ನಾಳೆ ಬುಂದೇಲ್‌ಖಂಡ ಎಕ್ಸ್‌ಪ್ರೆಸ್‌ ವೇ ಲೋಕಾರ್ಪಣೆ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ!

By Santosh NaikFirst Published Jul 15, 2022, 6:13 PM IST
Highlights

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉತ್ತರ ಪ್ರದೇಶದಲ್ಲಿ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಲಿದ್ದಾರೆ. ಇದು ಉತ್ತರ ಪ್ರದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಕಳೆದ ಏಳು ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಪ್ರಮಾಣ ಶೇ. 50ರಷ್ಟು ಹೆಚ್ಚಾಗಿದೆ.
 

ನವದೆಹಲಿ (ಜುಲೈ 15): ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಲಿದ್ದಾರೆ. ಉತ್ತರ ಪ್ರದೇಶದ ಅಭಿವೃದ್ಧಿಯ ದೃಷ್ಟಿಯಲ್ಲಿ ತೀರಾ ಮಹತ್ವದ ಎಕ್ಸ್‌ಪ್ರೆಸ್‌ ವೇ ಎಂದು ಇದನ್ನು ಬಿಂಬಿಸಲಾಗಿದೆ. ಮೋದಿ ಸರ್ಕಾರ ಬಂದ ಬಳಿಕ ಅಂದರೆ, ಕಳೆದ ಏಳು ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಪ್ರಕ್ರಿಯೆಯಲ್ಲಿ ಮೂರು ಪಟ್ಟು ವೇಗ ಸಿಕ್ಕಿದೆ. ಈ ಹಿಂದೆ ಒಂದು ದಿನದಲ್ಲಿ 12 ಕಿಲೋಮೀಟರ್‌ ರಸ್ತೆಯನ್ನು ನಿರ್ಮಾಣ ಮಾಡಿದ್ದರೆ, 2020-21ರಲ್ಲಿ ಒಂದು ದಿನಕ್ಕೆ 37 ಕಿಲೋಮೀಟರ್‌ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೇ ಮೂಲಸೌಕರ್ಯ ಮತ್ತು ಸಂಪರ್ಕ ನಿರ್ಮಾಣಕ್ಕೆ ಹೆಚ್ಚಿನ ಗಮನ ನೀಡಿದ್ದಾರೆ. 2022-23ರ ಬಜೆಟ್‌ನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ 1.99 ಲಕ್ಷ ಕೋಟಿ ರೂ.ಗಳನ್ನು ನೀಡಲಾಗಿದೆ ಎಂಬ ಅಂಶದಿಂದ ಮೂಲಸೌಕರ್ಯದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಇರುವ ಆಸಕ್ತಿಯನ್ನು ಅಳೆಯಬಹುದಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ನಿರ್ಮಾಣಕ್ಕಾಗಿ ಇದುವರೆಗಿನ ಅತೀ ಹೆಚ್ಚು ಬಜೆಟ್‌ ಹಂಚಿಕೆ ಇದಾಗಿದೆ.

ರಾಷ್ಟ್ರೀಯ ಹೆದ್ದಾರಿ ಉದ್ದ ಶೇ.50ರಷ್ಟು ಏರಿಕೆ: 2013-14ರಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ (Ministry of Road Transport and Highways)ಸುಮಾರು 30 ಸಾವಿರ ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ, ಈ ಬಾರಿ ಈ ಇಲಾಖೆಗೆ ನೀಡಲಾಗಿರುವ ಬಜೆಟ್‌ಅನ್ನು ಗಮನಿಸಿದರೆ, ಇದರಲ್ಲಿ ಶೇ 550ರಷ್ಟು ಹೆಚ್ಚಳವಾಗಿದೆ. ಇನ್ನು ಕಳೆದ ಏಳು ವರ್ಷಗಳಲ್ಲಿ ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ (National Highways) ಉದ್ದ ಶೇ.50ಕ್ಕಿಂತ ಹೆಚ್ಚಿದೆ. ಇದರ ಉದ್ದವು ಏಪ್ರಿಲ್ 2014 ರ ಹೊತ್ತಿಗೆ 91,287 ಕಿಮೀ ಆಗಿತ್ತು, ಇದು 31 ಡಿಸೆಂಬರ್ 2021 ರ ವೇಳೆಗೆ ಸುಮಾರು 1,41,000 ಕಿಮೀಗೆ ಏರಿದೆ.

