ಗುಜರಾತ್‌ನಲ್ಲಿ ಏನಾಗಿತ್ತು ನೆನಪಿಸಿಕೊಳ್ಳಿ: ಬಿಜೆಪಿ ಶಾಸಕ!

By Kannadaprabha NewsFirst Published Feb 23, 2020, 8:42 AM IST
Highlights

ಗುಜರಾತ್‌ನಲ್ಲಿ ಏನಾಗಿತ್ತು ನೆನಪಿಸಿಕೊಳ್ಳಿ| ಹಿಂದೂಗಳಿಗೆ ಎಚ್ಚರಿಸಿದ್ದ್ದ ಪಠಾಣ್‌ಗೆ ಬಿಜೆಪಿ ಶಾಸಕನ ತಿರುಗೇಟು

ನಾಗಪುರ[ಫೆ.23]: ‘15 ಕೋಟಿ ಮುಸ್ಲಿಮರು 100 ಕೋಟಿ ಬಹುಸಂಖ್ಯಾತರನ್ನು ಮಣಿಸಬಲ್ಲರು’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಎಐಎಂಐಎಂ ಮುಖಂಡ ವಾರಿಸ್‌ ಪಠಾಣ್‌ ಅವರಿಗೆ ತಿರುಗೇಟು ನೀಡುವ ಭರದಲ್ಲಿ ಮಹಾರಾಷ್ಟ್ರ ಬಿಜೆಪಿ ಶಾಸಕ ಗಿರೀಶ್‌ ವ್ಯಾಸ್‌ ಕೂಡ ವಿವಾದಿತ ಹೇಳಿಕೆ ನೀಡಿದ್ದಾರೆ.

‘ಗುಜರಾತ್‌ನಲ್ಲಿ ಏನಾಯ್ತು ಎಂಬುದನ್ನು ಪಠಾಣ್‌ ನೆನಪಿಸಿಕೊಳ್ಳಬೇಕು’ ಎಂದು ಹೇಳಿರುವ ವ್ಯಾಸ್‌, ‘ಮುಸ್ಲಿಂ ಸಮುದಾಯವು ಪಠಾಣ್‌ರಂಥವರಿಗೆ ಬಹಿಷ್ಕಾರ ಹಾಕಬೇಕು. ಅವರಿಗೆ ಪಾಠ ಕಲಿಸಬೇಕು’ ಎಂದು ಆಗ್ರಹಿಸಿದ್ದಾರೆ.

2002ರಲ್ಲಿ ನಡೆದ ಗುಜರಾತ್‌ ಗಲಭೆಗಳನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ. ಆಗ ಅಲ್ಲಿ 1000 ಜನರ ಮಾರಣಹೋಮ ನಡೆದಿತ್ತು. ಅದರಲ್ಲಿ ಅಲ್ಪಸಂಖ್ಯಾತರೇ ಹೆಚ್ಚಿದ್ದರು.

‘ಯುವಕರು, ದೇಶಪ್ರೇಮಿಗಳು ಹಾಗೂ ಪ್ರತಿ ಬಿಜೆಪಿ ಕಾರ್ಯಕರ್ತರು ವಾರಿಸ್‌ ಪಠಾಣ್‌ ಬಳಸಿದ ಭಾಷೆಯಲ್ಲೇ ಪಾಠ ಕಲಿಸಲು ಸಿದ್ಧರಿದ್ದಾರೆ. ನಾವು ಸಹಿಷ್ಣುಗಳು ಹಾಗೂ ತಾಳ್ಮೆ ಇದೆ. ಆದರೆ ಅವರನ್ನು ಎದುರಿಸಲು ನಮ್ಮಿಂದ ಆಗದು ಎಂದು ಭಾವಿಸಿದರೆ ತಪ್ಪು. ಗುಜರಾತ್‌ನಲ್ಲಿನ ಘಟನೆಗಳನ್ನು ನೆನಪಿಸಿಕೊಳ್ಳಿ. ಅದನ್ನು ಜ್ಞಾಪಿಸಿಕೊಂಡರೆ ಅಲ್ಲಿನ ಮುಸ್ಲಿಮರು ಮತ್ತೆ ಎದ್ದೇಳಲ್ಲ’ ಎಂದು ವ್ಯಾಸ್‌ ಟೀವಿ ಚಾನೆಲ್‌ ಒಂದಕ್ಕೆ ತಿಳಿಸಿದ್ದಾರೆ.

ಈ ನಡುವೆ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ ಕೂಡಾ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ಹಿಂದೂಗಳ ಸಹಿಷ್ಣುತೆಯನ್ನು ಯಾರೂ ದೌರ್ಬಲ್ಯ ಎಂದು ಪರಿಗಣಿಸುವ ತಪ್ಪನ್ನು ಯಾರೂ ಮಾಡಬಾರದು. ತಮ್ಮ ಹೇಳಿಕೆ ಸಂಬಂಧ ವಾರಿಸ್‌ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ಅವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

click me!