ಬಿಹಾರ ಚುನಾವಣೆ: ಆರ್‌ಜೆಡಿ ಕಾರ್ಯಕರ್ತರ ಗೂಂಡಾಗಿರಿ: ಡಿಸಿಎಂ ಬೆಂಗಾವಲು ಪಡೆ ಮೇಲೆ ದಾಳಿ

Published : Nov 06, 2025, 04:02 PM IST
RJD workers attacks DCM vijay sinha convoy

ಸಾರಾಂಶ

ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ, ಲಖಿಸರೈನಲ್ಲಿ ಉಪಮುಖ್ಯಮಂತ್ರಿ ವಿಜಯ್ ಸಿನ್ಹಾ ಅವರ ಬೆಂಗಾವಲು ಪಡೆಯ ಮೇಲೆ ಆರ್‌ಜೆಡಿ ಬೆಂಬಲಿಗರು ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಅವರ ಕಾರಿನ ಮೇಲೆ ಚಪ್ಪಲಿ ಎಸೆದಿದ್ದಾರೆ.

ಬಿಹಾರ ಚುನಾವಣೆ ವೇಳೆ ಘರ್ಷಣೆ:ಡಿಸಿಎಂ ಬೆಂಗಾವಲು ಮೇಲೆ ದಾಳಿ

ಪಾಟ್ನಾ: ಬಿಹಾರ ವಿಧಾನಸಭೆಗೆ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಮತದಾನ ಬಿರುಸಿನಿಂದ ಸಾಗಿದೆ. ಮಧ್ಯಾಹ್ನ 1 ಗಂಟೆಯವರೆಗೆ ಶೇ. 42.31 ರಷ್ಟು ಅಂದಾಜು ಮತದಾನ ದಾಖಲಾಗಿದೆ. ಈ ಮಧ್ಯೆ ಕೆಲವು ಕಡೆಗಳಲ್ಲಿ ಹಿಂಸಾಚಾರ ನಡೆದಿದೆ. ಉಪಮುಖ್ಯಮಂತ್ರಿ ವಿಜಯ್ ಸಿನ್ಹಾ ಅವರ ಬೆಂಗಾವಲು ಪಡೆಯ ಮೇಲೆ ದಾಳಿ ನಡೆದಿದ್ದು, ಕಾರಿನ ಮೇಲೆ ಆರ್‌ಜೆಡಿ ಬೆಂಬಲಿಗರು ಚಪ್ಪಲಿ, ಕಲ್ಲು ಎಸೆದಿದ್ದಾರೆ. ಅವರು ಅಲ್ಲಿನ ಕೊರಿಯರಿ ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಅಡ್ಡಗಟ್ಟಿದ ಆರ್‌ಜೆಡಿ ಬೆಂಬಲಿಗರು, ಅವರ ಕಾರಿನ ಮೇಲೆ ಚಪ್ಪಲಿ ಎಸೆದು ಮುರ್ದಾಬಾದ್ ಎಂದು ಘೋಷಣೆ ಮಾಡಿದ್ದಾರೆ. ಬಿಹಾರದ ಲಖಿಸರೈನಲ್ಲಿ ಈ ಘಟನೆ ನಡೆದಿದೆ.

ಆರ್‌ಜೆಡಿ ಬೆಂಬಲಿಗರು ಉಪಮುಖ್ಯಮಂತ್ರಿ ಮತ್ತು ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ಸಿನ್ಹಾ ಅವರ ಕಾರನ್ನು ಸುತ್ತುವರೆದು, ಚಪ್ಪಲಿಗಳನ್ನು ಎಸೆದು ಘೋಷಣೆಗಳನ್ನು ಕೂಗಿದಾಗ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ. ಆರ್‌ಜೆಡಿ ಬೆಂಬಲಿತ ಪ್ರತಿಭಟನಾಕಾರರು ಅವರ ವಾಹನವನ್ನು ತಡೆದು ವಿಜಯ್ ಸಿನ್ಹಾ ಮುರ್ದಾಬಾದ್ ಎಂದು ಘೋಷಣೆ ಕೂಗುತ್ತಿರುವುವ ದೃಶ್ಯ ವೀಡಿಯೊಗಳಲ್ಲಿ ಸೆರೆಯಾಗಿದೆ.

ಎನ್‌ಡಿಎ ಅಧಿಕಾರಕ್ಕೆ ಬರಲಿದೆ. 

