Omicron Threat: ಲಸಿಕೆ ಪಡೆದವರಿಗೂ ಒಮಿಕ್ರೋನ್‌ ಬರೋದೇಕೆ?

Published : Dec 27, 2021, 04:58 AM ISTUpdated : Dec 27, 2021, 05:07 AM IST
Omicron Threat: ಲಸಿಕೆ ಪಡೆದವರಿಗೂ ಒಮಿಕ್ರೋನ್‌ ಬರೋದೇಕೆ?

ಸಾರಾಂಶ

* ಭೂಗತವಾಗಿಯೇ ಜೀವಕೋಶಗಳ ನಡುವೆ ಸಂಚರಿಸಿ ವ್ಯಾಪಿಸುತ್ತಿರುವ ವೈರಸ್‌ * ಪ್ರತಿಕಾಯ ಶಕ್ತಿಯಿಂದ ದೂರವೇ ಉಳಿದು ದೇಹದೊಳಗೆ ಹಬ್ಬುತ್ತಿರುವ ಸೋಂಕು * ಲಸಿಕೆ ಪಡೆದರೆ ಸಾಲದು, ಮಾರ್ಗಸೂಚಿ ಪಾಲನೆ ಅತ್ಯಂತ ಅವಶ್ಯಕ: ತಜ್ಞರ ಎಚ್ಚರಿಕೆ

ಒಹಾಯೋ(ಡಿ.27): ಲಸಿಕೆ ಪಡೆದುಕೊಂಡ ನಂತರವೂ ಜನರು ಒಮಿಕ್ರೋನ್‌ ರೂಪಾಂತರಿ ಸೇರಿದಂತೆ ಕೋವಿಡ್‌ ಸೋಂಕಿಗೆ ತುತ್ತಾಗಲು ಕಾರಣವೇನು? ಅದರಲ್ಲೂ ಎರಡೂ ಡೋಸ್‌ ಜೊತೆಗೆ ಬೂಸ್ಟರ್‌ ಡೋಸ್‌ ಪಡೆದವರಲ್ಲೂ ಸಾರ್ಸ್‌ -ಕೋವ್‌-2 ವೈರಸ್‌ ಹಾಗೂ ಇತ್ತೀಚಿನ ಒಮಿಕ್ರೋನ್‌ನಂಥ ರೂಪಾಂತರಿ ವೈರಸ್‌ ತನ್ನ ಅಟ್ಟಹಾಸ ತೋರಿಸುತ್ತಿರುವುದು ಹೇಗೆ? ಏಕೆ? ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

ಕೊರೋನಾ ವೈರಸ್‌ ಅನ್ನು ನಿಗ್ರಹಿಸಲು ವಿಜ್ಞಾನಿಗಳು ಯಾವ ಲಸಿಕೆ ಉತ್ಪಾದಿಸಿ ದೇಹದೊಳಗೆ ಪ್ರತಿಕಾಯ ಶಕ್ತಿ ಉತ್ಪತ್ತಿಯಾಗುವಂತೆ ಮಾಡಿದ್ದರೋ, ಅವುಗಳಿಂದ ದೂರ ಉಳಿಯುವ ತಂತ್ರ ಅನುಸರಿಸಿ ಕೊರೋನಾ ವೈರಸ್‌ ದೇಹದಾದ್ಯಂತ ಪಸರಿಸುತ್ತಿದೆ. ಒಂದು ರೀತಿಯಲ್ಲಿ ಪ್ರತಿಕಾಯ ಶಕ್ತಿಯ ಕಣ್ಣಿಗೆ ಬೀಳದೇ ಭೂಗತವಾಗಿದ್ದೇಕೊಂಡೇ ತನ್ನ ಚಟುವಟಿಕೆ ನಡೆಸುತ್ತಿದೆ ಎಂದು ಸಂಶೋಧಕರ ತಂಡವೊಂದು ಬಹಿರಂಗಪಡಿಸಿದೆ.

