ಬನ್ನಿ, ಎಲ್ಲರೂ ಒಂದಾಗಿ ಡಿಎಂಕೆ ಮಣಿಸೋಣ: ಶಶಿಕಲಾ ಆಫರ್‌!

By Suvarna NewsFirst Published Feb 25, 2021, 9:47 AM IST
Highlights

ಬನ್ನಿ, ಎಲ್ಲರೂ ಒಂದಾಗಿ ಡಿಎಂಕೆ ಮಣಿಸೋಣ: ಶಶಿಕಲಾ ಆಫರ್‌| ಅಮ್ಮನ ಆಸೆಯಂತೆ ನಮ್ಮ ಜತೆಗೂಡಿ ಚುನಾವಣೆಗೆ ಬನ್ನಿ| ಅಣ್ಣಾಡಿಎಂಕೆ ನಾಯಕತ್ವಕ್ಕೆ ಜಯಾ ಆಪ್ತೆ ಸಂಧಾನ ಸೂತ್ರ| ಸಂಘರ್ಷಕ್ಕಿಳಿಯಬಹುದು ಎಂದೆಣಿಸಿದ್ದ ಇಪಿಎಸ್‌ ಪೇಚಿಗೆ

ಚೆನ್ನೈ(ಫೆ.25): ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ 4 ವರ್ಷ ಜೈಲು ಶಿಕ್ಷೆ ಮುಗಿಸಿ ತಮಿಳುನಾಡಿಗೆ ಹಿಂತಿರುಗಿರುವ ಅಣ್ಣಾಡಿಎಂಕೆ ಮಾಜಿ ನಾಯಕಿ ಶಶಿಕಲಾ ಅವರು ತಮಿಳುನಾಡಿನ ಅಣ್ಣಾಡಿಎಂಕೆ ಸರ್ಕಾರದ ಜತೆಗೆ ಸಂಘರ್ಷಕ್ಕಿಳಿಯಬಹುದು ಎಂಬ ಲೆಕ್ಕಾಚಾರ ಉಲ್ಟಾಆಗಿದೆ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಎಲ್ಲ ಅನುಯಾಯಿಗಳು ಒಗ್ಗೂಡಬೇಕು. ನಮ್ಮೆಲ್ಲರ ಶತ್ರು ಡಿಎಂಕೆಯನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಣಿಸಲು ಹೋರಾಡಬೇಕು ಎಂದು ಕರೆ ನೀಡಿದ್ದಾರೆ.

ಜಯಲಲಿತಾ ಅವರ 73ನೇ ಜನ್ಮಸ್ಮರಣೆ ಅಂಗವಾಗಿ ಟಿ. ನಗರದಲ್ಲಿರುವ ಜಯಾ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ‘ಅಮ್ಮ (ಜಯಲಲಿತಾ)ನ ‘ನಿಜವಾದ’ ಹಿಂಬಾಲಕರು ಒಗ್ಗೂಡಿ, ಜಯಕ್ಕಾಗಿ ಹೋರಾಡಬೇಕು. ಅಮ್ಮನ ಆಸೆಯಂತೆ ಎಐಎಡಿಎಂಕೆ ನಮ್ಮ ಜತೆಗೂಡಿ ವಿಧಾನಸಭಾ ಅಖಾಡಕ್ಕೆ ಇಳಿಯಬೇಕು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಏಕೈಕ ಗುರಿ ಗೆಲುವು. ಈ ಸಂಬಂಧ ಶೀಘ್ರದಲ್ಲೇ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಭೇಟಿಯಾಗುತ್ತೇನೆ’ ಎಂದು ಹೇಳಿದರು.

ತಮ್ಮ ಮರಣಾನಂತರವೂ ಸರ್ಕಾರ 100 ವರ್ಷ ತಮಿಳುನಾಡು ಆಳಬೇಕು ಎಂದು ಜಯಲಲಿತಾ ಅವರು ಬಯಸಿದ್ದರು. ಹೀಗಾಗಿ ಅಮ್ಮನ ಸರ್ಕಾರ ಮುಂದುವರಿಯುವಂತೆ ನಾವೆಲ್ಲರೂ ನೋಡಿಕೊಳ್ಳಬೇಕು ಎಂದಿದ್ದಾರೆ. ತನ್ಮೂಲಕ ತಮಿಳುನಾಡು ಸರ್ಕಾರವನ್ನು ಅಮ್ಮ ಸರ್ಕಾರ ಎಂದು ಕರೆದಿದ್ದಾರೆ.

ಶಶಿಕಲಾ ಅವರು ತಮ್ಮ ಜತೆ ಸಂಘರ್ಷಕ್ಕೆ ಇಳಿಯಬಹುದು ಎಂದು ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ ಹಾಗೂ ಒ. ಪನ್ನೀರ್‌ಸೆಲ್ವಂ ಎಣಿಸಿದ್ದರು. ಆದರೆ ಶಶಿಕಲಾ ಅವರ ಬದಲಾದ ಧೋರಣೆ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅವರಿಬ್ಬರೂ ಯಾವ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

click me!