ಮುಂಬೈನಲ್ಲಿ ನಿರ್ಮಾಣವಾಗಲಿದೆ ಭಾರತದ ಅತಿದೊಡ್ಡ ರೋಪ್‌ವೇ!

By Kannadaprabha NewsFirst Published Aug 4, 2020, 9:05 AM IST
Highlights

ಮುಂಬೈನಲ್ಲಿ ನಿರ್ಮಾಣವಾಗಲಿದೆ ಭಾರತದ ಅತಿದೊಡ್ಡ ರೋಪ್‌ವೇ!| ಕೇಬಲ್‌ ಕಾರ್‌ ಯೋಜನೆಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಸಮ್ಮತಿ| ಐತಿಹಾಸಿಕ ಎಲಿಫೆಂಟಾ ಗುಹೆಗಳಿಗೆ ತೆರಳಲು 8 ಕಿಮೀ ಉದ್ದದ ರೋಪ್‌ವೇ

ಮುಂಬೈ(ಆ.04): ಮುಂಬೈನಿಂದ ಐತಿಹಾಸಿಕ ಎಲಿಫೆæಂಟಾ ಗುಹೆಗಳಿಗೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ 8 ಕಿ.ಮೀ. ಉದ್ದದ ರೋಪ್‌ ವೇ ಯೋಜನೆಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಸಮ್ಮತಿ ನೀಡಿದೆ. ಯೋಜನೆ ಪೂರ್ಣಗೊಂಡ ಬಳಿಕ ಇದು ದೇಶದ ಅತಿ ಉದ್ದದ ಮತ್ತು ಸಮುದ್ರದ ಮೇಲೆ ನಿರ್ಮಾಣಗೊಂಡ ದೇಶದ ಮೊದಲ ರೋಪ್‌ವೇ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗುತ್ತಿರುವ 700 ಕೋಟಿ ರು. ಮೊತ್ತದ ಯೋಜನೆಯನ್ನು ಮುಂದಿನ 3 ವರ್ಷದಲ್ಲಿ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ.

ಡೆತ್‌ ವಾರಂಟ್‌ ಜಾರಿ ಬಳಿಕ 7 ದಿನದಲ್ಲಿ ಶಿಕ್ಷೆ ಜಾರಿ ಆಗಲಿ: ಸುಪ್ರೀಂಗೆ ಸರ್ಕಾರದ ಮೊರೆ!

ಪ್ರತಿ ವರ್ಷ 10 ಲಕ್ಷ ಪ್ರವಾಸಿಗರನ್ನು ಸೆಳೆಯುವ ಎಲಿಫೆಂಟಾ ದ್ವೀಪಕ್ಕೆ ಪ್ರಸಕ್ತ, ಗೇಟ್‌ ವೇ ಆಫ್‌ ಇಂಡಿಯಾ ಬಳಿಯ ಸಮುದ್ರ ಮಾರ್ಗದಿಂದ ಬೋಟ್‌ಗಳ ಮೂಲಕವೇ ತೆರಳಬೇಕು. ಈ ಪ್ರಯಾಣಕ್ಕೆ 45ರಿಂದ 60 ನಿಮಿಷ ಸಮಯ ಬೇಕು. ಆದರೆ ಹೊಸ ಯೋಜನೆಯನ್ನು ಗೇಟ್‌ವೇ ಆಫ್‌ ಇಂಡಿಯಾದಿಂದ 10 ಕಿ.ಮೀ ದೂರದಲ್ಲಿನ ಪೂರ್ವ ಮುಂಬೈನ ಸೆವ್‌ರೀ ಬಳಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಈ ರೋಪ್‌ವೇ ನಿರ್ಮಾಣವಾದರೆ ಕೇವಲ 15 ನಿಮಿಷಗಳಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣಿಸಬಹುದು.

