
ಕರ್ನಾಲ್ (ಜುಲೈ 15): ಭಗವಂತ್ ಸಿಂಗ್ ಮಾನ್ ರಾಜೀನಾಮೆಯಿಂದ ತೆರವಾದ ಲೋಕಸಭಾ ಸ್ಥಾನ ಸಂಗ್ರೂರ್‌ನ ನೂತನ ಸಂಸದರಾಗಿರುವ ಶಿರೋಮಣಿ ಅಕಾಲಿ ದಳದ (ಅಮೃತ್‌ಸರ) ನಾಯಕ ಸಿಮ್ರನ್‌ಜಿತ್ ಸಿಂಗ್ ಮಾನ್, ಕ್ರಾಂತಿಕಾರಿ ಭಗತ್ ಸಿಂಗ್‌ರನ್ನು ಭಯೋತ್ಪಾದಕ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಸಂಸತ್ತಿಗೆ ಬಾಂಬು ಎಸೆದಿದ್ದು, ಹಾಗೂ ಇಂಗ್ಲೀಷ್ ಅಧಿಕಾರಿಯನ್ನು ಹಾಡುಹಗಲೇ ಕೊಂದಿದ್ದನ್ನು ಅವರು ಇದಕ್ಕೆ ಸಮರ್ಥನೆಯಾಗಿ ನೀಡಿದ್ದಾರೆ. ಪಂಜಾಬ್‌ನಲ್ಲಿ ಬಹಳ ವರ್ಷಗಳ ಕಾಲ ಅಧಿಕಾರ ನಡೆಸಿದ್ದ ಸುಖ್‌ಬೀರ್ ಸಿಂಗ್ ಬಾದಲ್ ನೇತೃತ್ವದ ಶಿರೋಮಣಿ ಅಕಾಲಿ ದಳದಿಂದ ಬೇರ್ಪಟ್ಟು, ಶಿರೋಮಣಿ ಅಕಾಲಿ ದಳ ಅಮೃತ್‌ಸರ ಎನ್ನುವ ಹೊಸ ಪಕ್ಷವನ್ನು ಕಟ್ಟಿ ಅದಕ್ಕೆ ಸಿಮ್ರನ್‌ಜಿತ್ ಸಿಂಗ್ ಮಾನ್ ಅಧ್ಯಕ್ಷರಾಗಿದ್ದರು. 'ಭಯೋತ್ಪಾದಕ ಯಾವಾಗಲೂ ಭಯೋತ್ಪಾದಕನೇ ಆಗಿರುತ್ತಾನೆ ಎಂದೂ ಸಿಮ್ರನ್‌ಜೀತ್ ಸಿಂಗ್ ಮಾನ್ ಹೇಳಿದ್ದಾರೆ. ಭಗತ್ ಸಿಂಗ್ ಆಂಗ್ಲ ನೌಕಾಪಡೆಯ ಯುವ ಅಧಿಕಾರಿಯನ್ನು ಕೊಂದಿದ್ದರು, ಅವರು ಅಮೃತಧಾರಿ ಸಿಖ್ ಕಾನ್ ಸ್ಟೇಬಲ್ ಚನ್ನನ್ ಸಿಂಗ್ ಅವರನ್ನು ಕೊಂದಿದ್ದರು. ಅವರು ಆ ಸಮಯದಲ್ಲಿ ರಾಷ್ಟ್ರೀಯ ಅಸೆಂಬ್ಲಿಗೆ ಬಾಂಬ್ ಎಸೆದಿದ್ದರು. ಇದೆಲ್ಲವನ್ನೂ ಮಾಡಿದ್ದ ಭಗತ್ ಸಿಂಗ್ ಭಯೋತ್ಪಾದಕ ಹೌದೋ ಅಲ್ಲವೋ ಎನ್ನುವುದನ್ನು ನೀವೇ ನಿರ್ಧರಿಸಿ ಎಂದು ಹೇಳಿದ್ದಾರೆ.
