ಭಾರತವನ್ನು ಆರ್‌ಎಸ್‌ಎಸ್ ವಿಶ್ವಕ್ಕೆ ಮಾದರಿ ಸಮಾಜವನ್ನಾಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಆರ್‌ಎಸ್‌ಎಸ್ ಕುರಿತು ದೇಶಾದ್ಯಂತ ಆಗಾಗ್ಗೆ ಸಾಕಷ್ಟು ಪರ - ವಿರೋಧ ಚರ್ಚೆಗಳು ನಡೆಯುತ್ತಿರುತ್ತವೆ. ಬಿಜೆಪಿಯನ್ನು ಟೀಕಿಸುವಾಗಲೆಲ್ಲ ಆರ್‌ಎಸ್‌ಎಸ್ ಅನ್ನೂ ಹಲವರು ಟೀಕೆ ಮಾಡುತ್ತಾರೆ. ಅರ್‌ಎಸ್‌ಎಸ್ ಹಿಂಬಾಗಿಲಿನ ರಾಜಕಾರಣ ಮಾಡುತ್ತಿದೆ ಎಂದೂ ಹಲವರು ಆರೋಪಿಸುತ್ತಾರೆ. ಆದರೆ, ಆರ್‌ಎಸ್‌ಎಸ್ ಬಗ್ಗೆ ಸ್ವತ: ಆ ಸಂಘಟನೆಯ ಮುಖ್ಯಸ್ಥರಾದ ಮೋಹನ್ ಭಾಗವತ್ ಹೇಳಿರುವುದು ಹೀಗೆ.. ಆರೆಸ್ಸೆಸ್ ಸಮಾಜವನ್ನು ಜಾಗೃತಗೊಳಿಸುವ ಮತ್ತು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಇದರಿಂದಾಗಿ ಭಾರತವು ಇಡೀ ಜಗತ್ತಿಗೆ "ಮಾದರಿ ಸಮಾಜ" ವಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ದೆಹಲಿಯಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ.
ಅಲ್ಲದೆ, ವ್ಯಕ್ತಿಯಾಗಿ ಅಲ್ಲ ಸಮುದಾಯವಾಗಿ ಸಮಾಜ ಸೇವೆ ಮಾಡಲು ಮುಂದಾಗಬೇಕು ಎಂದು ಮೋಹನ್ ಭಾಗವತ್ ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ದೆಹಲಿ ಘಟಕದಲ್ಲಿ ತನ್ನ ಕಾರ್ಯಕರ್ತರು ನಡೆಸುತ್ತಿರುವ ವಿವಿಧ ಕಲ್ಯಾಣ ಚಟುವಟಿಕೆಗಳ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಈ ಮಾತುಗಳನ್ನಾಡಿದ್ದಾರೆ. "ಸಂಘವು ಸಮಾಜವನ್ನು ಜಾಗೃತಗೊಳಿಸಲು, ಅದನ್ನು ಒಗ್ಗೂಡಿಸಲು ಮತ್ತು ಒಂದೇ ಘಟಕವಾಗಿ ಹೆಚ್ಚು ಸಂಘಟಿತಗೊಳಿಸಲು ಕೆಲಸ ಮಾಡುತ್ತಿದೆ .ಇದರಿಂದಾಗಿ ಭಾರತವು ಇಡೀ ಜಗತ್ತಿಗೆ ಮಾದರಿ ಸಮಾಜವಾಗಿ ಹೊರಹೊಮ್ಮುತ್ತದೆ" ಎಂದು ಭಾಗವತ್ ಹೇಳಿದರು.