ಈ ಮೂಲಕ ಕೇವಲ ಲಸಿಕೆ ಪಡೆದುಕೊಂಡಿದ್ದರೆ ಕೋವಿಡ್‌ನಿಂದ ಬಚಾವ್‌ ಆಗುವುದು ಸಾಧ್ಯವಿಲ್ಲ, ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸುವುದೂ ಅಷ್ಟೇ ಮುಖ್ಯ ಎಂಬುದನ್ನು ಸಂಶೋಧನೆ ಒತ್ತಿ ಹೇಳಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ವರದಿಯಲ್ಲೇನಿದೆ?:

ಕೋವಿಡ್‌ ಲಸಿಕೆ ವಿರುದ್ಧ ದೇಹದಲ್ಲಿ ಸ್ವಯಂ ಉತ್ಪತ್ತಿಯಾಗಿರುವ ಪ್ರತಿಕಾಯ ಅಥವಾ ಕೋವಿಡ್‌ ಲಸಿಕೆ ಪಡೆದ ಬಳಿಕ ಉತ್ಪತ್ತಿಯಾಗಿರುವ ಪ್ರತಿಕಾಯಗಳು ಜೀವಕೋಶದ ಒಳಗೆ ಯಾವುದೇ ಹೊಸ ವೈರಸ್‌ ಪ್ರವೇಶಿಸಲು ಯತ್ನಿಸಿದರೆ ಅದನ್ನು ತಡೆಯುವ ಯತ್ನ ಮಾಡುತ್ತದೆ.

ಆದರೆ ಇತ್ತೀಚಿನ ಸಂಶೋಧನೆಗಳ ಅನ್ವಯ, ಕೊರೋನಾ ವೈರಸ್‌ ಜೀವಕೋಶಗಳ ಒಳಭಾಗವನ್ನು ಪ್ರವೇಶಿಸುವ ಬದಲು ಹೊರಗೋಡೆಯಲ್ಲೇ ಅಂಟಿಕೊಳ್ಳುತ್ತದೆ. ಈ ಮೂಲಕ ಪ್ರತಿಕಾಯ ಶಕ್ತಿಗಳ ಸಂಪರ್ಕಕಕ್ಕೆ ಬರುವುದನ್ನು ಯಶಸ್ವಿಯಾಗಿ ತಪ್ಪಿಸಿಕೊಳ್ಳುತ್ತಿದೆ. ಹೀಗೆ ಜೀವಕೋಶಕ್ಕೆ ಅಂಟಿಕೊಂಡ ಬಳಿಕ, ಯಾವುದೇ ಅಡ್ಡಿ ಇಲ್ಲದೆ ತಾನು ಅಂಟಿಕೊಂಡ ಜೀವಕೋಶದ ಶಕ್ತಿಯನ್ನೇ ಬಳಸಿಕೊಂಡು ಕೊರೋನಾ ವೈರಸ್‌ ದ್ವಿಗುಣಗೊಳ್ಳುತ್ತಾ ಹೋಗುವ ಪ್ರಕ್ರಿಯೆಯನ್ನು ವೈರಸ್‌ ಆರಂಭಿಸುತ್ತದೆ. ಹೀಗೆ ಹೊಸಗಾಗಿ ಹುಟ್ಟುಕೊಂಡ ವೈರಸ್‌ ಮತ್ತೊಂದು ಹೊಸ ಜೀವಕೋಶಕ್ಕೆ ಅಂಟಿಕೊಳ್ಳುತ್ತದೆ. ಹೀಗೆ ಯಾವುದೇ ಪ್ರತಿಕಾಯ ಶಕ್ತಿಯ ಪ್ರಭಾವಕ್ಕೆ ಸಿಗದ ಕಾರಣ, ದೇಹದಲ್ಲಿ ಅವುಗಳ ಪ್ರಮಾಣ ಭಾರೀ ಪ್ರಮಾಣದಲ್ಲಿ ವ್ಯಾಪಿಸಿ ಸೋಂಕಿನ ತೀವ್ರತೆ ಹೆಚ್ಚುತ್ತದೆ ಎಂದು ಒಹಿಯೋ ವಿಶ್ವವಿದ್ಯಾಲಯದ ವೈರಾಲಜಿ ತಜ್ಞ ಶಾನ್‌-ಲು-ಲಿಯು ನೇತೃತ್ವದ ತಂಡದ ವರದಿ ಹೇಳಿದೆ.

