಕರಣಗಳ ಸಂಖ್ಯೆ 8900ರವರೆಗೂ ತಲುಪಿದೆ.

ಸ್ಪೇನ್‌ನಲ್ಲಿ 10800ರಿಂದ 200ಕ್ಕೆ ಇಳಿದಿದ್ದ ಪ್ರಕರಣಗಳು ಈಗ 8800ಕ್ಕೆ ಹೆಚ್ಚಳವಾಗಿವೆ. ಬ್ರಿಟನ್‌ನಲ್ಲಿ 7 ಸಾವಿರದಿಂದ 500ಕ್ಕೆ ಇಳಿದಿದ್ದ ಪ್ರಕರಣಗಳು ಈಗ 3 ಸಾವಿರದವರೆಗೂ ಮುಟ್ಟಿವೆ. ಇಸ್ರೇಲ್‌ನಲ್ಲಿ 1000ಕ್ಕೆ ಕುಸಿದಿದ್ದ ಪ್ರಕರಣಗಳು ಈಗ 3500ರ ಗಡಿ ದಾಟಿವೆ.
 

click me!