ಇದನ್ನೂ ಓದಿ: News Hour: ಇಂಡಿಯಾ ವಿಷನ್ 2047, ಇಸ್ಲಾಮಿಕ್ ಆಳ್ವಿಕೆ ಕಡೆಗೆ ಭಾರತ: ಪಿಎಫ್ಐ ಮಹಾ ಷಡ್ಯಂತ್ರ ಬಯಲು

14,850 ಕೋಟಿ ವೆಚ್ಚದಲ್ಲಿ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ ನಿರ್ಮಾಣ: 29 ಫೆಬ್ರವರಿ 2020 ರಂದು ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ (Bundelkhand Expressway) ನಿರ್ಮಾಣಕ್ಕೆ ಪ್ರಧಾನಿ ಮೋದಿ (PM Narendra Modi) ಅಡಿಗಲ್ಲು ಹಾಕಿದರು. ಈ ಎಕ್ಸ್‌ಪ್ರೆಸ್‌ವೇಯ ಕೆಲಸವು ಕೇವಲ 28 ತಿಂಗಳೊಳಗೆ ಪೂರ್ಣಗೊಂಡಿದೆ. 2020ರಲ್ಲಿ ಶಂಕುಸ್ಥಾಪನೆ ಮಾಡುವ ವೇಳೆ 36 ತಿಂಗಳ ಡೆಡ್‌ಲೈನ್‌ಅನ್ನು ನೀಡಲಾಗಿತ್ತು. ಡೆಡ್‌ಲೈನ್‌ಗಿಂತ 8 ತಿಂಗಳ ಮುಂಚೆ ಇದರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 14,850 ಕೋಟಿ ವೆಚ್ಚದಲ್ಲಿ ಈ 296 ಕಿಮೀ ಎಕ್ಸ್‌ಪ್ರೆಸ್‌ವೇ ನಿರ್ಮಾಣವಾಗಿದೆ. ಈ ನಾಲ್ಕು ಲೇನ್ ಎಕ್ಸ್‌ಪ್ರೆಸ್‌ವೇಯನ್ನು ನಂತರ ಆರು ಲೇನ್‌ಗಳಿಗೆ ವಿಸ್ತರಣೆ ಮಾಡುವ ಅವಕಾಶವೂ ಇದೆ.

ಇದನ್ನೂ ಓದಿ: 14,850 ಕೋಟಿ ವೆಚ್ಚದ ಬುಂದೇಲ್‌ಖಂಡ ಎಕ್ಸ್‌ಪ್ರೆಸ್‌ ವೇ ಅನಾವರಣ ಮಾಡಲಿರುವ ಪ್ರಧಾನಿ ಮೋದಿ

ಎಕ್ಸ್‌ಪ್ರೆಸ್‌ವೇಯ ವಿಸ್ತರಣೆಯು ಚಿತ್ರಕೂಟ್ ಜಿಲ್ಲೆಯ ಭರತ್‌ಕುಪ್ ಬಳಿಯ ಗೊಂಡಾ ಗ್ರಾಮದ NH-35 ನಿಂದ ಇಟಾವಾ ಜಿಲ್ಲೆಯ ಕುದ್ರೈಲ್ ಗ್ರಾಮಕ್ಕೆ ವಿಸ್ತರಣೆಯಾಗಿದೆ. ಇಲ್ಲಿ ಇದು ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯನ್ನು ಸಂಧಿಸುತ್ತದೆ. ಈ ಪ್ರದೇಶದಲ್ಲಿ ಸಂಪರ್ಕವನ್ನು ಸುಧಾರಿಸುವುದರ ಜೊತೆಗೆ, ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಸ್ಥಳೀಯರಿಗೆ ಸಾವಿರಾರು ಉದ್ಯೋಗಗಳು ಇಲ್ಲಿ ಸೃಷ್ಟಿಯಾಗಲಿವೆ. ಎಕ್ಸ್‌ಪ್ರೆಸ್‌ವೇ ಪಕ್ಕದಲ್ಲಿ ಬಂದಾ ಮತ್ತು ಜಲೌನ್ ಜಿಲ್ಲೆಗಳಲ್ಲಿ ಕೈಗಾರಿಕಾ ಕಾರಿಡಾರ್‌ಗಳನ್ನು ನಿರ್ಮಿಸುವ ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಎಕ್ಸ್‌ಪ್ರೆಸ್‌ವೇ ಚಿತ್ರಕೂಟ, ಬಂದಾ, ಮಹೋಬಾ, ಹಮೀರ್‌ಪುರ್, ಜಲೌನ್, ಔರೈಯಾ ಮತ್ತು ಇಟಾವಾ ಎಂಬ ಏಳು ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಇದು ಉತ್ತರ ಪ್ರದೇಶದ 6ನೇ ಎಕ್ಸ್‌ಪ್ರೆಸ್‌ವೇ ಆಗಿದೆ. ಅದರೊಂದಿಗೆ ಇನ್ನೂ ಏಳು ಎಕ್ಸ್‌ಪ್ರೆಸ್‌ ವೇಗಳು ನಿರ್ಮಾಣ ಹಂತದಲ್ಲಿದೆ. 

Latest Videos

click me!