ಮುಂದಿನ ಬಜೆಟ್ ಮೇಲೆ ಮಾತನಾಡುತ್ತೇನೋ ಇಲ್ಲವೋ ಗೊತ್ತಿಲ್ಲ. ಹೀಗಾಗಿ ಜೆಪಿ ನಡ್ಡಾ ನಿಮ್ಮ ಸಮಯ ನನಗೆ ನೀಡಿ ಎಂದು ಮಾಜಿ ಪ್ರಧಾನಿ ದೇವೇಗೌಡರು ರಾಜ್ಯಸಭೆಯಲ್ಲಿ ಬಜೆಟ್ ಚರ್ಚೆ ಆರಂಭಿಸಿದ್ದಾರೆ. ಇದೇ ವೇಳೆ 2014ರಲ್ಲಿ ಮೋದಿ ಗೆದ್ದರೆ ನಾನು ರಾಜೀನಾಮೆ ನೀಡವುದಾಗಿ ಹೇಳಿದ್ದೆ ಎಂದು ಕೆಲ ಘಟನೆಗಳನ್ನು ದೇವೇಗೌಡರು ನೆನೆಪಿಸಿದ್ದಾರೆ
ನವದೆಹಲಿ(ಜು.29) ರಾಜ್ಯಸಭೆಯಲ್ಲಿ ಕಾವೇರಿದ ಚರ್ಚೆ ನಡೆದಿದೆ. ಪ್ರಮುಖವಾಗಿ ರಾಜ್ಯಸಭಾ ಸದಸ್ಯ, ಮಾಜಿ ಪ್ರಧಾನಿ ದೇವೇಗೌಡರು ಕೇಂದ್ರ ಬಜೆಟ್ ಮೇಲೆ ಚರ್ಚೆನಡೆಸಿದ್ದಾರೆ. ದೇವೇಗೌಡರ ಮಾತಿಗೆ ಎನ್‌ಡಿಎ ಸದಸ್ಯರು ಮೇಜು ತಟ್ಟಿ ಪ್ರಶಂಸಿಸಿದ್ದಾರೆ. ಈ ಬಜೆಟನ್ನು ಹೃದಯಪೂರ್ವಕವಾಗಿ ಸ್ವಾಗತ ಮಾಡುತ್ತೇನೆ. ಮುಂದಿನ ಬಜೆಟ್ ಬಗ್ಗೆ ನಾನು ಮಾತನಾಡುತ್ತೇನೋ ಇಲ್ಲವೋ ಅನ್ನೋದು ಗೊತ್ತಿಲ್ಲ. ಹೀಗಾಗಿ ಆಡಳಿತ ಪಕ್ಷದ ರಾಜ್ಯಸಭಾ ನಾಯಕ ಜೆಪಿ ನಡ್ಡಾ ಬಳಿ ಸಮಯ ಕೇಳಿದ ದೇವೇಗೌಡರು ಚರ್ಚೆ ನಡೆಸಿದ್ದಾರೆ.
2014ರ ಲೋಕಸಭಾ ಪ್ರಚಾರದ ವೇಳೆ, ಮೋದಿ ಗೆದ್ದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದೆ ಎಂದು ದೇವೇಗೌಡರು ಹಳೇ ಘಟನೆ ನೆನೆಪಿಸಿದ್ದಾರೆ. ಇದು ಬಿಜೆಪಿ ಬಜೆಟ್ ಅಲ್ಲ, ಎನ್‌ಡಿಎ ಬಜೆಟ್. ಪ್ರಧಾನಿ ಮೋದಿ, ನಿರ್ಮಲಾ ಸೀತಾರಾಮನ್ ಹಾಗೂ ಜೆಪಿ ನಡ್ಡಾರನ್ನು ಹಾಡಿ ಹೊಗಳಿದ ದೇವೇಗೌಡರು, ಹಲವು ವಿಚಾರಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಲ್ಲದಕ್ಕೂ ದೇವೇಗೌಡರನ್ನು ಹೊಣೆ ಮಾಡಲಾಗದು: ಸಿ.ಎಸ್.ಪುಟ್ಟರಾಜು
ನರೇಂದ್ರ ಮೋದಿ ಹಾೂ ಅಮಿತ್ ಶಾ ಆಡಳಿತದಲ್ಲಿ ಗುಜರಾತ್ ಮಹತ್ತರ ಅಭಿವೃದ್ಧಿ ಕಂಡಿದೆ. 1964ರಲ್ಲಿ ಗುಜರಾತ್‌ಗೆ ಬೇಟಿ ನೀಡಿದಾಗ ಹೇಗಿತ್ತು ಅನ್ನೋದು ನೋಡಿದ್ದೆ. ಇದೀಗ ಹೇಗೆ ಬದಲಾಗಿದೆ ಅನ್ನೋದನ್ನು ನೋಡಿದ್ದೇನೆ. ಎನ್‌ಡಿಎ ಭಾಗವಾಗಿರುವ ಬಿಹಾರ ಹಾಗೂ ಆಂಧ್ರ ಪ್ರದೇಶಕ್ಕೆ ಅನುದಾನವನ್ನು ಸ್ವಾಗತಿಸುತ್ತೇನೆ ಎಂದು ಗೌಡರು ಹೇಳಿದ್ದಾರೆ.
