
ಶ್ರೀವಿಜಯಪುರ (ಪೋರ್ಟ್‌ಬ್ಲೇರ್): ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಆರ್‌ಎಸ್‌ಎಸ್‌ನ ಮುಖ್ಯಸ್ಥ ಮೋಹನ್ ಭಾಗವತ್ ಅವರು ಶುಕ್ರವಾರ ಅಂಡಮಾನ್ ದ್ವೀಪದಲ್ಲಿ ಸ್ವಾತಂತ್ರ್ಯ ವೀರ ವಿ.ಡಿ.ಸಾವರ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಮಧ್ಯಾಹ್ನ 3.15ರ ಸುಮಾರಿಗೆ ದಕ್ಷಿಣ ಅಂಡಮಾನ್ ಜಿಲ್ಲೆಯ ಪಾರ್ಕ್‌ವೊಂದರಲ್ಲಿ ಪುತ್ಥಳಿ ಅನಾವರಣಗೊಳಿಸಿದ ಬಳಿಕ ಇಬ್ಬರೂ ನಾಯಕರು ‘ರುದ್ರಾಕ್ಷ’ ಮರದ ಸಸಿಯನ್ನು ನೆಟ್ಟರು. ಬಳಿಕ ಇಲ್ಲಿನ ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಸಾವರ್ಕರ್ ಬಗ್ಗೆ ಹಾಡು ಬಿಡುಗಡೆ ಮಾಡಿದರು.
ಸಾವರ್ಕರ್ ಅವರು 1911ರಿಂದ 1921ರ ತನಕ ಅಂಡಮಾನ್‌ನ ರಾಜಧಾನಿ ಪೋರ್ಟ್ ಬ್ಲೇರ್‌ನ (ಈಗಿನ ಶ್ರೀವಿಜಯಪುರ) ಸೆಲ್ಯುಲಾರ್ ಜೈಲಿನಲ್ಲಿ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸಿದ್ದರು.
ನವದೆಹಲಿ‘ಆಂಧ್ರಪ್ರದೇಶ ಡಿಸಿಎಂ, ನಟ ಪವನ್ ಕಲ್ಯಾಣ್ ಹಾಗೂ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರ ಹೆಸರನ್ನು ಸೋಷಿಯಲ್ ಮೀಡಿಯಾದಲ್ಲಿ ದುರ್ಬಳಕೆ ಮಾಡಿಕೊಳ್ಳುವ ವಿರುದ್ಧ 7 ದಿನದಲ್ಲಿ ಕ್ರಮ ಜರುಗಿಸಬೇಕು. ಈ ಮೂಲಕ ಅವರ ವ್ಯಕ್ತಿತ್ವದ ಹಕ್ಕು ರಕ್ಷಿಸಬೇಕು’ ಎಂದು ದೆಹಲಿ ಹೈಕೋರ್ಟ್, ಶುಕ್ರವಾರ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಆದೇಶಿಸಿದೆ.
ಈ ಬಗ್ಗೆ ಪವನ್ ಹಾಗೂ ಗವಾಸ್ಕರ್ ಸಲ್ಲಿಸಿದ್ದ ಅರ್ಜಿಗಳನ್ನು ಕೋರ್ಟ್ ಮಾನ್ಯ ಮಾಡಿದೆ.ಒಬ್ಬರ ಚಿತ್ರ ಅಥವಾ ಹೆಸರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ದುರ್ಬಳಕೆ ಮಾಡುವುದು ಅಪರಾಧ. ಇದರಿಂದ ರಕ್ಷಣೆಗೆ ವ್ಯಕ್ತಿತ್ವ ಹಕ್ಕು ರಕ್ಷಣೆ ಎಂಬ ಕಾನೂನಿದೆ.
ಇತ್ತೀಚೆಗೆ,ನಟರಾದ ಐಶ್ವರ್ಯಾ ರೈ ಬಚ್ಚನ್, ಅವರ ಪತಿ ಅಭಿಷೇಕ್ ಬಚ್ಚನ್ ಮತ್ತು ಅವರ ಅತ್ತೆ ಜಯಾ ಬಚ್ಚನ್, ಹೃತಿಕ್ ರೋಷನ್ ಮತ್ತು ದೇವಗನ್, ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್, ಗಾಯಕ ಕುಮಾರ್ ಸಾನು, ತೆಲುಗು ನಟ ಅಕ್ಕಿನೇನಿ ನಾಗಾರ್ಜುನ, ’ಆರ್ಟ್ ಆಫ್ ಲಿವಿಂಗ್’ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಸೇರಿ ಅನೇಕರು ಕೂಡ ಕೋರ್ಟ್ ಮೊರೆ ಹೋಗಿ ವ್ಯಕ್ತಿತ್ವ ಹಕ್ಕು ರಕ್ಷಣೆ ತೀರ್ಪು ಪಡೆದುಕೊಂಡಿದ್ದರು.
