ಡೆಲ್ಲಿ ಮಂಜು
ನವದೆಹಲಿ(ಸೆ. 10) ಕೋವಿಡ್ ಸಂಕಷ್ಟ ಕಾಲದಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಸಿ ಮುಂಗಾರು ಅಧಿವೇಶನವನ್ನು ನಡೆಸುವ ಮೂಲಕ
ಪ್ರಜಾಪ್ರಭುತ್ವ ಹಾಗು ಸಂವಿಧಾನದ ವಿಧಿ-ವಿಧಾನಗಳಿಗೆ ಹೊಸ ರೂಪ ನೀಡಲಾಗುತ್ತದೆ. ಡಿಜಿಟಲ್ ಆ್ಯಪ್ ಮೂಲಕ ಸಂಸದರ ಹಾಜರಾತಿ, ಕೋವಿಡ್ ಟೆಸ್ಟ್ ಮಾಡಿಸಿಕೊಂಡೆ ಸಂಸದರು ಸಂಸತ್ತು ಅಧಿವೇಶನ ಪ್ರವೇಶ ಮಾಡಬೇಕಾಗುತ್ತದೆ. ಇವು ಈ ಬಾರಿಯ ವಿಶೇಷಗಳು.
ಈ ಮುಂಗಾರು ಅಧಿವೇಶ ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ. ಸೆಪ್ಟೆಂಬರ್ 14 ರಿಂದ ಆರಂಭವಾಗಲಿರುವ ಸಂಸತ್ತಿನ ಅಧಿವೇಶನ18 ದಿನಗಳ ಕಾಲ ಬಿಡುವಿಲ್ಲದೆ ನಡೆಯಲಿದೆ.
ಮೊದಲ ದಿನ ಲೋಕಸಭೆಯಿಂದ ಆರಂಭವಾಗಲಿರುವ ಅಧಿವೇಶನ, ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಪಾಳಿಗಳಲ್ಲಿ ನಡೆಯಲಿದೆ. ಎರಡನೇ ದಿನದಿಂದ ನಿತ್ಯ ರಾಜ್ಯಸಭೆಯಿಂದ ಅಧಿವೇಶನ ಬೆಳಗ್ಗೆ ನಡೆಯಲಿದೆ. ಲೋಕಸಭೆ ಹಾಗು ರಾಜ್ಯಸಭೆ ಹಾಲ್ ಗಳಲ್ಲಿ ಎರಡೂ ಕಡೆ ಸಂಸದರು ಕೂರಲು ಅವಕಾಶ ಮಾಡಿಕೊಡಲಾಗಿದೆ.
ಸಾಮಾಜಿಕ ಅಂತರವನ್ನು ಕಾಯ್ದುಕೊಂಡು 257 ಮಂದಿ ಸದಸ್ಯರಿಗೆ ಲೋಕಸಭಾ ಚೇಂಬರ್ ನಲ್ಲಿ, 172 ಮಂದಿ ಸದಸ್ಯರಿಗೆ ಲೋಕಸಭಾ ಗ್ಯಾಲರಿಯಲ್ಲಿ, 60 ಮಂದಿ ಸದಸ್ಯರಿಗೆ ರಾಜ್ಯಸಭಾ ಚೇಂಬರ್ ನಲ್ಲಿ , 51ಮಂದಿಗೆ ಗ್ಯಾಲರಿಯಲ್ಲಿ ಕೂರಲು ವ್ಯವಸ್ಥೆ ಮಾಡಲಾಗಿದೆ.
ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯ ತನಕ ಒಂದು ಸದನದ ಕಲಾಪ, 3 ಗಂಟೆಯಿಂದ ರಾತ್ರಿ 7 ಗಂಟೆಯ ತನಕ ಒಂದು ಸದನದ ಕಲಾಪ ನಡೆಯಲಿದೆ.
ಅರ್ಧ ಗಂಟೆ ಶೂನ್ಯ ಅವಧಿ: ಪ್ರತಿ ನಿತ್ಯ ಚುಕ್ಕೆ ಗುರುತು ಇಲ್ಲದ ಪ್ರಶ್ನೆಗಳನ್ನು ಮಂಡಿಸಲಾಗುತ್ತದೆ. ಜೊತೆಗೆ ನಿತ್ಯ ನಾಲ್ಕು ಗಂಟೆಗಳ ಅವಧಿಯಲ್ಲಿ ಮೊದಲ ಅರ್ಧ ಗಂಟೆ ಶೂನ್ಯ ಅವಧಿಗೆ ಮೀಸಲಾಗಿರಿಸಲಾಗಿದೆ. ಪೇಪರ್ ಬಳಕೆ ಕಡಿಮೆ ಮಾಡಿ ಈ ಬಾರಿ ಸಂಸದರ ಪ್ರಶ್ನೆಗಳಿಗೆ ಡಿಜಿಟಲ್ ರೂಪದಲ್ಲಿ ಉತ್ತರ ದೊರೆಯಲಿದೆ. ಸಂಸದರಿಗೆ ಹೊರತುಪಡಿಸಿ ಬೇರೆ ಯಾರಿಗೂ ಸೆಂಟ್ರಲ್ ಹಾಲ್ ಪ್ರವೇಶ ವಿಲ್ಲ.
ಇನ್ನು ಅಧಿವೇಶನಕ್ಕೆ ಮೂರು ದಿನಗಳು ಬಾಕಿ ಇರುವಾಗ ಇವತ್ತು ಲೋಕಸಭಾ ಸ್ಪೀಕರ್ ಎಲ್ಲಾ ಸಿದ್ದತೆಗಳನ್ನು ಪರಿಶೀಲಿಸಿದರು. ಈ ಬಾರಿ ಅಧಿವೇಶನ ನಮಗೆ ಸವಾಲು ಆಗಿದೆ. ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಲಿದ್ದೇವೆ. ಡಿಜಿಟಲೀಕರಣ ಸೇರಿ ಸಾಮಾಜಿಕ ಅಂತರ, ಸ್ಯಾನಿಟೇಜಷನ್ ಸೇರಿ ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದೆ ಅಂಥ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಾಧ್ಯಮಗಳಿಗೆ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