ರಾಜ್ಯಸಭೆ ಬಾವಿಗೆ ಇಳಿವವರಿಗೆ ಮತ ಹಕ್ಕು ಬೇಡ: ಶಿಫಾರಸು

By Kannadaprabha NewsFirst Published Feb 21, 2020, 10:01 AM IST
Highlights

ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸುವ ರಾಜ್ಯಸಭಾ ಸದಸ್ಯರಿಗೆ ಮಸೂದೆಗಳಿಗೆ ಸಂಬಂಧಿಸಿದ ಮತದಾನ ಪ್ರಕ್ರಿಯೆ ವೇಳೆ ಮತ ಹಾಕುವುದರಿಂದ ನಿರ್ಬಂಧ ಹೇರಬೇಕು ಎಂದು ಸದನದ ನಿಯಮಗಳ ಪರಿಶೀಲನೆಗೆ ನೇಮಕಗೊಂಡಿದ್ದ ಸಮಿತಿಯೊಂದು ಶಿಫಾರಸು ಮಾಡಿದೆ.

ನವದೆಹಲಿ (ಫೆ. 21): ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸುವ ರಾಜ್ಯಸಭಾ ಸದಸ್ಯರಿಗೆ ಮಸೂದೆಗಳಿಗೆ ಸಂಬಂಧಿಸಿದ ಮತದಾನ ಪ್ರಕ್ರಿಯೆ ವೇಳೆ ಮತ ಹಾಕುವುದರಿಂದ ನಿರ್ಬಂಧ ಹೇರಬೇಕು ಎಂದು ಸದನದ ನಿಯಮಗಳ ಪರಿಶೀಲನೆಗೆ ನೇಮಕಗೊಂಡಿದ್ದ ಸಮಿತಿಯೊಂದು ಶಿಫಾರಸು ಮಾಡಿದೆ.

ಇದೇ ವೇಳೆ, ರಾಜ್ಯಸಭೆಯ ನಿಯಮ 267 ರಡಿ ಕೇವಲ ಅರ್ಧ ತಾಸು ಚರ್ಚೆಗಷ್ಟೇ ಅವಕಾಶ ಕಲ್ಪಿಸಬೇಕು ಎಂದೂ ಸಲಹೆ ಮಾಡಿದೆ. ನಿಯಮ 267ರಡಿ ಎಲ್ಲ ಕಲಾಪಗಳನ್ನೂ ಬದಿಗೊತ್ತಿ, ನಿರ್ದಿಷ್ಟ ವಿಷಯಗಳ ಕುರಿತು ಚರ್ಚೆಗೆ ಅವಕಾಶವಿದೆ. ಹೀಗಾಗಿ ಈ ನಿಯಮ ರಾಜ್ಯಸಭೆಯ ಪ್ರತಿಪಕ್ಷಗಳಿಗೆ ಅಚ್ಚುಮೆಚ್ಚಿನದ್ದಾಗಿದೆ.

‘100 ಕೋಟಿ ಜನರ ಮಣಿಸಲು 15 ಕೋಟಿ ಮುಸ್ಲಿಮರು ಸಾಕು’

ಕಲಾಪದ ಸಂದರ್ಭ ಸದಸ್ಯರು ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರೆ ಅವರನ್ನು ಅಮಾನತುಗೊಳಿಸುವ ಅಧಿಕಾರ ಲೋಕಸಭೆಯಲ್ಲಿ ಸ್ಪೀಕರ್‌ ಅವರಿಗೆ ಇದೆ. ಆದರೆ ರಾಜ್ಯಸಭೆಯಲ್ಲಿ ಸಭಾಪತಿಗಳಿಗೆ ಆ ಅಧಿಕಾರ ಇಲ್ಲ. ಹೀಗಾಗಿ ನಿಯಮ ತಿದ್ದುಪಡಿಗಾಗಿ ರಾಜ್ಯಸಭೆಯ ಮಾಜಿ ಮಹಾಪ್ರಧಾನ ಕಾರ್ಯದರ್ಶಿ ವಿ.ಕೆ. ಅಗ್ನಿಹೋತ್ರಿ, ಕಾನೂನು ಸಚಿವಾಲಯದ ಮಾಜಿ ಹೆಚ್ಚುವರಿ ಕಾರ್ಯದರ್ಶಿ ದಿನೇಶ್‌ ಭಾರದ್ವಾಜ್‌ ಅವರ ಸಮಿತಿಯನ್ನು ಸಭಾಪತಿ ವೆಂಕಯ್ಯ ನಾಯ್ಡು ರಚಿಸಿದ್ದರು. 51 ಸಭೆಗಳನ್ನು ನಡೆಸಿ ಆ ಸಮಿತಿ ಕೆಲವೊಂದು ಶಿಫಾರಸುಗಳನ್ನು ಮಾಡಿದೆ.

ಆದರೆ ಸದನದ ಬಾವಿಗೆ ಇಳಿದವರ ಮತ ಹಕ್ಕು ಕಸಿಯುವುದು ಪ್ರಜಾಸತ್ತೆ ವಿರೋಧಿ, ಅಪ್ರಾಯೋಗಿಕ ಎಂದು ಮಾಜಿ ಸಂಸದೀಯ ಕಾರ್ಯದರ್ಶಿ ಅಫ್ಜಲ್‌ ಅಮಾನುಲ್ಲಾ ತಿಳಿಸಿದ್ದರೆ, ಈ ವಿಷಯ ಚರ್ಚೆಗೆ ಬಂದಾಗ ನಿಲುವು ತೆಗೆದುಕೊಳ್ಳುತ್ತೇವೆ ಎಂದು ಕಾಂಗ್ರೆಸ್ಸೇತರ ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

click me!