2019ರಿಂದ ಈಚೆಗೆ ಮೋದಿ ಸರ್ಕಾರದ ಪರವಾಗಿ ಯಾವುದೇ ವಿವಾದ ಇರಲಿ, ಘೋಷಣೆ ಇರಲಿ ಸ್ವಯಂ ಪ್ರಧಾನಿಗಿಂತ ಹೆಚ್ಚು ಕಾಣಿಸಿಕೊಂಡವರೆಂದರೆ ಗೃಹ ಸಚಿವ ಅಮಿತ್ ಶಾ. ಆದರೆ ಏಕೋ ಏನೋ ಕೊರೋನಾ ಯುದ್ಧ ಆರಂಭವಾದ ನಂತರ ಅಮಿತ್ ಶಾ ಮಾತ್ರ ಕ್ಯಾಮೆರಾ ಕಣ್ಣುಗಳಿಂದ ದೂರವೇ ಉಳಿದಿದ್ದಾರೆ.
2019ರಿಂದ ಈಚೆಗೆ ಮೋದಿ ಸರ್ಕಾರದ ಪರವಾಗಿ ಯಾವುದೇ ವಿವಾದ ಇರಲಿ, ಘೋಷಣೆ ಇರಲಿ ಸ್ವಯಂ ಪ್ರಧಾನಿಗಿಂತ ಹೆಚ್ಚು ಕಾಣಿಸಿಕೊಂಡವರೆಂದರೆ ಗೃಹ ಸಚಿವ ಅಮಿತ್ ಶಾ. ಆದರೆ ಏಕೋ ಏನೋ ಕೊರೋನಾ ಯುದ್ಧ ಆರಂಭವಾದ ನಂತರ ಅಮಿತ್ ಶಾ ಮಾತ್ರ ಕ್ಯಾಮೆರಾ ಕಣ್ಣುಗಳಿಂದ ದೂರವೇ ಉಳಿದಿದ್ದಾರೆ.
ರಾಜ್ಯಗಳ ಲಾಕ್‌ಡೌನ್ ನಿಯಂತ್ರಿಸ ಬೇಕಾದ ಗೃಹ ಸಚಿವರು ಏಕೆ ಸುಮ್ಮನಿದ್ದಾರೆ, ಹೊರಗೆ ಬಂದು ಮಾತನಾಡುತ್ತಿಲ್ಲ ಏಕೆ ಎಂಬ ಪ್ರಶ್ನೆ ಅಮಿತ್ ಭಾಯಿ ಪ್ರಶಂಸಕರು ಮತ್ತು ಟೀಕಾಕಾರರು ಇಬ್ಬರನ್ನೂ ಕಾಡುತ್ತಿದೆ. ಮಾಚ್‌ರ್ 15ರಿಂದ ಅಮಿತ್ ಭಾಯಿ ಒಮ್ಮೆಯೂ ಕೊರೋನಾ ಬಗ್ಗೆ ಮಾಧ್ಯಮಗಳ ಎದುರು ಮಾತನಾಡಿಲ್ಲ. ಅಮಿತ್ ಭಾಯಿ ಹಾಗೆಲ್ಲ ತಿಂಗಳುಗಟ್ಟಲೆ ಸುಮ್ಮನೆ ಕುಳಿತು ಕೊಳ್ಳುವ ಜಾಯಮಾನದವರಲ್ಲ ಬಿಡಿ. ಆದರೆ ಶಾ ಮೌನಕ್ಕೆ ಕಾರಣ ಮಾತ್ರ ಯಾರಿಗೂ ಗೊತ್ತಾಗುತ್ತಿಲ್ಲ. ಆದರೆ ಕೇಂದ್ರ ಕ್ಯಾಬಿನೆಟ್ ಸಚಿವರನ್ನು ಮಾತನಾಡಿಸಿದರೆ ಗೊತ್ತಾಗುತ್ತದೆ ಅಮಿತ್ ಶಾ ತೆರೆಯ ಹಿಂದೆ ಭಯಂಕರ ಆಕ್ಟಿವ್ ಆಗಿದ್ದಾರೆಂದು.
ಮನೇಲಿ ಕುಳಿತು ಕೆಲಸ ಮಾಡಲು ಮಮತಾ ದೀದಿ ಒಪ್ಪಿಕೊಂಡಿದ್ದೇಕೆ?