ನವದೆಹಲಿ: ‘3-6 ವರ್ಷದ ಮಕ್ಕಳ ಅಂಗನವಾಡಿ ಶಿಕ್ಷಣದ ಮಹತ್ವ ಹೆಚ್ಚಿಸುವ ಸಲುವಾಗಿ ಶಿಕ್ಷಣ ಹಕ್ಕು ಕಾಯ್ದೆ 2009ಕ್ಕೆ ತಿದ್ದುಪಡಿ ತಂರಬೇಕು. ಈಗ ಶೈಕ್ಷಣಿಕ ಹಕ್ಕು 6ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಅನ್ವಯ ಆಗುತ್ತಿದ್ದು, ಅದನ್ನು 3 ವರ್ಷದಿಂದಲೇ ಆರಂಭಿಸಬೇಕು’ ಎಂದು ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಆಗ್ರಹಿಸಿದ್ದಾರೆ.ಶುಕ್ರವಾರ ಈ ಬಗ್ಗೆ ಖಾಸಗಿ ಬಿಲ್ ಮಂಡಿಸಿದ ಅವರು, ‘ಎಷ್ಟೋ ಪೋಷಕರಿಗೆ ಅಂಗನವಾಡಿಯ ಮಹತ್ವವೇ ತಿಳಿದಿಲ್ಲ. ಆರ್ಥಿಕ, ಸಾಮಾಜಿಕ ಸ್ಥಿತಿಗಳಿಂದ ಮಕ್ಕಳನ್ನು ಅಂಗನವಾಡಿಗೆ ಸೇರಿಸುವುದೇ ಇಲ್ಲ. ಶಿಕ್ಷಣ ಹಕ್ಕು 3-6 ವರ್ಷದ ಮಕ್ಕಳಿಗೂ ಸಿಕ್ಕರೆ, ಇವರಿಗೂ ಕಡ್ಡಾಯ ಶಿಕ್ಷಣ ಆಗುತ್ತದೆ. ಈ ಶಿಕ್ಷಣವು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಹೀಗಾಗಿ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತರಬೇಕು’ ಎಂದು ಆಗ್ರಹಿಸಿದರು.
ಇಂಡಿಗೋ ಬಿಕ್ಕಟ್ಟು: 4 ಫ್ಲೈಟ್ ಇನ್ಸ್‌ಪೆಕ್ಟರ್‌ಗಳು ವಜಾ
ನವದೆಹಲಿ: ಇಂಡಿಗೋ ವಿಮಾನ ಹಾರಾಟದ ಬಿಕ್ಕಟ್ಟಿನ ನಡುವೆಯೇ, ಇಂಡಿಗೋ ಸಂಸ್ಥೆಯ ವಿಮಾನಗಳ ಸುರಕ್ಷತೆ ಮತ್ತು ಕಾರ್ಯಾಚರಣೆ ಅನುಸರಣೆಯ ಮೇಲ್ವಿಚಾರಣೆ ಜವಾಬ್ದಾರಿ ಹೊತ್ತಿದ್ದ 4 ಫ್ಲೈಟ್ ಇನ್ಸ್‌ಪೆಕ್ಟರ್‌ಗಳನ್ನು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ(ಡಿಜಿಸಿಎ) ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ.ತಪಾಸಣೆ ಮತ್ತು ಮೇಲ್ವಿಚಾರಣೆಯಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ಅಧಿಕಾರಿಗಳು ಕಟ್ಟುನಿಟ್ಟಾದ ನಿಯಂತ್ರಕ ಮಾನದಂಡಗಳ ಅನುಸರಣೆ, ನಿಯಮಗಳ ಪರಿಶೀಲನೆ, ತರಬೇತಿ, ಹಾರಾಟದ ಮಾನದಂಡ, ಅಪಘಾತ ತಡೆಗಟ್ಟುವ ಕ್ರಮ ಮೇಲ್ವಿಚಾರಣೆ ಮಾಡುತ್ತಾರೆ. ಇದಕ್ಕಾಗಿ ವಿಮಾನಯಾನ ಸಂಸ್ಥೆಗಳ ಪೈಲಟ್‌ಳು, ರವಾನೆದಾರರು ಮತ್ತು ಕ್ಯಾಬಿನ್ ಸಿಬ್ಬಂದಿಯನ್ನು ಪರಿಶೀಲಿಸುವ, ಲೆಕ್ಕಪರಿಶೋಧಿಸುವ ಮತ್ತು ಪ್ರಮಾಣೀಕರಿಸುತ್ತಾರೆ. ಆದರೆ ಅವರ ಕರ್ತವ್ಯದಲ್ಲಿ ಲೋಪ ಆಗಿದ್ದರಿಂದ ವಜಾ ಮಾಡಲಾಗಿದೆ.
