ಬಹು ಸಮಯದ ಕಾಯುವಿಕೆ ಅಂತ್ಯ ಕಾಣುವ ಹಂತದಲ್ಲಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣಪ್ರತಿಷ್ಠೆಗೆ ಒಂದೇ ದಿನ ಬಾಕಿ ಇದೆ. ಭದ್ರತಾ ದೃಷ್ಟಿಯಿಂದ ಅಯೋಧ್ಯೆಯ ಮೂಲೆಮೂಲೆಯಲ್ಲೂ ಸೇನೆ ನಿಯೋಜನೆಯಾಗಿದೆ.
ಎಲ್ಲಿ ನೋಡಿದರಲ್ಲಿ ಶಸ್ತ್ರ ಸಜ್ಜಿತರಾಗಿ ಶಿಸ್ತಾಗಿ ನಿಂತ ಎಟಿಎಸ್ ಕಮಾಂಡೋಗಳು, ಮೂಲೆ ಮೂಲೆಗಳಲ್ಲಿ ಸೈನಿಕರು, 17 ಐಪಿಎಸ್ ಅಧಿಕಾರಿಗಳು, 100 ಪಿಪಿಎಸ್ ಸಿಬ್ಬಂದಿ, ಯುಪಿ ಪೊಲೀಸ್, ಎನ್‌ಡಿಆರ್‌ಎಫ್ ಮತ್ತು ಪಿಎಸಿ ಸಿಬ್ಬಂದಿ, ಖಾಸಗಿ ಭದ್ರತಾ ಏಜೆನ್ಸಿಯ ಸಿಬ್ಬಂದಿ, ಸಾಲದ್ದಕ್ಕೆ ಎಐ ತಂತ್ರಜ್ಞಾನದಿಂದ ನಿಗಾ..
ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಮುನ್ನಾ ದಿನವಾದ ಇಂದು ಅಯೋಧ್ಯೆ ಕಂಟೋನ್ಮೆಂಟ್ ಝೋನ್‌ನಂತೆ ಬದಲಾಗಿದೆ. ರಾಮಮಂದಿರ ಉದ್ಘಾಟನೆಗೆ ಪ್ರಧಾನಿ ಸೇರಿದಂತೆ ದೇಶದ ಬಹುತೇಕ ಎಲ್ಲ ವಿವಿಐಪಿಗಳು, ಸೆಲೆಬ್ರಿಟಿಗಳು, ಸುಮಾರು 8000 ಪ್ರಮುಖರು ನಾಳೆ ಅಯೋಧ್ಯೆಯಲ್ಲಿ ಜಮಾವಣೆಯಾಗಲಿದ್ದಾರೆ. ಅಲ್ಲದೆ, ರಾಮಮಂದಿರ ಉದ್ಘಾಟನೆ ಧಾರ್ಮಿಕವಾಗಿಯೂ ಬಹಳ ಸೂಕ್ಷ್ಮ ಕಾರ್ಯಕ್ರಮವಾಗಿದೆ. ಇನ್ನು ಭಕ್ತರಂತೂ ಭಾರೀ ಸಂಖ್ಯೆಯಲ್ಲಿ ಸೇರಲಿದ್ದಾರೆ. ಈ ಎಲ್ಲ ಕಾರಣದಿಂದ ಅಯೋಧ್ಯೆಯಲ್ಲಿ ಸೆಕ್ಯೂರಿಟಿ ಫುಲ್ ಟೈಟ್ ಆಗಿದೆ. ನಗರದ ಪ್ರವೇಶ ಸ್ಥಳದಿಂದ ರಾಮ ಮಂದಿರದವರೆಗೆ ಪ್ರತಿ ಮೂಲೆ ಮೂಲೆಯಲ್ಲಿ ಪೊಲೀಸರು ಮತ್ತು ಎಟಿಎಸ್ ಕಮಾಂಡೋಗಳನ್ನು ನಿಯೋಜಿಸಲಾಗಿದೆ.
ಪ್ರಸ್ತುತ, ಅಯೋಧ್ಯೆಯಲ್ಲಿ ಬಹಳಷ್ಟು ಬ್ಲ್ಯಾಕ್‌ಕ್ಯಾಟ್ ಕಮಾಂಡೋಗಳು, ಶಸ್ತ್ರಸಜ್ಜಿತ ವಾಹನಗಳು ಮತ್ತು ಡ್ರೋನ್‌ಗಳನ್ನು ನೋಡಬಹುದಾಗಿದೆ. ಸರಯು ನದಿಯ ಬಳಿ ಎನ್‌ಡಿಆರ್‌ಎಫ್ ತಂಡವನ್ನು ನಿಯೋಜಿಸಲಾಗಿದೆ.