ನಾನು ಪ್ರಧಾನಿಯಾಗಿದ್ದ ವೇಳೆ ವಾಜಪೇಯಿ ವಿರೋಧ ಪಕ್ಷದ ನಾಯಕರಾಗಿದ್ದರು. ಅಂದು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅವರು ಯಾವುದೇ ಅಡೆತಡೆ ಮಾಡಿಲ್ಲ ಎಂದು ಹಳೇ ಘಟನೆ ನೆನಪಿಸಿದ್ದಾರೆ. ರೈತರ ಸಮಸ್ಯೆ, ಕಾವೇರು ನೀರಿನ ಬಿಕ್ಕಟ್ಟು ಸೇರಿದಂತೆ ಹಲವು ವಿಚಾರಗಳ ಮೇಲೆ ದೇವೇಗೌಡರು ಬೆಳಕು ಚೆಲ್ಲಿದ್ದಾರೆ.
ಕಳೆದ ಹಲವು ದಶಕಗಳಿಂದ ರೈತ ಸಮುದಾಯ ಶೋಷಣೆಗೆ ಒಳಗಾಗುತ್ತಿದೆ. ರೈತ ಸಮುದಾಯ ಶೇಕಡಾ 68 ರಿಂದ ಶೇಕಡಾ 40ಕ್ಕೆ ಇಳಿಕೆಯಾಗಿದೆ. ಈ ಬಾರಿಯ ಬಜೆಟ್ ರೈತರ ಪರವಾಗಿದೆ ಎಂದಿದ್ದಾರೆ. ಇದೇ ವೇಳೆ ಕಾವೇರಿ ನೀರಿನ ವಿಚಾರ ಮುಂದಿಟ್ಟು ದೇವೇಗೌಡರು ಚರ್ಚೆ ನಡೆಸಿದ್ದಾರೆ. ಕಾವೇರಿನ ನೀರಿನ ಸಮಸ್ಯೆ ಪ್ರಧಾನಿ ಮೋದಿ, ಕರ್ನಾಟಕದಿಂದ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್‌ಗೂ ತಿಳಿದಿದೆ. ಕಾವೇರಿ ನ್ಯಾಯಾಧೀಕರಣ ತೀರ್ಪು ಪ್ರಕಟಗೊಂಡಾಗ ಬೆಂಗಳೂರು ಜನಸಂಖ್ಯೆ 80 ಲಕ್ಷವಿತ್ತು. ಇದೀಗ ಒಂದೂವರೆ ಕೋಟಿಗೂ ಮೇಲಿದೆ. ಕುಡಿಯುವ ನೀರು ಮೂಲಭೂತ ಹಕ್ಕು. ಇದರಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ದೇವೇಗೌಡರು ಹೇಳಿದ್ದಾರೆ.
ಮುಡಾದಿಂದ ಮಾಜಿ ಪ್ರಧಾನಿ ದೇವೇಗೌಡರು ಎಷ್ಟು ಸೈಟು ಪಡೆದಿದ್ದಾರೆ ಪಟ್ಟಿ ಕೊಡ್ಲಾ? ಎಂದ ಸಿಎಂ ಸಿದ್ದರಾಮಯ್ಯ
ಜುಲೈ 31ರ ವರೆಗೆ 10 ಟಿಎಂಸಿ ನೀರು ಬಿಡಲು ಆದೇಶವಿತ್ತು. ಆದರೆ ಮಳೆಯಿಂದಾಗಿ ಹೆಚ್ಚು ನೀರು ಹರಿದಿದೆ. ಬೆಂಗಳೂರು ಸೇರಿದಂತೆ 27 ತಾಲೋಕುಗಳಲ್ಲಿ ನೀರಿನ ಸಮಸ್ಯೆ ಇದೆ ಎಂದಿದ್ದಾರೆ. ಈ ವೇಳೆ ತಮಿಳುನಾಡು ಸಂಸದರು ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಭದ್ರ ಮೇಲ್ದಂಡೆ ಯೋಜನಾ ಹಣ, ಕುಡಿಯುವ ನೀರಿಗೆ ಶಾಶ್ವತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಗೌಡರು ಮನವಿ ಮಾಡಿದ್ದಾರೆ.