ಪೈಲಟ್‌ಗಳ ವಿಶ್ರಾಂತಿಗೆ ಸಂಬಂಧಿಸಿದಂತೆ ಡಿಜಿಸಿಎ ಜಾರಿಗೊಳಿಸಿದ ಹೊಸ ನಿಯಮದಿಂದಾಗಿ, ದೇಶದ ವಿಮಾನಯಾನ ಕ್ಷೇತ್ರದಲ್ಲಿ ಬಹುಪಾಲು ಹೊಂದಿರುವ ಇಂಡಿಗೋ ಸಂಸ್ಥೆ ಸಿಬ್ಬಂದಿ ಕೊರತೆಯನ್ನು ಎದುರಿಸಿತ್ತು. ಪರಿಣಾಮ ಸಾವಿರಾರು ವಿಮಾನಗಳು ಏಕಾಏಕಿ ರದ್ದಾಗಿ, ಪ್ರಯಾಣಿಕರ ಪರದಾಟಕ್ಕೆ ಕಾರಣವಾಗಿತ್ತು.
ತರಕಾರಿ ಬೆಲೆ ಏರಿಕೆ: ಚಿಲ್ಲರೆ ಹಣದುಬ್ಬರ ಶೇ.0.71ಕ್ಕೆ ಜಿಗಿತ
ನವದೆಹಲಿ: ನವೆಂಬರ್ ತಿಂಗಳಿನಲ್ಲಿ ದೇಶದಲ್ಲಿ ತರಕಾರಿ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆಯು ಕೊಂಚ ಏರಿಕೆಯಾದ ಪರಿಣಾಮ ಚಿಲ್ಲರೆ ಹಣದುಬ್ಬರುವು ಶೇ.0.25ರಿಂದ ಶೇ.0.71ಕ್ಕೆ ಏರಿಕೆಯಾಗಿದೆ.ಸೆಪ್ಟೆಂಬರ್‌ನಲ್ಲಿ ಶೇ.1.54ರಷ್ಟು ದಾಖಲಾಗಿದ್ದ ಹಣದುಬ್ಬರ ದರವು ಅಕ್ಟೋಬರ್‌ನಲ್ಲಿ ಶೇ.0.25ಕ್ಕೆ ಕುಸಿದು ಅತ್ಯಂತ ಕನಿಷ್ಠವೆಂಬ ದಾಖಲೆ ಮಾಡಿತ್ತು. ಆದರೆ ನವೆಂಬರ್‌ನಲ್ಲಿ ತರಕಾರಿ, ಮೊಟ್ಟೆ, ಮಾಂಸ, ಮೀನು, ಸಂಬಾರು ಪದಾರ್ಥ ಮತ್ತು ಇಂಧನದ ಮೇಲಿನ ಬೆಲೆ ಏರಿಕೆಯಿಂದಾಗಿ ಶೇ.0.25ಕ್ಕೆ ತಲುಪಿದ್ದ ಚಿಲ್ಲರೆ ಹಣದುಬ್ಬರ ಶೇ.0.71ಕ್ಕೆ ಜಿಗಿದಿದೆ.
ಇತ್ತೀಚೆಗೆ ಆರ್‌ಬಿಐ ತನ್ನ ಬಡ್ಡಿದರ ಕಡಿತ ಸಭೆಯಲ್ಲಿ, ದೇಶದಲ್ಲಿ ಹಣದುಬ್ಬರ ಕಡಿಮೆಯಿದ್ದು, ಆರ್ಥಿಕ ಬೆಳವಣಿಗೆ ಏರುಗತಿಯಲ್ಲಿರುವ ಕಾರಣ ಇದು ‘ಸ್ವರ್ಣ ಅವಧಿ’ ಎಂದು ಸಂಬೋಧಿಸಿ ಬಡ್ಡಿದರ ಶೇ.0.25ರಷ್ಟು ಇಳಿಕೆ ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