ಘಟನೆಗೆ ಸಂಬಂಧಿಸಿದಂತೆ ಡಿಸಿಎಂ ವಿಜಯ್ ಸಿನ್ಹಾ ಪ್ರತಿಕ್ರಿಯಿಸಿದ್ದು, ಆರ್‌ಜೆಡಿ ಗೂಂಡಾಗಳು ನನ್ನನ್ನು ಹಳ್ಳಿಗೆ ಭೇಟಿ ನೀಡಲು ಬಿಡುತ್ತಿಲ್ಲ. ಎನ್‌ಡಿಎ ಇಲ್ಲಿ ಅಧಿಕಾರಕ್ಕೆ ಬರಲಿದೆ. ಇವರ ಎದೆ ಮೇಲೆ ಬುಲ್ಡೋಜರ್ ಸಾಗಲಿದೆ. ಆರ್‌ಜೆಡಿ ಗೂಂಡಾಗಳು ನನ್ನನ್ನು ಹಳ್ಳಿಗೆ ಭೇಟಿ ನೀಡಲು ಬಿಡುತ್ತಿಲ್ಲ. ವಿಜಯ್ ಸಿನ್ಹಾ ಗೆಲ್ಲಲಿದ್ದಾರೆ ಎಂದು ಅವರು ಹೇಳಿದ್ದಾರೆ. ಅವರು ನನ್ನ ಮತಗಟ್ಟೆ ಏಜೆಂಟ್ ಅನ್ನು ದೂರವಿಟ್ಟರು ಮತ್ತು ಅವರಿಗೆ ಮತ ಚಲಾಯಿಸಲು ಬಿಡಲಿಲ್ಲ. ಅವರ ಗೂಂಡಾಗಿರಿಯನ್ನು ನೋಡಿ... ಇದು ಖೋರಿಯಾರಿ ಗ್ರಾಮದ ಬೂತ್ 404 ಮತ್ತು 405 ಎಂದು ಉಪಮುಖ್ಯಮಂತ್ರಿ ಹಾಗೂ ಲಖಿಸರೈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ವಿಜಯ್ ಕುಮಾರ್ ಸಿನ್ಹಾ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಲಖಿಸರಾಯ್ ಎಸ್ಪಿ ಅಜಯ್ ಕುಮಾರ್ ಮಾತನಾಡಿದ್ದು, ನಾನು ಬೆಳಿಗ್ಗೆ ಇಲ್ಲಿಗೆ ಬಂದಾಗ ಎಲ್ಲವೂ ಶಾಂತವಾಗಿತ್ತು. ಅವರು (ಉಪ ಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ) ಬಂದಾಗ, ಕೆಲವರು ಅವರನ್ನು ವಿರೋಧಿಸಿದರು. ನಾವು ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ. ಘಟನೆಯ ನಂತರ ವಿಜಯ್ ಸಿನ್ಹಾ ಅವರು ತಮಗೆ ವಿಶೇಷ ಪಡೆಯ ಭದ್ರತೆ ಬೇಕು ಎಂದು ಕೇಳಿದ್ದಾರೆ.

ವಿಶೇಷ ಪಡೆ ಕಳುಹಿಸುವಂತೆ ವಿಜಯ್ ಸಿನ್ಹಾ ಮನವಿ

ನಾನು ಹಳ್ಳಿಯಲ್ಲಿದ್ದೇನೆ. ಜನಸಂದಣಿ ಹತ್ತಿರ ಬರುತ್ತಿದೆ. ವಿಶೇಷ ಪಡೆಗಳನ್ನು ಇಲ್ಲಿಗೆ ಕಳುಹಿಸಿ. ನಾನು ಇಲ್ಲಿ ಪ್ರತಿಭಟನೆಗೆ ಕುಳಿತುಕೊಳ್ಳುತ್ತೇನೆ. ಇಲ್ಲಿನ ಎಸ್‌ಪಿ ತುಂಬಾ ದುರ್ಬಲ ಮತ್ತು ಹೇಡಿ. ಆರ್‌ಜೆಡಿ ಗೂಂಡಾಗಳು ಉಪ ಮುಖ್ಯಮಂತ್ರಿಯನ್ನು ಒಳಗೆ ಹೋಗಲು ಬಿಡುತ್ತಿಲ್ಲ. ಅವರು ಕಲ್ಲು ಮತ್ತು ಸಗಣಿ ಎಸೆದಿದ್ದಾರೆ. ಇವರು ಆರ್‌ಜೆಡಿ ಗೂಂಡಾಗಳು. ಅಧಿಕಾರಕ್ಕೆ ಬರದಿದ್ದರೂ ಅವರ ಗೂಂಡಾಗಿರಿಯನ್ನು ನೋಡಿ. ಅವರು ನನ್ನ ಮತಗಟ್ಟೆ ಏಜೆಂಟ್‌ಗೆ ಬೆದರಿಕೆ ಹಾಕಿ ಬೆಳಿಗ್ಗೆ 6.30 ಕ್ಕೆ ಅವರನ್ನು ದೂರವಿಟ್ಟರು. ಅವರು ಮತದಾರರನ್ನು ಹೊರಗೆ ಬರಲು ಬಿಡುತ್ತಿಲ್ಲ ಎಂದು ವಿಜಯ್‌ಕುಮಾರ್ ಸಿನ್ಹಾ ಹೇಳಿದ್ದಾರೆ.

ಬಿಹಾರದ ಲಖಿಸರೈನಲ್ಲಿ ಬಿಹಾರ ಉಪಮುಖ್ಯಮಂತ್ರಿಯವರ ಬೆಂಗಾವಲು ವಾಹನದ ಮೇಲಿನ ದಾಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಡಿಜಿಪಿಗೆ ಕೇಳಿಕೊಂಡಿದ್ದಾರೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಬಿಹಾರದ 18 ಜಿಲ್ಲೆಗಳಲ್ಲಿ 121ಕ್ಷೇತ್ರಗಳಿಗೆ ಇಂದು ಮೊದಲನೇ ಹಂತದ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಬಿಹಾರದಲ್ಲಿ ಶೇ. 42.31 ರಷ್ಟು ಮತದಾನವಾಗಿದೆ. ಗೋಪಾಲ್‌ಗಂಜ್ 46.73% ರಷ್ಟು ಮತದಾನ ಆಗಿದ್ದು, ನಂತರ ಲಖಿಸರಾಯ್ (46.37%) ಮತ್ತು ಬೇಗುಸರಾಯ್ (46.02%), ರಾಜಧಾನಿ ಪಾಟ್ನಾದಲ್ಲಿ ಕನಿಷ್ಠ ಮತದಾನ ಅಂದರೆ ಕೇವ 37.72% ರಷ್ಟು. ಮತದಾನವಾಗಿದೆ.

 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..
ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್