
ಶ್ರೀನಗರ(ಜೂ.27): ಜಮ್ಮು-ಕಾಶ್ಮೀರದ ಭವಿಷ್ಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಸಭೆ ನಡೆಸಿದ ಬಳಿಕವೂ ವಿಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ಮುಂದುವರಿಸಿವೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರಳುವವವರೆಗೆ ತಾವು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಇದೇ ರೀತಿ, ‘ಮೊದಲು ರಾಜ್ಯ ಸ್ಥಾನಮಾನ ಮರಳಿಸುವಿಕೆ. ನಂತರ ಚುನಾವಣೆ’ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಸ್ಪಷ್ಟಪಡಿಸಿದ್ದಾರೆ.
ಆದರೆ, ‘ಈಗಲೂ ಕೆಲವರು ವಿಶೇಷ ಸ್ಥಾನಮಾನದ ಹಗಲುಗನಸು ಕಾಣುತ್ತಿದ್ದಾರೆ. ಇದು ಅಸಾಧ್ಯದ ಮಾತು’ ಎಂದು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದ್ರ ರೈನಾ ತಿರುಗೇಟು ನೀಡಿದ್ದಾರೆ.
ಜು.1ರಂದು ಲಡಾಖ್, ಕಾರ್ಗಿಲ್ ಮುಖಂಡರ ಜತೆ ಕೇಂದ್ರ ಸಭೆ
ಜಮ್ಮು- ಕಾಶ್ಮೀರದ ಮುಖಂಡರ ಜೊತೆಗಿನ ಸಭೆಯ ಬಳಿಕ ಕೇಂದ್ರ ಸರ್ಕಾರ ಜು.1ರಂದು ಕಾರ್ಗಿಲ್ ಮತ್ತು ಲಡಾಖ್‌ನ ರಾಜಕೀಯ ಪಕ್ಷಗಳು ಮತ್ತು ಸಮುದಾಯ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿದೆ.
ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಮುಂಜಾನೆ 11 ಗಂಟೆಗೆ ನಡೆಯಲಿರುವ ಸಭೆಗೆ ಮಾಜಿ ಸಂಸದರು ಮತ್ತು ಸಮಾಜದ ಮುಖಂಡರಿಗೂ ಆಹ್ವಾನ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಜಮ್ಮು- ಕಾಶ್ಮೀರದ ಸರ್ವಪಕ್ಷ ಮುಖಂಡರ ಜೊತೆ ತಮ್ಮ ನಿವಾಸದಲ್ಲಿ ಮೂರೂವರೆ ಗಂಟೆಗಳ ಕಾಲ ಮಹತ್ವದ ಸಭೆ ನಡೆಸಿದ್ದರು. ಈ ವೇಳೆ ಜಮ್ಮು- ಕಾಶ್ಮೀರದಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಚುನಾವಣೆ ನಡೆಸುವ ಬಗ್ಗೆ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಪುನರ್ ಸ್ಥಾಪಿಸುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜು.1ರಂದು ನಡೆಯಲಿರುವ ಸಭೆ ಮಹತ್ವ ಪಡೆದುಕೊಂಡಿದೆ. ಲಡಾಖನ್ನು 2019ರಲ್ಲಿ ಕಾಶ್ಮೀರದಿಂದ ಬೇರ್ಪಡಿಸಿ ಪ್ರತ್ಯೇಕ ಕೇಂದ್ರಾಡಳಿತ ಮಾಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