ರಾಮ ಮಂದಿರ ದೇಣಿಗೆ ಸಂಗ್ರಹಕಾರನ ಕೊಲೆ!

By Suvarna NewsFirst Published Feb 13, 2021, 11:23 AM IST
Highlights

ದಿಲ್ಲಿಯಲ್ಲಿ ಬಜರಂಗದಳದ ಕಾರ‍್ಯಕರ್ತನ ಕೊಲೆ| ರಾಮಮಂದಿರ ದೇಣಿಗೆ ಸಂಗ್ರಹದಲ್ಲಿ ತೊಡಗಿದ್ದ ಹಿನ್ನೆಲೆ ಕೊಲೆ ಶಂಕೆ

ನವದೆಹಲಿ(ಫೆ.13): ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಮನೆಗೆ ತೆರಳುತ್ತಿದ್ದ ಬಜರಂಗ ದಳದ ಕಾರ‍್ಯಕರ್ತ ರೋಹಿತ್‌ ಶರ್ಮಾ (25) ಎಂಬಾತನನ್ನು ಚೂರಿ ಇರಿದು ಕೊಲೈಗೈದಿರುವ ಘಟನೆ ಬುಧವಾರ ರಾತ್ರಿ ದೆಹಲಿಯಲ್ಲಿ ನಡೆದಿದೆ.

‘ರೋಹಿತ್‌ ಬಜರಂಗದಳದ ಕಾರ‍್ಯಕರ್ತನಾಗಿದ್ದು, ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಕಾರ‍್ಯದಲ್ಲಿ ತೊಡಗಿಸಿಕೊಂಡಿದ್ದ. ಹೀಗಾಗಿಯೇ ಆತನನ್ನು ಕೊಲೆಗೈದಿದ್ದಾರೆ’ ಎಂದು ರೋಹಿತ್‌ ಕುಟುಂಬಸ್ಥರು ಆರೋಪಿಸಿದ್ದಾರೆ.

ಆದರೆ ಈ ಆರೋಪವನ್ನು ಅಲ್ಲಗಳೆದಿರುವ ಪೊಲೀಸರು, ಪ್ರಕರಣ ಸಂಬಂಧ ವಿವಿಧ ದೃಷ್ಟಿಕೋನದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಈ ಸಂಬಂಧ ಜಾಹಿದ್‌, ಮೆಹ್ತಾಬ್‌, ಡ್ಯಾನಿಶ್‌, ಇಸ್ಲಾಂ ಮತ್ತು ತೌಜೀನ್‌ ಎಂಬ ಐವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

‘ಆರೋಪಿಗಳು ಮತ್ತು ಕೊಲೆಯಾದ ವ್ಯಕ್ತಿ ಎಲ್ಲರೂ ಪಾರ್ಟಿಗೆ ತೆರಳಿದ್ದರು. ಈ ವೇಳೆ ರೆಸ್ಟೋರೆಂಟ್‌ ಮುಚ್ಚುವ ವಿಷಯವಾಗಿ ವಾಗ್ವಾದ ನಡೆದಿತ್ತು. ಬಳಿಕ ಮನೆಗೆ ವಾಪಸ್ಸಾಗುತ್ತಿದ್ದ ರೋಹಿತ್‌ನನ್ನು ಬೆನ್ನಟ್ಟಿದ ಆರೋಪಿಗಳು, ದಾರಿ ಮಧ್ಯದಲ್ಲಿ ಚಾಕುವಿನಿಂದ ಇರಿದು ಕೊಂದಿದ್ದಾರೆ’ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಆದರೆ ರೋಹಿತ್‌ ಮೇಲೆ ಈ ಹಿಂದೆಯೂ ದಾಳಿ ನಡೆದಿತ್ತು. ‘ಜೈ ಶ್ರೀರಾಮ್‌’ ಎನ್ನದಂತೆ ಬೆದರಿಕೆ ಒಡ್ಡಿದ್ದರು. ಈ ಬಾರಿಯೂ ಸಾಯುವ ಕೊನೆ ಗಳಿಗೆಯಲ್ಲೂ ರೋಹಿತ್‌ ‘ ಜೈ ಶ್ರೀರಾಮ್‌’ ಎನ್ನುತ್ತಿದ್ದ’ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

click me!