
ನವದೆಹಲಿ(ಏ.18): ಅದು ದಿಲ್ಲಿಯ ಲಾರೆನ್ಸ್ ರಸ್ತೆ. ಬುಧವಾರ ಮಧ್ಯಾಹ್ನ 1.15 ಆಗಿತ್ತು. ಮನೆಯೊಂದರ ಮುಂದೆ 500 ರು. ಮೌಲ್ಯದ 3 ನೋಟುಗಳು ಬಿದ್ದಿದ್ದವು. ಅದನ್ನು ನೋಡಲು ಸುರಕ್ಷಿತ ಅಂತರ ಕಾಯ್ದುಕೊಂಡು ಸುಮಾರು 10-12 ಜನ ನಿಂತಿದ್ದರು. ಆದರೆ ಯಾರೂ ಆ ನೋಟುಗಳನ್ನು ಮುಟ್ಟಿ, ತೆಗೆದುಕೊಂಡು ಹೋಗುವ ಧೈರ್ಯ ಮಾಡಲಿಲ್ಲ. ಏಕೆಂದರೆ ಇವು ಕೊರೋನಾ ಸೋಂಕು ಇರುವ ನೋಟುಗಳು ಇರಬಹುದು ಎಂಬ ಭಯ!
ಹೌದು. ನಂಬಲಾಗದೇ ಹೋದರೂ ಇದು ಸತ್ಯ. ನೋಟು ಬಿದ್ದರೆ ಕ್ಷಣಾರ್ಧದಲ್ಲಿ ಮಂಗಮಾಯ ಆಗುವ ಈ ಸಂದರ್ಭದಲ್ಲಿ ಇದು ವಿಚಿತ್ರ ವಿದ್ಯಮಾನವೇ ಸರಿ. ಏಕೆಂದರೆ ಕೊರೋನಾ ಮಹಿಮೆ.
ನಗರದಲ್ಲಿ ಕೊರೋನಾ 3ನೇ ಹಂತಕ್ಕೆ ಹರಡಿಲ್ಲ!
ಲಾರೆನ್ಸ್ ರಸ್ತೆಯ ಮನೆ ಮುಂದಿನ ರಸ್ತೆಯ ಮೇಲೆ 3 ನೋಟು ಬಿದ್ದುದನ್ನು ಗಮನಿಸಿದ ಜನರು ಇವು ಕೊರೋನ ವೈರಾಣು ಇರುವ ನೋಟುಗಳಾಗಿರಬಹುದು ಎಂದು ಭಯ ಪಟ್ಟರು. ಮಧ್ಯಾಹ್ನ 1.27ಕ್ಕೆ ಕೇಶವಪುರಿ ಪೊಲೀಸ್ ಠಾಣೆಯ ಪೊಲೀಸರಿಗೆ ಫೋನ್ ಮಾಡಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿದರೂ ಮೊದಲು ನೋಟು ಮುಟ್ಟುವ ಧೈರ್ಯ ಮಾಡಲಿಲ್ಲ. ಕೊನೆಗೆ ಹ್ಯಾಂಡ್‌ಗ್ಲೌಸ್ ಧರಿಸಿ ನೋಟುಗಳನ್ನು ಆಯ್ದುಕೊಂಡು ಸ್ಯಾನಿಟೈಸರ್ ಪ್ರೋಕ್ಷಣೆ ಮಾಡಿದರು. ಅಕ್ಕಪಕ್ಕದವರನ್ನು ‘ಇವು ನಿಮ್ಮ ನೋಟಾ?’ ಎಂದು ವಿಚಾರಿಸಿದರು. ಆದರೆ ಯಾರೂ ‘ಇವು ನಮ್ಮವಲ್ಲ’ ಎಂದರು. ಆಗ ಪೊಲೀಸರು, ‘ದುಡ್ಡು ನಮ್ಮವಲ್ಲ ಎಂದು ಜನ ಹೇಳುತ್ತಿದ್ದುದನ್ನು ಗಮನಿಸಿದರೆ ಇದು ರಾಮರಾಜ್ಯವೇ’ ಎಂದು ಮೂಕವಿಸ್ಮಿತರಾದರು.
ಕೊನೆಗೆ ಸ್ವಲ್ಪ ಹೊತ್ತಿನ ಬಳಿಕ ಪೊಲೀಸ್ ಠಾಣೆಗೆ ಚರಣ್‌ಜೀತ್ ಕೌರ್ ಎಂಬ 49 ವರ್ಷದ ಶಾಲಾ ಶಿಕ್ಷಕಿ ಬಂದಳು. ‘ಈ ನೋಟು ನನ್ನವು’ ಎಂದು ಹೇಳಿಕೊಂಡಳು.
ವೈರಸ್ ಪತ್ತೆಗೆ ಸರ್ಕಾರ ಐಡಿಯಾ: ಶೀಘ್ರ ‘ಪೂಲ್ ಸ್ಯಾಂಪಲ್ ಟೆಸ್ಟ್’!
‘ನಾನು ಎಟಿಎಂಗೆ ಹೋಗಿ 10 ಸಾವಿರ ರು. ತೆಗೆಸಿಕೊಂಡು ಬಂದಿದ್ದೆ. ಕೊರೋನಾ ಭಯದಿಂದ ಅವನ್ನು ಸ್ಯಾನಿಟೈಸರ್‌ನಲ್ಲಿ ಅದ್ದಿ ಒಣಗಿಸಲೆಂದು ಬಾಲ್ಕನಿಯಲ್ಲಿ ಇಟ್ಟಿದ್ದೆ. ಅದರಲ್ಲಿ ಮೂರು ನೋಟುಗಳು ಗಾಳಿಗೆ ಹಾರಿ ಹೋಗಿರಬಹುದು. ಈಗ ಇದನ್ನು ಗಮನಿಸಿ ಠಾಣೆಗೆ ಬಂದೆ’ ಎಂದಳು.
ಆಗ ಪೊಲೀಸರು ನೋಟಿನ ಸಂಖ್ಯೆಗಳನ್ನು ಗಮನಿಸಿದಾಗ ಉಳಿದ 8500 ರು. ಮೌಲ್ಯದ ನೋಟಿನ ಸಂಖ್ಯೆಗೂ ಈ ಮೂರು 500 ರು. ನೋಟಿನ ಸಂಖ್ಯೆಗೂ ತಾಳೆ ಆಯಿತು. ಪೊಲೀಸರು ಆಕೆಗೆ ಆ ನೋಟು ಮರಳಿಸಿ ‘ಉಸ್ಸಪ್ಪಾ’ ಎಂದು ಸಮಾಧಾನದ ಉಸಿರು ಬಿಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