ದಿನಕ್ಕೊಂದು ಮಸೀದಿ ವಿವಾದಗಳು ಬೇಡ: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್!

By Govindaraj SFirst Published Jun 4, 2022, 3:10 AM IST
Highlights

ಕಾಶಿ ಗ್ಯಾನವಾಪಿ ಸೇರಿ ಇತರ ಮಸೀದಿಗಳ ಕುರಿತು ವಿವಾದ ಎದ್ದಿರುವ ನಡುವೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ದ ಮುಖ್ಯಸ್ಥ ಮೋಹನ ಭಾಗವತ್‌ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. 

ನಾಗಪುರ (ಜೂ.04): ಕಾಶಿ ಗ್ಯಾನವಾಪಿ ಸೇರಿ ಇತರ ಮಸೀದಿಗಳ ಕುರಿತು ವಿವಾದ ಎದ್ದಿರುವ ನಡುವೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ದ ಮುಖ್ಯಸ್ಥ ಮೋಹನ ಭಾಗವತ್‌ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ‘ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಹಾಗೂ ವಿವಾದ ಸೃಷ್ಟಿಸುವ ಅಗತ್ಯವಿಲ್ಲ. ದಿನಕ್ಕೊಂದು ಮಸೀದಿ ವಿವಾದ ಸೃಷ್ಟಿಸಬೇಕಿಲ್ಲ. ಮುಸ್ಲಿಮರೇನು ಹೊರಗಿನವರಲ್ಲ. ಅವರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆ’ ಎಂದು ಹೇಳಿದ್ದಾರೆ. 

ಇದೇ ವೇಳೆ, ಅಯೋಧ್ಯೆ ರಾಮಮಂದಿರ ಹೋರಾಟದಲ್ಲಿ ಆರೆಸ್ಸೆಸ್‌ ಪಾಲ್ಗೊಂಡಿತ್ತು ನಿಜ. ಇನ್ನು ಮುಂದೆ ಇಂತಹ ಹೋರಾಟದಲ್ಲಿ ಭಾಗಿಯಲ್ಲ ಎಂದಿದ್ದಾರೆ. ಅಲ್ಲದೆ, ‘ಗ್ಯಾನವಾಪಿ ಮಸೀದಿ ವಿವಾದವನ್ನು ಹಿಂದೂ ಹಾಗೂ ಮುಸ್ಲಿಂ ಪಂಗಡಗಳು ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳಬೇಕು. ಇಲ್ಲವೇ ಕೋರ್ಚ್‌ ಆದೇಶ ಪಾಲಿಸಬೇಕು’ ಎಂದಿದ್ದಾರೆ. ದೇಶಾದ್ಯಂತ ಈಗ ಮಂದಿರ-ಮಸೀದಿ ವಿವಾದ ಸೃಷ್ಟಿಆಗಿರುವ ನಡುವೆಯೇ ಸಂಘದ ಮುಖ್ಯಸ್ಥರ ಈ ಹೇಳಿಕೆ ಭಾರಿ ಮಹತ್ವ ಪಡೆದಿದೆ. 

Kashmir Pandit Exodus ಪಂಡಿತ್ ಸಮುದಾಯ ಕಾಶ್ಮೀರಕ್ಕೆ ಹಿಂದಿರುಗುವ ದಿನ ದೂರವಿಲ್ಲ, ಮೋಹನ್ ಭಾಗವತ್!

ಆರೆಸ್ಸೆಸ್‌ ತರಬೇತಿ ಶಿಬಿರದಲ್ಲಿ ಗುರುವಾರ ಸಂಜೆ ಮಾತನಾಡಿದ ಭಾಗವತ್‌ ಅವರು, ‘ನಮ್ಮ ಜಾಯಮಾನ ಅಲ್ಲದಿದ್ದರೂ, ಅಯೋಧ್ಯೆ ರಾಮಮಂದಿರ ಹೋರಾಟದಲ್ಲಿ ಕೆಲ ಐತಿಹಾಸಿಕ ಕಾರಣ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಆರೆಸ್ಸೆಸ್‌ ಪಾಲ್ಗೊಂಡಿತ್ತು ನಿಜ. ಆದರೆ ಇನ್ನು ಮುಂದೆ ಇಂಥ ಹೋರಾಟದಲ್ಲಿ ಭಾಗಿಯಾಗಲ್ಲ ಎಂದು ಈ ಹಿಂದೆಯೇ ಹೇಳಿದ್ದೆವು. ಈಗಲೂ ನಮ್ಮ ನಿಲುವು ಬದಲಿಲ್ಲ’ ಎಂದು ಸ್ಪಷ್ಟಪಡಿಸಿದರು. ‘ಕಾಶಿ ಗ್ಯಾನವಾಪಿ ಮಸೀದಿ ವಿವಾದದಲ್ಲಿ ಇರುವವರೆಲ್ಲ ಮಾತುಕತೆ ಮೂಲಕ ವಿವಾದ ಇತ್ಯರ್ಥಪಡಿಸಿಕೊಳ್ಳಬೇಕು. ಆದರೆ ಇದು ಎಲ್ಲ ಸಮಯದಲ್ಲೂ ಸಾಧ್ಯ ಆಗದು. 

RSS: ಸ್ವಾವಲಂಬನೆಗಾಗಿ ಉದ್ಯೋಗಾವಕಾಶ ನಿರ್ಮಾಣಕ್ಕೆ ಎಬಿಪಿಎಸ್‌ ಕರೆ

ಹೀಗಾಗಿ ಕೋರ್ಚ್‌ನಲ್ಲಾದರೂ ತೀರ್ಪು ಬಂದಾಗ ಸ್ವೀಕಾರ ಮಾಡಬೇಕು’ ಎಂದರು. ‘ಇತಿಹಾಸವನ್ನು ನಾವು ಮಾಡಿದ್ದಲ್ಲ. ಇಂದಿನ ಹಿಂದೂ-ಮುಸ್ಲಿಮರೂ ಅಲ್ಲ. ಭಾರತದ ಮೇಲೆ ಇಸ್ಲಾಂ ಅರಸರು ದಂಡೆತ್ತಿ ಬಂದಾಗ ಗ್ಯಾನವಾಪಿ ನಿರ್ಮಾಣದಂಥ ಪ್ರಸಂಗ ಜರುಗಿವೆ. ನೂರಾರು ದೇಗುಲ ನಾಶವಾಗಿವೆ. ಹಾಗಂತ ದಿನಕ್ಕೊಂದು ಹೊಸ ವಿವಾದ ಏಕೆ ಸೃಷ್ಟಿಸಬೇಕು? ಎಲ್ಲ ಮಸೀದಿಗಳಲ್ಲೂ ಏಕೆ ಶಿವಲಿಂಗ ಹುಡುಕಬೇಕು?’ ಎಂದು ಪ್ರಶ್ನಿಸಿದರು. ‘ಮುಸ್ಲಿಮರ ದೇವಾರಾಧನೆ ಹೊರದೇಶದ ಪದ್ಧತಿ ಆಧರಿತವಾಗಿದ್ದರೂ, ಅವರು ಹೊರಗಿನವರಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಅವರೂ ಭಾಗಿಯಾಗಿದ್ದಾರೆ’ ಎಂದರು.

click me!