ದಿನಕ್ಕೆ ಕ್ಯಾಬಿನೆಟ್ ಸಚಿವರಿಗೆ ಸ್ವತಃ 2ರಿಂದ 3ಬಾರಿ ಫೋನ್ ಮಾಡಿ ವರದಿ ತೆಗೆದುಕೊಳ್ಳುವ ಅಮಿತ್ ಶಾ, ದಿನವೂ ಕ್ಯಾಬಿನೆಟ್ ಸಚಿವರ ಅನೌಪಚಾರಿಕ ಸಭೆ ಕೂಡ ನಡೆಸುತ್ತಾರಂತೆ. ದಿನವೂ ರಾತ್ರಿ 12ಗಂಟೆವರೆಗೆ ಕೃಷ್ಣ ಮೆನನ್ ಮಾರ್ಗದಲ್ಲಿರುವ ತನ್ನ ನಿವಾಸದಲ್ಲಿ ಅಮಿತ್ ಶಾ, ಎರಡು ಅಥವಾ ಮೂವರು ಸಚಿವರ ಜೊತೆ ಕುಳಿತು ಬೇರೆ ಬೇರೆ ರಾಜ್ಯಗಳ ವರದಿ ಕೂಡ ತೆಗೆದುಕೊಳ್ಳುತ್ತಾರೆ.
ಸ್ವತಃ ಮಧುಮೇಹಿ ಆಗಿರುವುದರಿಂದ ಮನೆಗೆ ಮಂತ್ರಿಗಳು ಬಂದಾಗಲೂ ಸಾಮಾಜಿಕ ಅಂತರ ಕಾಯ್ದುಕೊಂಡೇ ಸಭೆ ನಡೆಸುತ್ತಾರಂತೆ. ‘ಏನು ಅಮಿತ್ ಶಾ ಕಾಣೋದೆ ಇಲ್ಲವಲ್ಲ’ ಎಂಬ ಪ್ರಶ್ನೆಯನ್ನು ಯಾರಾದರೂ ಕೇಂದ್ರ ಸಚಿವರಿಗೆ ಕೇಳಿದಾಗ, ‘ಅಯ್ಯೋ ಎಲ್ಲಿ ಸರ್ ಸಾಹೇಬರು ಹೈಪರ್ ಆಕ್ಟಿವ್ ಇದ್ದಾರೆ. ಯಾವಾಗ ಫೋನ್ ಬರುತ್ತೋ ಅವರ ನಿವಾಸಕ್ಕೆ ಓಡಬೇಕು’ ಎನ್ನುವ ಉತ್ತರ ಬರುತ್ತದೆ. ತೆರೆಯ ಹಿಂದೆ ಸಕ್ರಿಯರಾಗಿರುವ ಮೋದಿ ಸೇನಾಧಿಪತಿ ಮೌನವೇಕೆ ಎಂಬುದರ ಮರ್ಮ ಮಾತ್ರ ಅರ್ಥವಾಗುತ್ತಿಲ್ಲ ನೋಡಿ.
ತಬ್ಲೀಘಿ ಸಭೆ ಬಗ್ಗೆ ಗೊತ್ತಿದ್ದರೂ, ಕಣ್ಣು ಮುಚ್ಚಿ ಕುಳಿತಿತ್ತಾ ದಿಲ್ಲಿ ಸರ್ಕಾರ?
ವಿರೋಧಿಗಳನ್ನು ಕೆರಳಿಸುವ ಭಯವೇ?
ಶಹೀನ್ ಬಾಗ್ ಕಾರಣದ ದಿಲ್ಲಿ ಗಲಭೆ ಮತ್ತು ತಬ್ಲೀಘಿ ಅವಾಂತರ ಅಮಿತ್ ಶಾ ನಿರ್ವಹಿಸುವ ಕೇಂದ್ರ ಗೃಹ ಇಲಾಖೆಯ ಅಡಿಯಲ್ಲಿ ಬರುವ ದಿಲ್ಲಿ ಪೊಲೀಸರ ಕ್ಷಮತೆಯ ಬಗ್ಗೆ ಸಾಕಷ್ಟುಪ್ರಶ್ನೆಗಳನ್ನಂತೂ ಮೂಡಿಸಿವೆ. ದಿಲ್ಲಿ ಗಲಭೆಗೆ ದಿಲ್ಲಿ ಪೊಲೀಸ್ ಅಧಿಕಾರಿಗಳ ಅಂತರ್ ಕಲಹ ಕಾರಣ ಎಂದು ಹೇಳಲಾಯಿತಾದರೂ, ತಬ್ಲೀಘಿ ಅವಾಂತರಕ್ಕೆ ದಿಲ್ಲಿ ಪೊಲೀಸರು ಇನ್ನೂ ತಮ್ಮ ತಪ್ಪಿನ ಹಿಂದಿನ ರಹಸ್ಯದ ಬಗ್ಗೆ ಬಾಯಿ ಬಿಡುತ್ತಿಲ್ಲ. ಆದರೆ ಬಿಜೆಪಿ ಮೂಲಗಳು ಹೇಳುತ್ತಿರುವ ಪ್ರಕಾರ, ಕೊರೋನಾ ಸಮಯದ ಅಮಿತ್ ಶಾ ಮೌನಕ್ಕೆ ಇವೆರಡು ಘಟನೆಗಳ ವೈಫಲ್ಯವೂ ಕಾರಣವಂತೆ.
