
ನವದೆಹಲಿ : ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ಕಾಲ ಕೂಡಿಬಂದಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.
ಮುಸ್ಲಿಂ ಮಹಿಳೆಯರ ವಿರುದ್ಧದ ತಾರತಮ್ಯಕ್ಕೆ ಅವಕಾಶ ಮಾಡಿಕೊಡುವ 1937ರ ಶರಿಯತ್ ಕಾನೂನಿನ ನಿಬಂಧನೆ ರದ್ದು ಮಾಡುವ ಸಂಬಂಧ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
‘ಒಂದು ವೇಳೆ ನ್ಯಾಯಾಲಯವು ಶರಿಯತ್‌ನ ಈ ಉತ್ತರದಾಯಿತ್ವ ವಿಧಿ ರದ್ದು ಮಾಡಿದರೆ ಕಾನೂನು ನಿರ್ವಾತ ಸೃಷ್ಟಿಯಾಗುತ್ತದೆ. ಏಕೆಂದರೆ ಮುಸ್ಲಿಮರ ಉತ್ತರದಾಯಿತ್ವ ನಿರ್ವಹಿಸುವ ಯಾವುದೇ ಶಾಸನಬದ್ಧ ಕಾನೂನೇ ಇಲ್ಲ’ ಎಂದು ಮುಖ್ಯ ನ್ಯಾ। ಸೂರ್ಯ ಕಾಂತ್ ಮತ್ತು ನ್ಯಾ.ಜಾಯ್‌ಮಲ್ಯಾ ಬಾಗ್ಚಿ ಹಾಗೂ ಆರ್.ಮಹದೇವನ್ ಅವರಿದ್ದ ಪೀಠವು ಹೇಳಿತು.
‘ಸುಧಾರಣೆಗಳ ಕುರಿತು ನಾವು ತೋರುವ ಅತಿಯಾದ ಆತುರತೆಯಿಂದ ಮುಸ್ಲಿಂ ಮಹಿಳೆಯರಿಗೆ ಅನುಕೂಲ ಆಗುವುದಕ್ಕಿಂತ ಅನಾನುಕೂಲ ಆಗುವ ಸಾಧ್ಯತೆಯೇ ಹೆಚ್ಚಾಗಬಹುದು. ಒಂದು ವೇಳೆ 1937ರ ಶರಿಯಾ ಕಾಯ್ದೆಯನ್ನೇ ರದ್ದು ಮಾಡಿದರೆ ಅನಗತ್ಯ ಕಾನೂನು ನಿರ್ವಾತ ಸೃಷ್ಟಿಸುವುದಿಲ್ಲವೇ’ ಎಂದು ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರನ್ನು ಸಿಜೆಐ ಪ್ರಶ್ನಿಸಿದರು.
ಆಗ ನ್ಯಾ. ಬಾಗ್ಜಿ ಅವರು, ‘ತಾರತಮ್ಯದ ಕುರಿತು ಅತ್ಯುತ್ತಮ ಪ್ರಕರಣ ನಿಮ್ಮ ಬಳಿ ಇದೆ. ಆದರೆ, ಈ ವಿಚಾರವನ್ನು ನ್ಯಾಯಾಲಯವು ಶಾಸಕಾಂಗದ ವಿವೇಚನೆಗೆ ಬಿಡುವುದೇ ಸೂಕ್ತ. ಏಕೆಂದರೆ ಅವರಿಗೆ ಏಕರೂಪದ ನಾಗರಿಕ ಸಂಹಿತೆ ಕಾಯ್ದೆ ಜಾರಿಯ ಅಧಿಕಾರವೂ ಇದೆ’ ಎಂದು ಹೇಳಿದರು.
ಆಗ ಸಿಜೆಐ, ‘ಇದಕ್ಕೆಲ್ಲ ಏಕರೂಪದ ನಾಗರಿಕ ಸಂಹಿತೆಯೇ ಉತ್ತರ ಆಗಲಿದೆ’ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ನ್ಯಾ.ಬಾಗ್ಜಿ ಅವರು, ‘ಒಬ್ಬನಿಗೆ ಒಬ್ಬಳೇ ಹೆಂಡತಿ ಎನ್ನುವ ಕಾನೂನು ಎಲ್ಲಾ ಸಮುದಾಯಗಳಲ್ಲಿ ಏಕರೂಪದಲ್ಲಿ ಜಾರಿಯಾಗಿಲ್ಲ. ಹಾಗಂತ ನ್ಯಾಯಾಲಯವು ಎಲ್ಲಾ ಬಹುಪತ್ನಿತ್ವ ಪ್ರಕರಣಗಳನ್ನು ಅಸಾಂವಿಧಾನಿಕ ಎಂದು ಘೋಷಿಸಲು ಸಾಧ್ಯವಿಲ್ಲ. ಹೀಗಾಗಿ ನಾವು ಈ ವಿಚಾರವನ್ನು ಶಾಸಕಾಂಗದ ವಿವೇಚನೆಗೆ ಬಿಡುವುದು ಒಳಿತು’ ಎಂದು ಹೇಳಿದರು.
ಮುಸ್ಲಿಂ ಮಹಿಳೆಯರ ಬಗ್ಗೆ ತಾರತಮ್ಯ ಹೊಂದಿರುವ ಕಾಯ್ದೆ ರದ್ದು ಕೋರಿ ಅರ್ಜಿ
ವಿಧಿ ರದ್ದು ಮಾಡಿದರೆ ಉತ್ತರದಾಯಿತ್ವ ಕಾನೂನೇ ಇಲ್ಲದಾಗುತ್ತೆ: ಪೀಠ ಕಳವಳ
ಹೀಗಾಗಿ ನಮ್ಮ ಆದೇಶದ ಬದಲು ಶಾಸಕಾಂಗ ನಿರ್ಧಾರ ಕೈಗೊಳ್ಳುವುದು ಸೂಕ್ತ
ಸರ್ಕಾರಕ್ಕೆ ಏಕರೂಪ ನಾಗರಿಕ ಸಂಹಿತೆ ಜಾರಿಯ ಅಧಿಕಾರವೂ ಇದೆ: ಕೋರ್ಟ್
ಇದಕ್ಕೆಲ್ಲ ಏಕರೂಪದ ನಾಗರಿಕ ಸಂಹಿತೆಯೇ ಉತ್ತರ ಆಗಲಿದೆ ಎಂದ ಸಿಜೆಐ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