
ನವದೆಹಲಿ (ಫೆ.19): ದೆಹಲಿ ಮುಖ್ಯಮಂತ್ರಿ ಹುದ್ದೆಗೆ 50 ವರ್ಷದ ರೇಖಾ ಗುಪ್ತಾ ಅವರ ಹೆಸರು ಅಂತಿಮಗೊಂಡಿದೆ. ಮೂಲಗಳ ಪ್ರಕಾರ, ಆರ್‌ಎಸ್‌ಎಸ್ ಅವರ ಹೆಸರನ್ನು ಪ್ರಸ್ತಾಪಿಸಿದ್ದು, ಅದನ್ನು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಪ್ಪಿಕೊಳ್ಳಲಾಗಿದೆ. ಪಕ್ಷದ ವೀಕ್ಷಕರಾದ ರವಿಶಂಕರ್ ಪ್ರಸಾದ್ ಮತ್ತು ಓಂ ಪ್ರಕಾಶ್ ಧಂಕರ್ ಇಬ್ಬರೂ ಪಕ್ಷದ ಕಚೇರಿಯನ್ನು ತಲುಪಿದ ಬಳಿಕ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ಘೋಷಣೆಯಾಗಿದೆ. ರೇಖಾ ಗುಪ್ತಾ ಅಲ್ಲದೆ, ಅರವಿಂದ್‌ಕೇಜ್ರಿವಾಲ್‌ರನ್ನು ಸೋಲಿಸಿದ್ದ ಪರ್ವೇಶ್ ವರ್ಮಾ, ಬಿಜೆಪಿಯ ಪಂಜಾಬಿ ಫೇಸ್ ಆಗಿರುವ ಅನೀಶ್ ಸೂದ್, ವಿಜೇಂದರ್ ಗುಪ್ತಾ ಹಾಗೂ ಸತೀಶ್ ಉಪಾಧ್ಯಾಯ ಹೆಸರು ಕೂಡ ಚರ್ಚೆಯಲ್ಲಿದ್ದವು. ಸಭೆಯ ಮಾಹಿತಿಯ ಪ್ರಕಾರ, ಮುಖ್ಯಮಂತ್ರಿಯೊಂದಿಗೆ 6 ಮಂದಿ ಸಚಿವರು ಕೂಡ ಗುರುವಾರ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎನ್ನಲಾಗಿದೆ. ಶಾಸಕಾಂಗ ಪಕ್ಷದ ಸಭೆಗೂ ಮುನ್ನ, ವೀಕ್ಷಕರು ಶಾಸಕರಾದ ಪ್ರವೇಶ್ ವರ್ಮಾ ಮತ್ತು ಸತೀಶ್ ಉಪಾಧ್ಯಾಯ ಅವರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿದರು. ವೀಕ್ಷಕರು ಎಲ್ಲಾ ಶಾಸಕರೊಂದಿಗೆ ಒಬ್ಬೊಬ್ಬರಾಗಿ ಮಾತನಾಡಿದ್ದರು.
ಇತ್ತೀಚೆಗೆ ಮುಗಿದ ದೆಹಲಿ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷದ 10 ವರ್ಷದ ಅಧಿಕಾರವನ್ನು ಕೊನೆ ಮಾಡಿದ ಬಿಜೆಪಿ 27 ವರ್ಷಗಳ ಬಳಿಕ ದೆಹಲಿಯಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ. 70 ವಿಧಾನಸಭಾ ಕ್ಷೇತ್ರಗಳ ದೆಹಲಿಯಲ್ಲಿ ಬಿಜೆಪಿ 48 ಸೀಟ್‌ಗಳಲ್ಲಿ ಗೆಲುವು ಸಾಧಿಸಿದ್ದರೆ, ಆಮ್ ಆದ್ಮಿ ಪಾರ್ಟಿ 22 ಸೀಟ್‌ಗಳಲ್ಲಿ ಜಯ ಸಾಧಿಸಿದೆ. ಕಾಂಗ್ರೆಸ್ ಮತ್ತೊಮ್ಮೆ ದೆಹಲಿಯಲ್ಲಿ ಕನಿಷ್ಠ ಖಾತೆ ತೆರೆಯಲು ಕೂಡ ವಿಫಲವಾಗಿದೆ. ಪರ್ವೇಶ್ ವರ್ಮಾ ಉಪಮುಖ್ಯಮಂತ್ರಿಯಾಗಲಿದ್ದರೆ, ಸಿಎಂ ರೇಸ್‌ನಲ್ಲಿದ್ದ ವಿಜೇಂದ್ರ ಗುಪ್ತಾ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.
