ಇತ್ತೀಚೆಗಷ್ಟೆ ಉದ್ಯಮಿ ರತನ್ ಟಾಟಾ, ತಮ್ಮ ಪ್ರಾಣಿಗಳ ಆಸ್ಪತ್ರೆಯಲ್ಲಿ ದಾಖಲಾದ ನಾಯಿ ಪ್ರಾಣ ಉಳಿಸಲು ಮನವಿಯೊಂದನ್ನು ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಜನ, ಆಸ್ಪತ್ರೆಯತ್ತ ದೌಡಾಯಿಸಿದ್ದರು. ನಾಯಿಗೆ ರಕ್ತದಾನ ಮಾಡಿ ಪ್ರಾಣ ಉಳಿಸಿದ ನಾಯಿ ಹಾಗೂ ಮಾಲೀಕನಿಗೆ ರತನ್ ಟಾಟಾ ಧನ್ಯವಾದ ಹೇಳಿದ್ದಾರೆ.
ಮುಂಬೈ(ಜು.01) ಉದ್ಯಮಿ ರತನ್ ಟಾಟಾ ಅವರ ಪ್ರಾಣಿ ಪ್ರೀತಿಗೆ ಯಾರೂ ಸಾಟಿಇಲ್ಲ. ಅದರಲ್ಲೂ ನಾಯಿಗಳಿಗೆ ರತನ್ ಟಾಟಾ ರಾಜಮರ್ಯಾದೆ ನೀಡುತ್ತಾರೆ. ನಾಯಿಗಳ ರಕ್ಷಣೆ, ಪಾಲನೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಇದಕ್ಕಾಗಿ ಮುಂಬೈನಲ್ಲಿ ಪ್ರಾಣಿಗಳ ಆಸ್ಪತ್ರೆ ತರೆದಿದ್ದಾರೆ. ಈ ಆಸ್ಪತ್ರೆಯಲ್ಲಿ ಇತ್ತೀಚೆಗೆ ತೀವ್ರ ಅನಾರೋಗ್ಯದ ನಾಯಿಯನ್ನು ದಾಖಲಿಸಲಾಗಿತ್ತು. ಈ ನಾಯಿ ಪ್ರಾಣ ಉಳಿಸಲು ರಕ್ತದ ಅವಶ್ಯಕತೆ ಇತ್ತು. ಹೀಗಾಗಿ ರತನ್ ಟಾಟಾ ಜನರಲ್ಲಿ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಜನ, ತಮ್ಮ ಸಾಕು ನಾಯಿಯನ್ನು ಹಿಡಿದು ಆಸ್ಪತ್ರೆಗೆ ಧಾವಿಸಿದ್ದರು. ಈ ಪೈಕಿ ಒಂದು ನಾಯಿಯ ರಕ್ತ ಮ್ಯಾಚ್ ಆಗಿದೆ. ಪರಿಣಾಮ ಇದೀಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ನಾಯಿ ಪ್ರಾಣ ಉಳಿದಿದೆ.
ಮುಂಬೈನ ಜನರ ಕಾಳಜಿ, ಸ್ಪೂರ್ತಿಗೆ ನನ್ನ ತುಂಬು ಹೃದಯದ ಧನ್ಯವಾದ. ನನ್ನ ಮನವಿಗೆ ಸ್ಪಂದಿಸಿ ಕ್ಯಾಸ್ಪರ್, ಲಿಯೋ, ಸ್ಕೂಬಿ, ರೊನಿ, ಇವಾನ್ ಸೇರಿದಂತೆ ಕೆಲ ಬ್ರೀಡ್ ನಾಯಿಗಳನ್ನು ಮಾಲೀಕರು ಆಸ್ಪತ್ರೆಗೆ ಕರೆ ತಂದಿದ್ದರು. ಆಸ್ಪತ್ರೆಯಲ್ಲಿ ಈ ನಾಯಿಗಳ ರಕ್ತ ಪರಿಶೀಲನೆ ನಡೆಸಿ ಕ್ರಾಸ್ ಮ್ಯಾಚ್ ಮಾಡಲಾಗಿದೆ. ಈ ವೇಳೆ ಒಂದು ನಾಯಿಯ ರಕ್ತ ಮ್ಯಾಚ್ ಆಗಿದೆ. ತಕ್ಕ ಸಮಯಕ್ಕೆ ಆಗಮಿಸಿ ನಾಯಿ ಪ್ರಾಣ ಉಳಿಸಲು ಮುಂದಾದ ನಾಯಿ ಹಾಗೂ ಮಾಲೀಕರಿಗೆ ಧನ್ಯವಾದ. ನಾಯಿ ನಿಧಾನವಾಗಿ ಚೇತರಿಕೆ ಕಾಣುತ್ತಿದೆ ಎಂದು ರತನ್ ಟಾಟಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರೆ.