ಕೆಂಪು ಮತ್ತು ಹಳದಿ ವಲಯಗಳಾಗಿ ವಿಂಗಡನೆ
ಯುಪಿ ಪೊಲೀಸರು ಇಲ್ಲಿ 3 ಡಿಐಜಿಗಳನ್ನು ನಿಯೋಜಿಸಿದ್ದಾರೆ. ಇಷ್ಟು ಮಾತ್ರವಲ್ಲದೆ 17 ಐಪಿಎಸ್, 100 ಪಿಪಿಎಸ್ ಮಟ್ಟದ ಅಧಿಕಾರಿಗಳು, 325 ಇನ್ಸ್ ಪೆಕ್ಟರ್ ಗಳು, 800 ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ 1000ಕ್ಕೂ ಹೆಚ್ಚು ಕಾನ್‌ಸ್ಟೇಬಲ್ ಗಳನ್ನು ಭದ್ರತಾ ವ್ಯವಸ್ಥೆ ಬಲಿಷ್ಠವಾಗಿಡಲು ನಿಯೋಜಿಸಲಾಗಿದೆ. ಭದ್ರತೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ಇದನ್ನು ಕೆಂಪು ವಲಯ ಮತ್ತು ಹಳದಿ ವಲಯ ಎಂದು ವಿಂಗಡಿಸಲಾಗಿದೆ. ಕೆಂಪು ವಲಯದಲ್ಲಿ ಪಿಎಸಿಯ 3 ಬೆಟಾಲಿಯನ್‌ಗಳನ್ನು ನಿಯೋಜಿಸಿದ್ದರೆ, ಹಳದಿ ವಲಯದಲ್ಲಿ 7 ಬೆಟಾಲಿಯನ್‌ಗಳನ್ನು ನಿಯೋಜಿಸಲಾಗಿದೆ.
ಖಾಸಗಿ ಸೆಕ್ಯುರಿಟಿ ಏಜೆನ್ಸಿ ನಿಗಾ
ಜನವರಿ 22ರಂದು ಅಯೋಧ್ಯೆಯಲ್ಲಿ ಭದ್ರತೆಯನ್ನು ಬಿಗಿಯಾಗಿ ಇರಿಸಲು ಪೊಲೀಸರ ಹೊರತಾಗಿ, ಖಾಸಗಿ ಭದ್ರತಾ ಏಜೆನ್ಸಿಗಳ ಸಹಾಯವನ್ನೂ ತೆಗೆದುಕೊಳ್ಳಲಾಗುತ್ತಿದೆ. ಖಾಸಗಿ ಭದ್ರತಾ ಸಂಸ್ಥೆ ಎಸ್‌ಐಎಸ್ ಅಯೋಧ್ಯೆಯಲ್ಲಿ ಅಧಿಕಾರ ವಹಿಸಿಕೊಂಡಿದೆ. ಅಯೋಧ್ಯೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಸದೃಢವಾಗಿಡಲು ಎಐ ತಂತ್ರಜ್ಞಾನದ ಸಹಾಯವನ್ನೂ ತೆಗೆದುಕೊಳ್ಳುತ್ತಿದ್ದೇವೆ ಎನ್ನುತ್ತಾರೆ ಕಂಪನಿ ನಿರ್ದೇಶಕ ರಿತುರಾಜ್ ಸಿನ್ಹಾ.
ಶಂಕಿತರ ಗುರುತು ಹೀಗೆ ಪತ್ತೆ
ಯುಪಿ ಪೊಲೀಸರಿಂದ ಅಪರಾಧಿಗಳ ಡೇಟಾಬೇಸ್ ಅನ್ನು ತೆಗೆದುಕೊಂಡಿರುವ ಖಾಸಗಿ ಭದ್ರತಾ ಕಂಪನಿಯು ಅವರ ವಿವರವನ್ನು AI ತಂತ್ರಜ್ಞಾನದೊಂದಿಗೆ ಸಂಪರ್ಕಿಸಿದ್ದಾರೆ. ಈ ಡೇಟಾದಲ್ಲಿ ಯಾವುದೇ ಅಪರಾಧಿ ಕಂಡುಬಂದರೆ, ನಂತರ ಕ್ಯಾಮೆರಾ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಅವನನ್ನು ಗುರುತಿಸುತ್ತದೆ ಮತ್ತು ನಿಯಂತ್ರಣ ಕೊಠಡಿಗೆ ಸಂದೇಶವನ್ನು ಕಳುಹಿಸುತ್ತದೆ.