ಮೋಹನ್ ಭಾಗವತ್ ತ್ರಿವರ್ಣ ಧ್ವಜ ಹಾರಿಸಿದ ವಿಡಿಯೋ ಬಿಡುಗಡೆ ಮಾಡಿದ ಆರೆಸ್ಸೆಸ್
ಅಲ್ಲದೆ, ಸಮಾಜದ ವಿವಿಧ ವರ್ಗಗಳ ಅನೇಕ ವ್ಯಕ್ತಿಗಳು ದೇಶದ ಸ್ವಾತಂತ್ರ್ಯಕ್ಕೆ ತ್ಯಾಗ ಮತ್ತು ಕೊಡುಗೆ ನೀಡಿದ್ದಾರೆ. ಆದರೆ "ನಾವು ಒಂದು ಸಮಾಜವಾಗಿ ಪ್ರವರ್ಧಮಾನಕ್ಕೆ ಬರಲು ಸಮಯ ಹಿಡಿಯಿತು. ಇನ್ನು, ಭಾರತೀಯರ ಮೂಲ ಸ್ವಭಾವ ಮತ್ತು ಡಿಎನ್ಎ ಪ್ರಕಾರ ಅವರು ಸಮಾಜದಂತೆ ಯೋಚಿಸುತ್ತಾರೆಯೇ ಹೊರತು ವ್ಯಕ್ತಿಗಳಲ್ಲ ಮತ್ತು ನಾವು ಅವರನ್ನು ಮತ್ತಷ್ಟು ಪ್ರೋತ್ಸಾಹಿಸಬೇಕಾಗಿದೆ ಎಂದೂ ಆರ್‌ಎಸ್‌ಎಸ್ ಮುಖ್ಯಸ್ಥರು ದೆಹಲಿಯಲ್ಲಿ ಹೇಳಿದರು. ಈ ವೇಳೆ, ಕಲ್ಯಾಣ ಕಾರ್ಯಗಳ ಕುರಿತು ಮಾತನಾಡಿದ ಭಾಗವತ್, ವೈಯಕ್ತಿಕ ಹಿತಾಸಕ್ತಿಗಳ ಬಗ್ಗೆ ಯೋಚಿಸದೆ ಸಮಾಜಕ್ಕಾಗಿ ಕೆಲಸ ಮಾಡಲು ಸಂಘದ ಕಾರ್ಯಕರ್ತರಿಗೆ ಹೇಳಿದರು. ಹಾಗೂ, ಕಲ್ಯಾಣ ಕಾರ್ಯಗಳನ್ನು ಮಾಡುವಾಗ ‘ನಾನು ಮತ್ತು ನನ್ನದು’ ಎಂಬುದಕ್ಕಿಂತ ನಮಗೆ ಎಂಬುವುದಕ್ಕೆ ಆದ್ಯತೆ ನೀಡಬೇಕು ಮತ್ತು ಇದು ಸಮಾಜವಾಗಿ ವಿಕಸನಗೊಳ್ಳಲು ಸಹಾಯ ಮಾಡುತ್ತದೆ ಎಂದೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ದೆಹಲಿಯಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕ್ರಮವೊಂದರ ವೇಳೆ ಹೇಳಿದರು.
ಇತ್ತಿಚೆಗಷ್ಟೇ, ದೇಶದ ರಾಷ್ಟ್ರಧ್ವಜಕ್ಕಿಂತ ಹೆಚ್ಚಾಗಿ ಭಗವಾ ಧ್ವಜಕ್ಕೆ ಆರೆಸ್ಸೆಸ್ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ ಎಂದು ವಿರೋಧಿಗಳ ಆರೋಪಗಳ ನಡುವೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೂ ಮುನ್ನ ಶನಿವಾರ ನಾಗ್ಪುರದ ತನ್ನ ಕೇಂದ್ರ ಕಚೇರಿಯಲ್ಲಿ "ಹರ್ ಘರ್ ತಿರಂಗಾ" ಅಭಿಯಾನದ ಭಾಗವಾಗಿ ತ್ರಿವರ್ಣ ಧ್ವಜವನ್ನು ಹಾರಿಸಿ ಸುದ್ದಿಯಾಗಿತ್ತು. ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ತ್ರಿವರ್ಣ ಧ್ವಜವನ್ನು ಹಾರಿಸಿದ ವಿಡಿಯೋವನ್ನು ಆರೆಸ್ಸೆಸ್ ತನ್ನ ಸಾಮಾಜಿಕ ಜಾಲತಾಣದ ಪುಟದಲ್ಲಿ ಬಿಡುಗಡೆಯನ್ನೂ ಮಾಡಿತ್ತು 'ಸ್ವಾತಂತ್ರ್ಯದ ಅಮೃತವನ್ನು ಆಚರಿಸಿ'. ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಿ. ರಾಷ್ಟ್ರೀಯ ಸ್ವಾಭಿಮಾನವನ್ನು ಹೆಚ್ಚಿಸಿ' ಎಂದು ಈ ವಿಡಿಯೋ ಪೋಸ್ಟ್ ಮಾಡುವ ವೇಳೆ ಬರೆಯಲಾಗಿತ್ತು. ಇದಕ್ಕೂ ಮೊದಲು, ಸಂಘವು ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ತ್ರಿವರ್ಣ ಧ್ವಜದ ಡಿಸ್ಪ್ಲೇ ಫೋಟೋ ಅನ್ನು ಹಾಕಿತ್ತು. ಇದರೊಂದಿಗೆ ಮೋಹನ್ ಭಾಗವತ್ ತಮ್ಮ ಪ್ರೊಫೈಲ್ ಫೋಟೋ ಕೂಡ ಬದಲಾಯಿಸಿ ತ್ರಿವರ್ಣ ಧ್ವಜದ ಚಿತ್ರವನ್ನು ಹಾಕಿದ್ದಾರೆ. ಹರ್ ಘರ್ ತಿರಂಗಾ ಧ್ವಜ ಅಭಿಯಾನದಲ್ಲಿ ಭಾಗವಹಿಸುವಂತೆ ಸಂಘದ ಮುಖಂಡರು ಸಹ ಮನವಿ ಮಾಡಿದ್ದರು.
52 ವರ್ಷ ಆರೆಸ್ಸೆಸ್ ರಾಷ್ಟ್ರಧ್ವಜ ಹಾರಿಸದಿರಲು ಏನು ಕಾರಣ?: ಸಿದ್ದರಾಮಯ್ಯ