ರೇಖಾ ಗುಪ್ತಾ ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಶಾಲಿಮಾರ್ ಭಾಗ್ ಕ್ಷೇತ್ರದಲ್ಲಿ ಅವರು ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ವಂದನಾ ಕುಮಾರಿಯನ್ನು 29,595 ಮತಗಳ ಅಂತರದಿಂದ ಸೋಲಿಸಿದ್ದರು.
ರೇಖಾ ಗುಪ್ತಾ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಬಾಲ್ಯದಿಂದಲೂ ಗುರುತಿಸಿಕೊಂಡವರು. ಆರೆಸ್ಸೆಸ್‌ನ ವಿದ್ಯಾರ್ಥಿ ಘಟಕ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮೂಲಕ ಅವರಿ ವಿದ್ಯಾರ್ಥಿ ರಾಜಕೀಯಕ್ಕೂ ಇಳಿದಿದ್ದರು.
1994-95ರಲ್ಲಿ ದೌಲತ್ ರಾಮ್ ಕಾಲೇಜಿನ ಚುನಾವಣೆಯಲ್ಲಿ ಕಾರ್ಯದರ್ಶಿಯಾಗಿ ಆಯ್ಕೆಯಾದ ರೇಖಾ ಗುಪ್ತಾ, 1995-96ರಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಘಟಕ (ಡಿಯುಎಸ್‌ಯು) ಕಾರ್ಯದರ್ಶಿಯಾಗಿದ್ದರು. 1996-97ರಲ್ಲಿ ಇದೇ ಘಟಕದ ಅಧ್ಯಕ್ಷರೂ ಆಗಿದ್ದರು.
ದೆಹಲಿ ಸಿಎಂ ಇಂದು ಸಂಜೆ ಘೋಷಣೆ, ರಾಮ್‌ಲೀಲಾ ಮೈದಾನದಲ್ಲಿ ಪ್ರಮಾಣ ವಚನಕ್ಕೆ ಬಿಜೆಪಿ ಭರದ ಸಿದ್ದತೆ
2003-04ರಲ್ಲಿ ದೆಹಲಿ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿಯಾಗಿದ್ದ ರೇಖಾ ಗುಪ್ತಾ, 2004-06ರಲ್ಲಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ಕೂಡ ಆಗಿದ್ದರು. 2007ರ ಏಪ್ರಿಲ್‌ನಲ್ಲಿ ಉತ್ತರ ಪಿತಾಂಪುರದ ಬಿಜೆಪಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು. 2010ರ ಮಾರ್ಚ್‌ನಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದರು. ಪ್ರಸ್ತುತ ಇವರು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದು, ಶಾಲಿಮಾರ್ ಭಾಗ್ ವಾರ್ಡ್‌ನ ಪಾಲಿಕೆ ಸದಸ್ಯ ಕೂಡ ಆಗಿದ್ದರು.
ರಾತ್ರಿ ಸಿಇಸಿ ಆಯ್ಕೆ ಸಂವಿಧಾನದ ಸ್ಫೂರ್ತಿಗೆ ಅಪಚಾರ ಎಂದ ರಾಹುಲ್, ರಮಾದೇವಿ ಆಯ್ಕೆ ಕೆದಕಿದ ಬಿಜೆಪಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