
ಹೈದರಾಬಾದ್: ಭಾರತದ ಕಾನೂನು ವ್ಯವಸ್ಥೆ ವಿಭಿನ್ನ ಸವಾಲುಗಳನ್ನು ಎದುರಿಸುತ್ತಿವೆ. ಕೆಲವು ಪ್ರಕರಣಗಳು ದಶಕಗಳಾದರೂ ಮುಗಿಯುವುದಿಲ್ಲ. ವಿಚಾರಣಾಧೀನ ಕೈದಿಯೊಬ್ಬ ಜೈಲಿನಲ್ಲಿ ಹತ್ತಾರು ವರ್ಷ ಕಳೆದ ನಂತರ ಆತ ನಿರಪರಾಧಿ ಎಂಬ ತೀರ್ಪು ಬರುತ್ತದೆ. ಇಂಥ ಸವಾಲುಗಳನ್ನು ಪರಿಹರಿಸಬೇಕಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ತಿಳಿಸಿದ್ದಾರೆ.
ಹೈದರಾಬಾದ್‌ನ ನಲ್ಸರ್ ಕಾನೂನು ವಿವಿಯ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ‘ನಮ್ಮ ಕಾನೂನು ವ್ಯವಸ್ಥೆಯನ್ನು ಸರಿಪಡಿಸುವ ಅಗತ್ಯವಿದೆ. ವಿಚಾರಣಾಧೀನ ಕೈದಿಯಾಗಿ ವರ್ಷಗಳ ಕಾಲ ಜೈಲಿನಲ್ಲಿ ಕಳೆದ ನಂತರ ವ್ಯಕ್ತಿಯೊಬ್ಬ ನಿರಪರಾಧಿ ಎಂದು ಸಾಬೀತಾದ ಪ್ರಕರಣಗಳನ್ನು ನಾವು ನೋಡಿದ್ದೇವೆ. ನನ್ನ ಸಹವರ್ತಿ ನಾಗರಿಕರು ಇಂಥ ಸವಾಲುಗಳನ್ನು ಎದುರಿಸುತ್ತಾರೆ ಎಂಬ ಆಶಾವಾದದಲ್ಲಿ ನಾನಿರುತ್ತೇನೆ.
ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಒಂದು ಉತ್ತಮ ಪ್ರತಿಭೆ ಸಹಾಯ ಮಾಡಬಹುದು’ ಎಂದರು. ಇದೇ ವೇಳೆ, ವಿದ್ಯಾರ್ಥಿವೇತನ ಪಡೆದು ವಿದೇಶಗಳಿಗೆ ಕಲಿಯಲು ಹೋಗಿ. ಅಪ್ಪ ಅಮ್ಮನ ಮೇಲೆ ಆರ್ಥಿಕ ಹೊರೆ ಹೊರಿಸಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ತೆಲಂಗಾಣ ಸಿಎಂ ರೇವಂತ ರೆಡ್ಡಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶ ಪಿ.ಎಸ್. ನರಸಿಂಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟ್ ತನ್ನ ಕಚೇರಿ ಕಾರ್ಯಪದ್ಧತಿಯಲ್ಲಿ ಪ್ರಮುಖ ಬದಲಾವಣೆ
ಭಾರತದ ಸುಪ್ರೀಂ ಕೋರ್ಟ್ ತನ್ನ ಕಚೇರಿ ಕಾರ್ಯಪದ್ಧತಿಯಲ್ಲಿ ಪ್ರಮುಖ ಬದಲಾವಣೆಯನ್ನು ಜುಲೈ 14, 2025 ರಿಂದ ಜಾರಿಗೆ ತರಲಿದ್ದು, ಇದನ್ನು "ಸುಪ್ರೀಂ ಕೋರ್ಟ್ (ತಿದ್ದುಪಡಿ) ನಿಯಮಗಳು, 2025" ಎಂಬ ಹೆಸರಿನಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ತಿದ್ದುಪಡಿ ಭಾರತದ ಸಂವಿಧಾನದ ವಿಧಿ 145ರ ಅಡಿಯಲ್ಲಿ ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ಜಾರಿಗೆ ತರಲಾಗುತ್ತಿದೆ.
4.30 ನಂತರ ಕಚೇರಿ ಬಂದ್
ಕಚೇರಿಯಲ್ಲಿ ಸಂಜೆ 4.30 ನಂತರ ಯಾವ ಉದ್ಯೋಗಿಗಳು ಕೂಡ ಕೆಲಸ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೊಸ ನಿಯಮದಲ್ಲಿ ಹೇಳಲಾಗಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಾತ್ರವೇ ಕೆಲಸದ ಸಮಯವನ್ನು ಹೆಚ್ಚಿಸಬಹುದು ಎಂದಿದೆ. ಜೂನ್ 16 ರಂದು ಸುಪ್ರೀಂ ಕೋರ್ಟ್ (ತಿದ್ದುಪಡಿ) ನಿಯಮಗಳು 2025 ರ ಅಡಿಯಲ್ಲಿ ತನ್ನ ಕಚೇರಿ ಕೆಲಸದ ಸಮಯದಲ್ಲಿ ಬದಲಾವಣೆಗಳನ್ನು ಅಧಿಕೃತವಾಗಿ ಪ್ರಕಟಿಸಿದೆ.
ತಿಂಗಳ 4 ಶನಿವಾರವೂ ಕೆಲಸ ಕಡ್ಡಾಯ
ಒಂದು ಪ್ರಮುಖ ಆಡಳಿತಾತ್ಮಕ ಪರಿಷ್ಕರಣೆಯಲ್ಲಿ, ಕಾನೂನು ಮತ್ತು ನ್ಯಾಯ ಸಚಿವಾಲಯವು ಸುಪ್ರೀಂ ಕೋರ್ಟ್ (ತಿದ್ದುಪಡಿ) ನಿಯಮಗಳು 2025ರ ಅನ್ವಯ ಸುಪ್ರೀಂ ಕೋರ್ಟ್ ನೋಂದಾವಣೆ ಮತ್ತು ಕಚೇರಿಗಳಿಗೆ ಎರಡನೇ ಮತ್ತು ನಾಲ್ಕನೇ ಶನಿವಾರ ಇದ್ದ ರಜೆಗಳನ್ನು ರದ್ದು ಮಾಡಿ ಮತ್ತೆ ಕೆಲಸ ಮಾಡುವ ದಿನದ ಪಟ್ಟಿಗೆ ತಂದಿದೆ. ಭಾರತದ ಗೆಜೆಟ್‌ನಲ್ಲಿ ಪ್ರಕಟವಾದ ಅಧಿಸೂಚನೆಯ ಪ್ರಕಾರ, ತಿದ್ದುಪಡಿ ಜುಲೈ 14, 2025 ರಿಂದ ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