
ನವದೆಹಲಿ(ಜೂ.25) ಬೆಂಗಳೂರು ನಗರದ ಟ್ರಾಫಿಕ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಮ್ಮ ಮೆಟ್ರೋ ಸಂಚಾರ ಇಲ್ಲದ ಕಡೆ ಪ್ರಯಾಣ ಸವಾಲೇ ಸರಿ. ಬೆಂಗಳೂರು ನಗರ ವಾಸಿಗಳ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡಲು ಇದೀಗ ನಮ್ಮ ಮೆಟ್ರೋ ವಿಸ್ತರಣೆ ಮಾಡಲಾಗುತ್ತಿದೆ. ಮೆಟ್ರೋ ನಿಲ್ದಾಣಗಳನ್ನು 101ಕ್ಕೆ ಏರಿಸಲಾಗುತ್ತಿದೆ. ಹಳಿಯನ್ನು 115 ಕಿಲೋಮೀಟರ್‌ಗೆ ವಿಸ್ತರಿಸಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸಾರ್ವಜನಿಕ ವಲಯದ ಉದ್ಯಮ ಆರ್‌ಇಸಿ 3,045 ಕೋಟಿ ರೂ ನೆರವು ಘೋಷಿಸಿದೆ.
ಬೆಂಗಳೂರು ಮೆಟ್ರೋದ ಎರಡನೇ ಹಂತದ ಯೋಜನೆಯಡಿ ಮೆಟ್ರೋ ಹಳಿಗಳ ನಿರ್ಮಾಣ ಮತ್ತು ಅಭಿವೃದ್ಧಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತಕ್ಕೆ (ಬಿ ಎಂ ಆರ್ ಸಿ ಎಲ್ ಗೆ) ಕೇಂದ್ರದ ಇಂಧನ ಸಚಿವಾಲಯದಡಿಯಲ್ಲಿನ ಮಹಾರತ್ನ ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾದ ಆರ್‌ಇಸಿ ಲಿಮಿಟೆಡ್ 3,045 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲು ನಿರ್ಧರಿಸಿದೆ.ಆರ್‌ಇಸಿ ಮಂಡಳಿ ಸಭೆಯಲ್ಲಿ ಬಿ ಎಂ ಆರ್ ಸಿ ಎಲ್ ನ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ.
Bengaluru: ಮೆಟ್ರೋದೊಳಗೆ ಲೌಡ್ ಸ್ಪೀಕರ್ ಸಂಗೀತ ನಿಷೇಧ: ಬಿಎಂಆರ್‌ಸಿಎಲ್ ಸೂಚನೆ
ನಮ್ಮ ಮೆಟ್ರೋದ ಮೊದಲ ಹಂತದಲ್ಲಿ ಪ್ರಸ್ತುತ ಇರುವ ಎರಡು ಕಾರಿಡಾರ್ ಅಂದರೆ ಪೂರ್ವ-ಪಶ್ಚಿಮ ಕಾರಿಡಾರ್ ಹಾಗೂ ಉತ್ತರ-ದಕ್ಷಿಣ ಕಾರಿಡಾರ್ ಗಳ ವಿಸ್ತರಣೆ ಕಾರ್ಯವನ್ನು ಎರಡನೇ ಹಂತದ ಯೋಜನೆಯಡಿ ಕೈಗೊಳ್ಳಲಾಗುತ್ತಿದೆ. ಇದರ ಜೊತೆಗೆ ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೆ ಮತ್ತು ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಎರಡು ಹೊಸ ಮಾರ್ಗಗಳ ಕಾಮಗಾರಿಯೂ ಸೇರಿದೆ. ಈ ಮಾರ್ಗಗಳು ನಗರದ ಕೆಲವು ಅತಿಹೆಚ್ಚಿನ ಜನಸಂದಣಿಯ ಮತ್ತು ವಾಹನ ದಟ್ಟಣೆಯ ಭಾಗಗಳಲ್ಲಿ ಹಾದು ಹೋಗಲಿದೆ.
ಯೋಜನೆಯ ಎರಡನೇ ಹಂತ ಸಂಪರ್ಕವನ್ನು ಹೆಚ್ಚಿಸಲಿದ್ದು, ಬೆಂಗಳೂರಿನ ಜನದಟ್ಟಣೆಯ ಪ್ರದೇಶಗಳಲ್ಲಿ ಟ್ರಾಫಿಕ್ ದಟ್ಟಣೆ ನಿವಾರಿಸಲಿದೆ. ಎರಡನೇ ಹಂತ (72.9 ಕಿಲೋಮೀಟರ್) ಪೂರ್ಣಗೊಂಡರೆ ನಮ್ಮ ಮೆಟ್ರೋದ ಒಟ್ಟು ಹಳಿ ಮಾರ್ಗ 101 ನಿಲ್ದಾಣಗಳೊಂದಿಗೆ 114.39 ಕಿಲೋಮೀಟರ್ ನಷ್ಟಿರಲಿದೆ.
ಬೆಂಗಳೂರಿನಲ್ಲಿ ಮತ್ತೆ 3 'ನಮ್ಮ ಮೆಟ್ರೋ' ಮಾರ್ಗ: ಸರ್ಕಾರಕ್ಕೆ ಪ್ರಸ್ತಾವ
ಆರ್ ಇ ಸಿ ಲಿಮಿಟೆಡ್, ದೇಶಾದ್ಯಂತ ಇಂಧನ ವಲಯದ ಹಣಕಾಸು ಮತ್ತು ಅಭಿವೃದ್ಧಿಗೆ ಗಮನಹರಿಸಿರುವ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಯಾಗಿದೆ. ಬಿ ಎಂ ಆರ್ ಸಿ ಎಲ್ ಗೆ ಹಣಕಾಸು ನೆರವು ನೀಡಿರುವುದು ಮೂಲಸೌಕರ್ಯ ಅಭಿವೃದ್ಧಿಗೆ ಹಣಕಾಸು ನೆರವು ನೀಡಬೇಕೆಂಬ ಆರ್ ಇ ಸಿ ಯ ಉದ್ದೇಶದ ಭಾಗವಾಗಿದೆ. 1969 ರಲ್ಲಿ ಸ್ಥಾಪಿತವಾಗಿ ಆರ್ ಇ ಸಿ ಲಿಮಿಟೆಡ್, 50ಕ್ಕೂ ಹೆಚ್ಚು ವರ್ಷಗಳ ಕಾರ್ಯಾಚರಣೆ ಪೂರ್ಣಗೊಳಿಸಿದೆ. ಇಂಧನ ವಲಯದ ಇಡೀ ಸರಪಳಿಗೆ ಅಂದರೆ ಉತ್ಪಾದನೆ, ಪ್ರಸರಣ, ಹಂಚಿಕೆ ಮತ್ತು ನವೀಕರಿಸಬಹುದಾದ ಇಂಧನ ಸೇರಿದಂತೆ ವಿವಿಧ ಬಗೆಯ ಯೋಜನೆಗಳಿಗೆ ಹಣಕಾಸು ನೆರವು ನೀಡುತ್ತದೆ. ಆರ್ ಇ ಸಿ ನೆರವಿನಿಂದಾಗಿ ಭಾರತದಲ್ಲಿ ಪ್ರತಿ ನಾಲ್ಕನೇ ದೀಪ ಬೆಳಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