"ಪತ್ರಿಕಾ ಮಾಧ್ಯಮಗಳು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಪರವಾಗಿ ಒಲವು ತೋರಿವೆ ಮತ್ತು ಇದ್ದಕ್ಕಿದ್ದಂತೆ ಈಗ ಭಗತ್ ಸಿಂಗ್ (Bhagat Singh) ಅವರನ್ನು ಹೀರೋ ಎಂದು ಹೇಳುತ್ತಿವೆ. ಗೋಡ್ಸೆ ಕೂಡ ಹೀರೋ ಎಂದು ಅವರು ಹೇಳುತ್ತಾರೆ. ನನಗೆ ಇದ್ಯಾವುದೂ ಅರ್ಥವಾಗುತ್ತಿಲ್ಲ" ಅವರು ಹೇಳಿದರು. ಖಲಿಸ್ತಾನ್ ಚಳವಳಿಯ ಪ್ರಮುಖ ಪ್ರತಿಪಾದಕ ಜರ್ನೈಲ್ ಸಿಖ್ ಭಿಂದ್ರನ್‌ವಾಲೆ (Jarnail Singh Bhindranwale) ಬಗ್ಗೆ ವಿಚಾರಿಸಿದಾಗ, ಮನ್ ಅವರನ್ನು 'ಶ್ರೇಷ್ಠ ಸಿಖ್ ನಾಯಕ' ಎಂದು ಬಣ್ಣಿಸಿದ್ದಾರೆ.
ಪಂಜಾಬ್ ಸಚಿವರ ಕಿಡಿ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದಕ್ಕಾಗಿ ಸಂಗ್ರೂರ್ ಸಂಸದ ಸಿಮ್ರಂಜಿತ್ ಸಿಂಗ್ ಮಾನ್ ಬೇಷರತ್ ಕ್ಷಮೆಯಾಚಿಸಬೇಕು ಎಂದು ಪಂಜಾಬ್ ಸಚಿವ ಗುರ್ಮೀತ್ ಸಿಂಗ್ ಮೀತ್ ಹಯರ್ ಶುಕ್ರವಾರ ಹೇಳಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಭಗತ್ ಸಿಂಗ್ ಅವರು ಮಾಡಿದ ಸರ್ವೋಚ್ಚ ತ್ಯಾಗಕ್ಕಾಗಿ ರಾಜ್ಯ ಸರ್ಕಾರ ಅವರಿಗೆ ಹುತಾತ್ಮ ಸ್ಥಾನಮಾನ ನೀಡಲಿದೆ ಎಂದು ಉನ್ನತ ಶಿಕ್ಷಣ ಮತ್ತು ಭಾಷಾ ಸಚಿವರು ಘೋಷಿಸಿದರು. ಗುರುವಾರ ಕರ್ನಾಲ್‌ನಲ್ಲಿ ಸುದ್ದಿಗಾರರೊಂದಿಗೆ ನಡೆಸಿದ ಸಂವಾದದ ಸಂದರ್ಭದಲ್ಲಿ, ಸಿಮ್ರಂಜಿತ್ ಸಿಂಗ್ ಮಾನ್ (Simranjit Singh Mann) ಅವರು ಭಗತ್ ಸಿಂಗ್ ಅವರನ್ನು "ಭಯೋತ್ಪಾದಕ" ಎಂದು ಹೇಳಿದ್ದರು.
