ಇಸ್ಲಾಂಗೆ ಮತಾಂತರವಾದರೆ ಹಿಂದುಳಿದ ವರ್ಗಗ ಮೀಸಲಾತಿ ನೀಡುವಂತಿಲ್ಲ: ಮದ್ರಾಸ್ ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ ಕೋರ್ಟ್‌

Published : Oct 15, 2026, 11:50 AM IST
Supreme Court

ಸಾರಾಂಶ

ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡವರು ಹಿಂದುಳಿದ ವರ್ಗಗಳ ಮುಸ್ಲಿಂ (BCM) ಅಡಿಯಲ್ಲಿ ಮೀಸಲಾತಿ ಪಡೆಯಲು ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಮತಾಂತರಗೊಂಡ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ತಮಿಳುನಾಡು ಸರ್ಕಾರದ ಅಧಿಸೂಚನೆಯನ್ನು ರದ್ದುಗೊಳಿಸಿದೆ.

ನವದೆಹಲಿ (ಅ.15): ತಮಿಳುನಾಡು ಸರ್ಕಾರಕ್ಕೆ ಭಾರತೀಯ ಸುಪ್ರೀಂ ಕೋರ್ಟ್‌ನಿಂದ ಗುರುವಾರ ಭಾರಿ ಹಿನ್ನಡೆಯಾಗಿದೆ. ಹಿಂದೂ ಧರ್ಮದಿಂದ ಇಸ್ಲಾಂ ಅಥವಾ ಇತರ ಧರ್ಮಗಳಿಗೆ ಮತಾಂತರಗೊಂಡ ವ್ಯಕ್ತಿಯೊಬ್ಬರು, ಮತಾಂತರಕ್ಕೂ ಮೊದಲು ತಮ್ಮ ಜಾತಿ ಅಥವಾ ಸಮುದಾಯದಲ್ಲಿದ್ದ 'ಸಾಮಾಜಿಕ ಹಿಂದುಳಿದಿರುವಿಕೆ'ಯನ್ನು ಮಾತ್ರವೇ ಆಧಾರವಾಗಿಟ್ಟುಕೊಂಡು ಸಂವಿಧಾನದ ವಿಧಿ 16(4) ರ ಅಡಿಯಲ್ಲಿ ಮೀಸಲಾತಿಯನ್ನು ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡ ವ್ಯಕ್ತಿಯೊಬ್ಬರು 'ಹಿಂದುಳಿದ ವರ್ಗಗಳ ಮುಸ್ಲಿಂ' (BCM) ಕೆಟಗರಿಯಡಿ ಮೀಸಲಾತಿ ಪಡೆಯಲು ಅರ್ಹರಾಗುವುದಿಲ್ಲ ಎಂದು ಈ ಹಿಂದೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ಚಂದ್ರಶೇಖರ್ ಅವರನ್ನೊಳಗೊಂಡ ದ್ವಿ ಸದಸ್ಯ ಪೀಠವು ಈ ಮಹತ್ವದ ತೀರ್ಪು ನೀಡಿದ್ದು, ಧರ್ಮದ ಮತಾಂತರವು ಯಾವುದೇ ವ್ಯಕ್ತಿಗೆ ಸೂಚಿತ ಹಿಂದುಳಿದ ವರ್ಗದ ಸಮುದಾಯದ ಸದಸ್ಯತ್ವವನ್ನು ಸ್ವಯಂಚಾಲಿತವಾಗಿ ಒದಗಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಇಸ್ಲಾಂಗೆ ಮತಾಂತರಗೊಂಡ ತಕ್ಷಣವೇ 'ಬಿಸಿಎಮ್' ಸ್ಥಾನಮಾನ ಸಿಗೋದಿಲ್ಲ

ಮತಾಂತರಗೊಂಡ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ತಮಿಳುನಾಡು ಸರ್ಕಾರದ ಅಧಿಸೂಚನೆಯನ್ನು ರದ್ದುಗೊಳಿಸಿದ್ದ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದ ಅತ್ಯುನ್ನತ ನ್ಯಾಯಾಲಯ, ಹೈಕೋರ್ಟ್ ಆದೇಶದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

"ಹಿಂದೂಯೇತರ ಸಾಮಾಜಿಕ ವ್ಯವಸ್ಥೆಗೆ ಮತಾಂತರಗೊಳ್ಳುವುದರಿಂದ ಯಾವುದೇ ವ್ಯಕ್ತಿಗೆ ಯಾವುದೇ ನಿರ್ದಿಷ್ಟ ಹಿಂದುಳಿದ ಜಾತಿ ಸಮುದಾಯದ ಸದಸ್ಯತ್ವ ಸ್ವಯಂಚಾಲಿತವಾಗಿ ಲಭಿಸುವುದಿಲ್ಲ" ಎಂದು ತೀರ್ಪಿನ ವೇಳೆ ನ್ಯಾಯಪೀಠ ಪ್ರಮುಖವಾಗಿ ಉಲ್ಲೇಖಿಸಿದೆ.