ವಿನ್ಯಾಸ ಹೇಗೆ?:

ರೋಪ್‌ ವೇ ಎಳೆಯಲು ಸಮುದ್ರದಲ್ಲಿ ಒಟ್ಟು 11 ಗೋಪುರ (ಟವರ್‌)ಗಳನ್ನು ನಿರ್ಮಿಸಲಾಗುತ್ತದೆ. ಇವು ಕನಿಷ್ಠ 50 ಮೀಟರ್‌ನಿಂದ ಗರಿಷ್ಠ 150 ಮೀಟರ್‌ ಎತ್ತರ ಹೊಂದಿರುತ್ತವೆ. ಪ್ರಯಾಣಿಕರನ್ನು ಹೊತ್ತೊಯ್ಯಲು ಕೇಬಲ್‌ ಕಾರ್‌ಗಳನ್ನು ಬಳಸಲಾಗುವುದು. ಇಂಥ ಪ್ರತಿ ಕೇಬಲ್‌ ಕಾರ್‌ 30 ಜನನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರಲಿವೆ. ಇದರಲ್ಲಿ ಪ್ರಯಾಣಿಸಲು ಸ್ವದೇಶಿ ಪ್ರವಾಸಿಗರಿಗೆ .500 ಹಾಗೂ ವಿದೇಶಿಗರಿಗೆ .1000 ಶುಲ್ಕ ನಿಗದಿ ಮಾಡಲಾಗಿದೆ.

ಕೆರೆಗೆ ಇಳಿದು ಸ್ವಚ್ಛಗೊಳಿಸಿದ ಬಿಜೆಪಿ ಶಾಸಕ : ಕೈ ಜೋಡಿಸಿದ ಹಿರಿಯ ಕೈ ನಾಯಕ

ಇತರೆ ಆಕರ್ಷಣೆ:

ಈ ಯೋಜನೆ ರೋಪ್‌ವೇ ಜೊತೆಗೆ, ಸಿಟಿ ಟವರ್‌, ವೀಕ್ಷಣಾ ಗೋಪುರ, ಗಾಜಿನ ರೆಸ್ಟೋರೆಂಟ್‌, ಮನರಂಜನಾ ಸ್ಥಳಗಳನ್ನೂ ಒಳಗೊಂಡಿರಲಿದೆ.

700 ಕೋಟಿ: ಎಲಿಫೆಂಟಾ ರೋಪ್‌ ವೇ ಯೋಜನೆಗೆ ತಗಲುವ ಅಂದಾಜು ವೆಚ್ಚ

3 ವರ್ಷ: ಮುಂದಿನ 3 ವರ್ಷದಲ್ಲಿ ಯೋಜನೆ ಪೂರ್ಣ. 2022ಕ್ಕೆ ಉದ್ಘಾಟನೆ ಗುರಿ

11 ಕಂಬ: ರೋಪ್‌ ವೇ ಮಾಡಲು ಅರಬ್ಬಿ ಸಮದ್ರದಲ್ಲಿ 11 ಕಂಬಗಳ ನಿರ್ಮಾಣ

150 ಮೀ.: ರೋಪ್‌ ವೇ ಪ್ರತಿಯೊಂದು ಕಂಬ 50ರಿಂದ 150 ಮೀ.ನಷ್ಟುಎತ್ತರ

30 ಜನ: ರೋಪ್‌ವೇಯ ಪ್ರತಿ ಕೇಬಲ್‌ ಕಾರ್‌ನಲ್ಲಿ ಪ್ರಯಾಣಿಸಬಲ್ಲ ಜನರ ಸಂಖ್ಯೆ

1 ತಾಸು: ಎಲಿಫೆಂಟಾ ಗುಹೆಗಳಿಗೆ ಹಾಲಿ ಬೋಟ್‌ನಲ್ಲಿ ತೆರಳಲು ತಗಲುವ ಸಮಯ

15 ನಿಮಿಷ: ರೋಪ್‌ ವೇ ನಿರ್ಮಾಣವಾದರೆ ಪ್ರಯಾಣ ಅವಧಿ 15 ನಿಮಿಷಕ್ಕೆ ಇಳಿಕೆ

10 ಲಕ್ಷ: ಎಲಿಫೆಂಟಾ ಗುಹೆಗಳಿಗೆ ಪ್ರತಿವರ್ಷ ಬರುವ ಪ್ರವಾಸಿಗರ ಅಂದಾಜು ಸಂಖ್ಯೆ

click me!