ಇದನ್ನೂ ಓದಿ: ಭಗತ್ ಸಿಂಗ್ ಪಾಠ ಕೈಬಿಟ್ಟಿರುವುದು ನಾಚಿಕೆಗೇಡು Arvind Kejriwal ಕಿಡಿ
"ಹೊಸದಾಗಿ ಆಯ್ಕೆಯಾದ ಸಂಸದರು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮಭಗತ್ ಸಿಂಗ್ ಅವರ ತ್ಯಾಗವನ್ನು ಅಗೌರವಿಸಿದ್ದಾರೆ" ಎಂದು ಹೇಯರ್ ಪ್ರತಿಕ್ರಿಯೆ ನೀಡಿದ್ದಾರೆ. ದೇಶಕ್ಕಾಗಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಬಗ್ಗೆ ಪಂಜಾಬ್ ಮಾತ್ರವಲ್ಲದೆ ಇಡೀ ರಾಷ್ಟ್ರವು ಹೆಮ್ಮೆಪಡುತ್ತದೆ ಎಂದು ಹೇಯರ್ ಹೇಳಿದರು. "ಭಾರತೀಯರು ಸ್ವತಂತ್ರ ರಾಷ್ಟ್ರದಲ್ಲಿ ಉಸಿರಾಡಲು ಸಾಧ್ಯವಾಗಿದ್ದರೆ. ಅದಕ್ಕೆ ಕಾರಣ ಈ ಯುವಕರು. ನಮ್ಮ ಭವಿಷ್ಯಕ್ಕಾಗಿ ಅವರು ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ. ಆದರೆ, ಸಿಮ್ರನ್‌ಜೀತ್ ಸಿಂಗ್‌ರಂಥ ಹಿರಿಯರು ಅವರಿಗೆ ಗೌರವ ನೀಡದೇ ಇರುವುದು ಬೇಸರದ ವಿಚಾರ' ಎಂದು ಹೇಳಿದ್ದಾರೆ. ಭಗತ್ ಸಿಂಗ್ ನಮ್ಮ ಆರಾಧ್ಯ ದೈವವಾಗಿದ್ದು, ಪಂಜಾಬ್ ಸರ್ಕಾರವು ಭಗತ್ ಸಿಂಗ್ ಅವರಿಗೆ ಹುತಾತ್ಮ ಸ್ಥಾನಮಾನವನ್ನು ನೀಡಲಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ:Hubballi: ಭಗತ್ ಸಿಂಗ್ ಪುತ್ಥಳಿ ಸ್ಥಾಪನೆಗೆ ರಕ್ತದಲ್ಲಿ ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ಯುವ ಮುಖಂಡ
ಸುಖಬೀರ್ ಸಿಂಗ್ ಬಾದಲ್ ಆಕ್ರೋಶ: ಇದೇ ವೇಳೆ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಕೂಡ ಸಿಮ್ರಂಜಿತ್ ಸಿಂಗ್ ಮಾನ್ ವಿರುದ್ಧ ವಾಗ್ದಾಳಿ ನಡೆಸಿದರು. "ಪ್ರತಿ ಸಿಖ್, ಪ್ರತಿ ಪಂಜಾಬಿ ಮತ್ತು ಪ್ರತಿಯೊಬ್ಬ ಭಾರತೀಯನು ಶಹೀದ್-ಎ-ಆಜಮ್ ಭಗತ್ ಸಿಂಗ್ ಬಗ್ಗೆ ಹೆಮ್ಮೆಪಡುತ್ತಾನೆ. ಪ್ರತಿಯೊಬ್ಬ ಸಿಖ್, ಅವರನ್ನು ಸ್ವಾತಂತ್ರ್ಯ ಹೋರಾಟಕ್ಕೆ ನಮ್ಮ ಅಭೂತಪೂರ್ವ ಕೊಡುಗೆಯ ಸಂಕೇತವೆಂದು ಪರಿಗಣಿಸುತ್ತಾನೆ. @SimranjitSADA ಈ ಹೆಮ್ಮೆಯನ್ನು ದುರ್ಬಲಗೊಳಿಸುವುದಲ್ಲದೆ, ಪ್ರಪಂಚದಾದ್ಯಂತ ಸಿಖ್ಖರ ಇಮೇಜ್‌ಅನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