ಒಂದಂತೂ ನಿಜ, ಕ್ಯಾಬಿನೆಟ್ ಬ್ರಿಫಿಂಗ್ ಬಿಟ್ಟರೆ ಬೇರೆ ಸಮಯದಲ್ಲಿ ಮಾಧ್ಯಮಗಳ ಎದುರು ಬರಬೇಡಿ ಎಂದು ಮಂತ್ರಿಗಳಿಗೆ ಮೋದಿ ಸಾಹೇಬರು ಖಡಕ್ ಆಗಿ ಹೇಳಿದ್ದಾರೆ. ಇದನ್ನು ಅಮಿತ್ ಶಾ ಕೂಡ ಪಾಲಿಸುತ್ತಿರಬಹುದು. ಇಲ್ಲವೇ, ಶಾ ಹೊರಗೆ ಬಂದರೆಂದರೆ ವಿರೋಧಿಗಳು ಎದ್ದು ಕೂರುತ್ತಾರೆ. ಈಗ ಅದು ಅನವಶ್ಯಕ. ಸುಮ್ಮನೆ ಶಾಠ್ಯಂ ಪ್ರತಿ ಶಾಠ್ಯಂ (ಏಟಿಗೆ ಎದಿರೇಟು) ಬೇಡ ಎಂದು ಮೋದಿ ಅವರೇ ಸುಮ್ಮನಿರುವಂತೆ ಸೂಚಿಸಿರಬಹುದು ಬಿಡಿ. ಮೋದಿ ಮತ್ತು ಶಾ ಅವರ ಅಂಡರ್‌ಸ್ಟ್ಯಾಂಡಿಂಗ್ ಅರ್ಥ ಮಾಡಿಕೊಳ್ಳೋದೇ ಕಷ್ಟ!
ಲಾಕ್‌ಡೌನ್ ಹೊಡೆತಕ್ಕೆ ರಾಜ್ಯ ಸರ್ಕಾರಗಳ ಬೊಕ್ಕಸ ಖಾಲಿ ಆಗಿವೆ. ಹೀಗಾಗಿ ಬಹುತೇಕ ರಾಜ್ಯ ಸರ್ಕಾರಗಳು ಮದ್ಯ ಮಾರಾಟಕ್ಕೆ ಅನುಮತಿ ಕೊಡೋಣ ಎಂದು ಕೇಂದ್ರ ಸರ್ಕಾರಕ್ಕೆ ದುಂಬಾಲು ಬಿದ್ದಿದ್ದು, ಮೋದಿ ಮತ್ತು ಅಮಿತ್ ಶಾ ಸುತಾರಾಂ ಒಪ್ಪುತ್ತಿಲ್ಲ.
ಮೊದಲು ಪ್ರಧಾನಿಗೆ ಫೋನ್ ಮಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ‘ಬಿಹಾರ ಮತ್ತು ಗುಜರಾತ್‌ನಲ್ಲಿ ಪಾನ ನಿಷೇಧವಿದೆ. ಹೀಗಿರುವಾಗ ಯಾವುದೇ ಕಾರಣಕ್ಕೂ ಮದ್ಯಕ್ಕೆ ಅವಕಾಶ ಕೊಡಬೇಡಿ’ ಎಂದು ಹೇಳಿದರೆ, ಅಮಿತ್ ಶಾ ಬಿಜೆಪಿ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ಮಾಡಿ, ‘ನೋ ಲಿಕ್ಕರ್. ಅನಗತ್ಯ ಹೇಳಿಕೆ ಕೊಡಬೇಡಿ’ ಎಂದು ಖಡಕ್ ಆಗಿ ಹೇಳಿದ ನಂತರ ಮದ್ಯ ಮಾರಾಟದ ಬಗ್ಗೆ ಚರ್ಚೆಯೇ ನಿಂತು ಹೋಗಿದೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