ಹೀಗಾಗಿ ವೈರಸ್‌ ಹರಡುವ ಪ್ರತಿ ಹಂತವನ್ನು ಗುರಿಯಾಗಿಟ್ಟುಕೊಂಡು ಆ್ಯಂಟಿವೈರಲ್‌ ಔಷಧಿಯನ್ನು ಅಭಿವೃದ್ಧಿ ಪಡಿಸುವುದು ಹೆಚ್ಚು ಪರಿಣಾಮಕಾರಿ ಎಂದು ಅಧ್ಯಯನ ಬಹಿರಂಗ ಪಡಿಸಿದೆ.

ಬೂಸ್ಟರ್‌ ಡೋಸ್‌ ನಡುವೆ 9-12 ತಿಂಗಳ ಅಂತರ

60 ವರ್ಷ ಮೇಲ್ಪಟ್ಟಪೂರ್ವರೋಗ ಪೀಡಿತರು ಹಾಗೂ ವೈದ್ಯರಂಥ ಮುಂಚೂಣಿ ಕಾರ್ಯಕರ್ತರಿಗೆ ಮುಂಜಾಗ್ರತಾ ಡೋಸ್‌ (ಬೂಸ್ಟರ್‌ ಡೋಸ್‌) ಲಸಿಕೆ ವಿತರಣೆಯನ್ನು ಜ.10ರಿಂದ ಆರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬೆನ್ನಲ್ಲೇ, ಲಸಿಕೆಯ ಅಂತರದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ಆರಂಭವಾಗಿದೆ.

2ನೇ ಡೋಸ್‌ ಪಡೆದ 9ರಿಂದ 12 ತಿಂಗಳಲ್ಲಿ ಬೂಸ್ಟರ್‌ ಡೋಸ್‌ ಪಡೆಯಬೇಕು ಎಂದು ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಲಸಿಕಾಕರಣ ತಾಂತ್ರಿಕ ಸಲಹಾ ಸಮಿತಿ’ (ಎನ್‌ಟಿಎಜಿಐ) ತಜ್ಞರು ಗಂಭೀರ ಸಮಾಲೋಚನೆಯಲ್ಲಿ ತೊಡಗಿದ್ದಾರೆ. ಶೀಘ್ರ ಈ ಬಗ್ಗೆ ಘೋಷಣೆ ಹೊರಬೀಳಲಿದೆ ಎಂದು ಮೂಲಗಳು ಹೇಳಿವೆ.

ಬೂಸ್ಟರ್‌ ಲಸಿಕೆ?:

ಜ.10ರಿಂದ ಆರಂಭವಾಗಲಿರುವ ಬೂಸ್ಟರ್‌ ಡೋಸ್‌ ನೀಡಿಕೆ ವೇಳೆ ಈಗಾಗಲೇ ಭಾರತದಲ್ಲಿ ಹೆಚ್ಚಾಗಿ ನೀಡಿರುವ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಬದಲಿಗೆ ಎಂಆರ್‌ಎನ್‌ಎ ತಂತ್ರಜ್ಞಾನ ಆಧರಿತ ಲಸಿಕೆ ನೀಡುವುದು ಸೂಕ್ತ ಎಂದು ಹಲವು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದರು. ಆದರೆ ಇದಕ್ಕಾಗಿ ಬೇರೆ ಲಸಿಕೆಗಳ ಮೊರೆ ಹೋಗುವ ಬದಲು ಈಗಾಗಲೇ ವಿಶ್ವಾಸಾರ್ಹತೆ ಪಡೆದುಕೊಂಡಿರುವ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಲಸಿಕೆಯನ್ನೇ ಬೂಸ್ಟರ್‌ ಡೋಸ್‌ ಆಗಿ ನೀಡಲು ಸರ್ಕಾರ ಒಲವು ಹೊಂದಿದೆ ಎಂದು ಮೂಲಗಳು ತಿಳಿಸಿವೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್