
ರಸ್ತೆಗಳಲ್ಲಿ ಹೋಗುವಾಗ ಕೆಲವೊಮ್ಮೆ ವಾಹನ ಸವಾರರು ಕಾರಣವಿಲ್ಲದೇ ಹೊಡೆದಾಡಿಕೊಳ್ಳುತ್ತಾರೆ. ಕೆಲ ದಿನಗಳ ಹಿಂದಷ್ಟೇ ರೆಡ್ ಸಿಗ್ನಲ್ ಬಿದ್ದಿದ್ದ ವೇಳೆ ಮುಂದೆ ಸಾಗಲು ದಾರಿ ಬಿಡಲಿಲ್ಲ, ಎಂದು ಕಾರು ಸವಾರರು ಆನ್‌ಲೈನ್ ಆಹಾರ ಪೂರೈಕೆ ಮಾಡುತ್ತಿದ್ದ ಡೆಲಿವರಿ ಬಾಯ್ ಮೇಲೆ ಹಲ್ಲೆ ಮಾಡಿದ ಘಟನೆ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಈಗ ಇನ್ನೊಂದು ಕಡೆ ರೋಡ್‌ನಲ್ಲಿ ವಾಹನ ಸವಾರರು ಕಿತ್ತಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ.
@gharkekalesh ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಹರ್ಯಾಣದಲ್ಲಿ ಬ್ರೀಜಾ ಕಾರು ಚಾಲಕ ಹಾಗೂ ಬೈಕ್ ಸವಾರನ ಮಧ್ಯೆ ಕಿತ್ತಾಟ ಎಂದು ಬರೆದು ಈ ವೀಡಿಯೋ ಪೋಸ್ಟ್ ಮಾಡಲಾಗಿದೆ. ವೈರಲ್ ಆದ ವೀಡಿಯೋದಲ್ಲಿ ಕಾರು ಸವಾರ ಉದ್ದೇಶಪೂರ್ವಕವಾಗಿ ಬದಿಗೆ ಸರಿದಿದ್ದ ಬೈಕ್ ಸವಾರನಿಗೆ ಕಾರು ತಾಗಿಸಿ ಬೀಳಿಸಿದಂತೆ ಕಾಣುತ್ತಿದೆ. ಇದರಿಂದ ಸಿಟ್ಟಿಗೆದ್ದ ಬೈಕ್ ಸವಾರ, ಕಾರಿನಿಂದ ಇಳಿದು ಬಂದ ಚಾಲಕನಿಗೆ ಹಿಗ್ಗಾಮುಗ್ಗಾ ಬಗ್ಗಿಸಿ ಕೊಟ್ಟಿದ್ದಾನೆ.
ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಕಾರೊಂದು ಗಲ್ಲಿಯಲ್ಲಿ ಸಾಗುತ್ತಿದ್ದು, ಅಕ್ಕ ಪಕ್ಕ ಬೈಕ್ ನಿಂತಿದೆ. ಬೈಕ್ ಸವಾರ ಕಾರು ಬಂದಿರುವುದನ್ನು ಗಮನಿಸಿ ಬೈಕನ್ನು ಪಕ್ಕಕ್ಕೆ ಸರಿಸಲು ಮುಂದಾಗಿದ್ದಾನೆ. ಈ ವೇಳೆ ಕಾರು ಚಾಲಕನಿಗೆ ಬೆನ್ನು ಕಡಿತಿತ್ತೋ ತಿಳಿಯದು, ಬೈಕ್‌ಗೆ ತನ್ನ ಕಾರನ್ನು ತಾಗಿಸಿ ಅವನನ್ನು ಕೆಳಗೆ ಬೀಳಿಸಿದ್ದಾನೆ. ಇದಾದ ನಂತರ ಆತ ಕಾರಿನಿಂದ ಕೆಳಗೆ ಇಳಿದು ಬಂದಿದ್ದಾನೆ. ಇತ್ತ ಕಾರು ಚಾಲಕನ ಕೃತ್ಯದಿಂದ ಸಿಟ್ಟಿಗೆದ್ದಿದ್ದ ಬೈಕ್ ಸವಾರ ಆತ ಕಾರಿನಿಂದ ಇಳಿದು ಬರುತ್ತಿದ್ದಂತೆ ಸರಿಯಾಗಿ ಬಾರಿಸಿದ್ದಾನೆ.
ಆದರೆ ಕಾರನ್ನು ತಾಗಿಸಿ ಬೈಕ್ ಸವಾರನ ಬೀಳಿಸಿದ ಕಾರು ಚಾಲಕ ಮಾತ್ರ ಬೈಕ್ ಸವಾರನ ಎದುರಿಸಲಾಗದೇ, ಆತ ಕೊಟ್ಟ ಏಟು ತಿಂದುಕೊಂಡು ಸುಮ್ಮನೇ ಹೋಗಿದ್ದಾನೆ. ಒಂದು ರೀತಿ ಇದು ಸುಮ್ಮನಿರಲಾರದೇ ಇರುವೆ ಬಿಟ್ಟುಕೊಂಡರು ಎಂಬಂತಾಗಿದೆ ಕಾರು ಚಾಲಕನ ಸ್ಥಿತಿ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ.
ನೆಟ್ಟಿಗರು ಏನಂದ್ರು?
ಬ್ರೀಜಾ ಕಾರಿನ ಸವಾರ ಜಗಳ ಮಾಡಲು ಸಾಧ್ಯವಿಲ್ಲದಿದ್ದರೆ ಯಾವ ಕರ್ಮಕ್ಕೆ ಆತ ಜಗಳ ಶುರು ಮಾಡಿದ ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. ಬ್ರೀಜಾ ಕಾರಿನ ಸವಾರ ಆಟದಲ್ಲಿ ಸೋತ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ಹೀಗೆ ಕಾಮೆಂಟ್ ಮಾಡ್ತಿರೋದಕ್ಕೆ ನನ್ನ ಜನ ದ್ವೇಷಿಸಬಹುದು ಆದರೆ ಬ್ರೀಜಾ ಕಾರಿನ ಚಾಲಕ ಮಾಡಿದ ಕೃತ್ಯ ನಂಗೆ ಖುಷಿ ನೀಡಿತು ಎಂದು ಒಬ್ಬ ಕಾಮೆಂಟ್ ಮಾಡಿದ್ದಾನೆ. ಈತನ ಮಾತಿಗೆ ಕೆಲವರು ಬೆಂಬಲ ವ್ಯಕ್ತಪಡಿಸಿದ್ದು, ಬೈಕ್ ಸವಾರ ತಪ್ಪಾದ ದಿಕ್ಕಿನಲ್ಲಿ ಬೈಕ್ ನಿಲ್ಲಿಸಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಬಹುತೇಕ ಜನ ಬ್ರೀಜಾ ಕಾರು ಚಾಲಕರಂತಿರುತ್ತಾರೆ. ಶಕ್ತಿ ಇರಲ್ಲ, ಆದರೂ ಭಾರಿ ವಿಶ್ವಾಸದಿಂದ ಜಗಳ ಮಾಡಲು ಬಂದು ಏಟು ತಿಂದುಕೊಂಡು ಹೋಗುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