'ಚೀನಾ ವಿರುದ್ಧ ನಿಲ್ಲಲಾಗದ ಮೋದಿಯಿಂದ ರೈತರಿಗೆ ಬೆದರಿಕೆ'

By Suvarna NewsFirst Published Feb 13, 2021, 10:00 AM IST
Highlights

ತಮ್ಮ ಉದ್ಯಮ ಸ್ನೇಹಿತರ ಹಿತಕ್ಕೆ ಕೃಷಿ ಕಾಯ್ದೆಗಳ ಜಾರಿ: ರಾಹುಲ್‌| ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್‌ ಗಾಂಧಿ ಕಿಡಿ| ಈ ಕಾಯ್ದೆಗಳ ಜಾರಿಯಿಂದ 40 ಕೋಟಿ ಮಂದಿಗೆ ನಷ್ಟ| ಚೀನಾ ವಿರುದ್ಧ ನಿಲ್ಲಲಾಗದ ಮೋದಿಯಿಂದ ರೈತರಿಗೆ ಬೆದರಿಕೆ

ಜೈಪುರ(ಫೆ.13): ದೇಶದ ಗಡಿ ಆಕ್ರಮಿಸಿಕೊಳ್ಳುತ್ತಿರುವ ಚೀನಾವನ್ನು ಎದುರಿಸಿ ನಿಲ್ಲಲಾರದ ಸಾಧ್ಯವಾಗದ ಪ್ರಧಾನಿ ನರೇಂದ್ರ ಮೋದಿ ಅವರು ಬೆದರಿಕೆಯ ಮೂಲಕ ರೈತರನ್ನು ಹತ್ತಿಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ. ಅಲ್ಲದೆ ಈ ನೂತನ 3 ವಿವಾದಾತ್ಮಕ ಕೃಷಿ ಕಾಯ್ದೆಗಳ ಮೂಲಕ ತಮ್ಮ ಉದ್ಯಮ ಸ್ನೇಹಿತರಿಗೆ ಅನುಕೂಲ ಮಾಡಿಕೊಡಲು ಮೋದಿ ಸರ್ಕಾರ ಯತ್ನಿಸುತ್ತಿದೆ ಎಂದು ಗುಡುಗಿದರು.

ರಾಜಸ್ಥಾನದ ಹನುಮಗಢ ಜಿಲ್ಲೆಯಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ರೈತರ ಮಹಾಪಂಚಾಯತ್‌ ಉದ್ದೇಶಿಸಿ ಮಾತನಾಡಿದ ರಾಹುಲ್‌, ‘ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ನಿಗ್ರಹಕ್ಕೆ ನೋಟು ಅಪನಗದೀಕರಣ, ತೆರಿಗೆ ಸುಧಾರಣೆ ಹೆಸರಲ್ಲಿ ಜಿಎಸ್‌ಟಿ ನೀತಿ ರೀತಿಯೇ ನೂತನ ಕೃಷಿ ಕಾಯ್ದೆಗಳು ದೇಶದ ಜನತೆಗೆ ಕರಾಳವಾಗಿರಲಿವೆ. ಕೃಷಿ ಕಾಯ್ದೆಗಳ ಜಾರಿಯಿಂದ ಕೃಷಿಕರಿಗಷ್ಟೇ ಅಲ್ಲದೆ ಕೂಲಿ ಕಾರ್ಮಿಕರು ಸೇರಿ ಒಟ್ಟು 40 ಕೋಟಿ ಮಂದಿ ಮೇಲೆ ಪರಿಣಾಮ ಬೀರಲಿದೆ’ ಎಂದು ದೂರಿದರು.

ಇದೇ ವೇಳೆ ಪೂರ್ವ ಲಡಾಖ್‌ನಲ್ಲಿ ಚೀನಾ ಮತ್ತು ಭಾರತದ ಸೇನಾಪಡೆಗಳ ಹಿಂಪಡೆತದ ಬಗ್ಗೆ ಪ್ರಸ್ತಾಪಿಸಿದ ರಾಹುಲ್‌, ‘ಪ್ಯಾಂಗೊಂಗ್‌ ಸರೋವರದ ಫಿಂಗರ್‌ 4ರವರೆಗೆ ಭಾರತದ ಭೂಪ್ರದೇಶವಿದೆ. ಆದರೆ ಭಾರತ ಸರ್ಕಾರ ಸೇನೆಯನ್ನು ಇದೀಗ ಫಿಂಗರ್‌ 3ಕ್ಕೆ ಕರೆಸಿಕೊಂಡಿದೆ. ಚೀನಾ ವಿರುದ್ಧ ಸೆಟೆದು ನಿಲ್ಲಲಾಗದ ಮೋದಿ ಅವರು ರೈತರನ್ನು ಬೆದರಿಸುತ್ತಿದ್ದಾರೆ. ಇದು ನರೇಂದ್ರ ಮೋದಿ ಅವರ ನಿಜ ಸ್ವರೂಪ’ ಎಂದು ಎಂದರು.

ರೈತರ ಅನುಕೂಲಕ್ಕಾಗಿ ಈ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದು ಮೋದಿ ಹೇಳುತ್ತಾರೆ. ಹಾಗಿದ್ದರೆ ಈ ಕಾಯ್ದೆಗಳ ವಿರುದ್ಧ ರೈತರು ಅಸಮಾಧಾನಗೊಂಡಿದ್ದೇಕೆ? ಪ್ರತಿಭಟನೆ ಕೈಗೊಂಡಿದ್ದೇಕೆ? ಮತ್ತು 200 ರೈತರು ಬಲಿಯಾಗಿದ್ದೇಕೆ? ಎಂದು ಪ್ರಶ್ನಿಸಿದರು.

click me!