ತನ್ನ ತೀರ್ಪಿನಲ್ಲಿ 1950 ರ 'ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶ'ವನ್ನು ಪ್ರಸ್ತಾಪಿಸಿದ ಸುಪ್ರೀಂ ಕೋರ್ಟ್, "ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಇತರ ಧರ್ಮಗಳನ್ನು ಪಾಲಿಸುವ ಯಾವುದೇ ವ್ಯಕ್ತಿಯನ್ನು ಈ ಆದೇಶದ ಅಡಿಯಲ್ಲಿ ಪರಿಶಿಷ್ಟ ಜಾತಿ (SC) ಸದಸ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ" ಎಂಬ ಕಾಯ್ದೆಯನ್ನು ಎತ್ತಿಹಿಡಿದಿದೆ. ಅಲ್ಲದೆ, ಮತಾಂತರಗೊಳ್ಳುವ ಮುನ್ನ ವ್ಯಕ್ತಿಯೊಬ್ಬ ಹೊಂದಿದ್ದ ಸಾಮಾಜಿಕ ಹಿಂದುಳಿದಿರುವಿಕೆಯು, ಮತಾಂತರದ ಬಳಿಕ ವಿಧಿ 16(4) ರ ಅಡಿಯಲ್ಲಿ ಮೀಸಲಾತಿ ಪಡೆಯಲು ಸ್ವಯಂಪ್ರೇರಿತ ಅರ್ಹತೆಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ ಏನು?

ಈ ಇಡೀ ವಿವಾದವು ತಮಿಳುನಾಡು ಸರ್ಕಾರವು 2024 ರ ಮಾರ್ಚ್‌ನಲ್ಲಿ ಹೊರಡಿಸಿದ್ದ ಸರ್ಕಾರಿ ಆದೇಶಕ್ಕೆ ಸಂಬಂಧಿಸಿದೆ. ಈ ಆದೇಶದ ಪ್ರಕಾರ, ಹಿಂದುಳಿದ ವರ್ಗಗಳು (BC), ಅತ್ಯಂತ ಹಿಂದುಳಿದ ವರ್ಗಗಳು (MBC), ಅಧಿಸೂಚಿತವಲ್ಲದ ಸಮುದಾಯಗಳು (DNC) ಹಾಗೂ ಪರಿಶಿಷ್ಟ ಜಾತಿಗಳಿಂದ (SC) ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ವ್ಯಕ್ತಿಗಳಿಗೆ ಮೀಸಲಾತಿ ಸೌಲಭ್ಯದ ಉದ್ದೇಶಕ್ಕಾಗಿ 'ಹಿಂದುಳಿದ ವರ್ಗಗಳ ಮುಸ್ಲಿಂ' (BCM) ಎಂದು ಪರಿಗಣಿಸಲು ಅವಕಾಶ ಕಲ್ಪಿಸಲಾಗಿತ್ತು.

ಪ್ರಸ್ತುತ ತಮಿಳುನಾಡು ರಾಜ್ಯದ ಒಟ್ಟು ಮೀಸಲಾತಿ ಚೌಕಟ್ಟಿನಲ್ಲಿ 'ಹಿಂದುಳಿದ ವರ್ಗಗಳ ಮುಸ್ಲಿಮರಿಗೆ' (BCM) ಪ್ರತ್ಯೇಕವಾಗಿ ಶೇಕಡಾ 3.5% ರಷ್ಟು ಮೀಸಲಾತಿಯನ್ನು ನೀಡಲಾಗುತ್ತದೆ. ಆದರೆ, ತಮಿಳುನಾಡು ಸರ್ಕಾರದ ಈ ಅಧಿಸೂಚನೆಯು 'ಸಂವಿಧಾನಬಾಹಿರ' ಎಂದು ಹೇಳಿ ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿತ್ತು. ಹೈಕೋರ್ಟ್‌ನ ಈ ನಿರ್ಧಾರವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತಾದರೂ, ಇದೀಗ ಸುಪ್ರೀಂ ಕೋರ್ಟ್‌ ಸಹ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದು ರಾಜ್ಯ ಸರ್ಕಾರಕ್ಕೆ ಭಾರಿ ಆಘಾತ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅ.28ರೊಳಗೆ ಭಾರತ ತೊರೆಯಬೇಕು, CEC ಹೋರಾಟದಲ್ಲಿ ಪಾಲ್ಗೊಂಡ ನಟ ಇಮ್ರಾನ್‌ಗೆ ನೋಟಿಸ್
“ನನಗೆ ಈಗ ಏನೂ ಉಳಿದಿಲ್ಲ” – ಮಕ್ಕಳನ್ನು ಕಳೆದುಕೊಂಡ ತಾಯಿಯ ಆಕ್ರಂದನಕ್ಕೆ ಕಣ್ಣೀರಾದ ಜಿಲ್ಲಾಧಿಕಾರಿ