ನಿಮ್ಮ ನೆರವು ಬೇಕಿದೆ, ಕೂಡುಗೈ ದಾನಿ ರತನ್ ಟಾಟಾ ಮೊದಲ ಬಾರಿಗೆ ಸಾರ್ವಜನಿಕರಲ್ಲಿ ಮನವಿ!
ಟಿಕ್ ಜ್ವರ ಹಾಗೂ ಅನೆಮಿಯಾ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ 7 ತಿಂಗಳ ನಾಯಿ ಮರಿಯೊಂದನ್ನು ಮುಂಬೈನ ಟಾಟಾ ಟ್ರಸ್ಟ್ ಪ್ರಾಣಿಗಳ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಈ ನಾಯಿ ಮರಿ ರಕ್ತದಲ್ಲೇ ಸೋಂಕು ಹೆಚ್ಚಾಗಿತ್ತು. ಇದರ ಪರಿಣಾಮ ನಾಯಿ ಪ್ರಾಣಕ್ಕೆ ಸಂಚಕಾರ ಎದುರಾಗಿತ್ತು. ಒಂದೆಡೆ ಜ್ವರ ಮತ್ತೊಂದೆಡೆ ರಕ್ತದಲ್ಲಿನ ಸೋಂಕು ಸಮಸ್ಯೆಯಿಂದ ನಾಯಿ ತೀವ್ರ ಆಸ್ವಸ್ಥಗೊಂಡಿತ್ತು.
ಪ್ರಾಣಿಗಳ ಆಸ್ಪತ್ರೆ ಮೇಲೆ ವಿಶೇಷ ನಿಗಾವಹಿಸಿರುವ ರತನ್ ಟಾಟಾಗೆ ಈ ಕುರಿತು ಮಾಹಿತಿ ಸಿಕ್ಕಿದೆ. ತಕ್ಷಣವೇ ಆಸ್ಪತ್ರೆಗೆ ಆಗಮಿಸಿದ ರತನ್ ಟಾಟಾ ವೈದ್ಯರ ಜೊತೆ ಮಾತುಕತೆ ನಡೆಸಿದ್ದಾರೆ. ನಾಯಿ ಪ್ರಾಣ ಉಳಿಸಲು ಏನು ಮಾಡಬೇಕು, ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ವೈದ್ಯರ ಸಲಹೆ ಪಡೆದ ರತನ್ ಟಾಟಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಮನವಿ ಮಾಡಿದ್ದರು.
ಮುಂಬೈನಲ್ಲಿರು ಯಾರಾದರೂ ಆರೋಗ್ಯವಾಗಿರುವ ನಾಯಿ ರಕ್ತ ದಾನ ಮಾಡಲು ಬಯಿಸಿದರೆ ತಕ್ಷಣವೇ ಕರೆ ಮಾಡಿ. ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ನಾಯಿ ಮರಿ ಪ್ರಾಣ ಉಳಿಸಲು ರಕ್ತದಾನದ ಅವಶ್ಯಕತೆ ಇದೆ ಎಂದು ರತನ್ ಟಾಟಾ ಮನವಿ ಮಾಡಿದ್ದರು. ಇದೇ ವೇಳೆ ನಾಯಿ ರಕ್ತ ದಾನ ಮಾಡಲು ಕೆಲ ಮಾನದಂಡಗಳನ್ನು ಸೂಚಿಸಿದ್ದರು. ರಕ್ತದಾನ ಮಾಡುವ ನಾಯಿ ಯಾವುದೇ ಆರೋಗ್ಯ ಸಮಸ್ಯೆ ಹೊಂದಿರಬಾರದು 1 ರಿಂದ 8 ವರ್ಷ ವಯಸ್ಸಿನೊಳಗಿರಬೇಕು, ಕನಿಷ್ಠ 25 ಕೆಜಿ ತೂಕ ಹೊಂದಿರಬೇಕು ಸೇರಿದಂತೆ ಹಲವು ಸೂಚನೆಯನ್ನು ರತನ್ ಟಾಟಾ ನೀಡಿದ್ದರು.
ತಾಜ್ ಹೊಟೆಲ್‌ನಲ್ಲಿ ಬೀದಿ ನಾಯಿಗೆ ರಾಜ ಮರ್ಯಾದೆ, ರತನ್ ಟಾಟಾ ಸೂಚನೆ ಭಾರಿ ಮೆಚ್ಚುಗೆ!