
ನವದೆಹಲಿ(ಸೆ.20): ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಬಲ ತುಂಬುವ ವಿಧೇಯಕವನ್ನು ರಾಜ್ಯಸಭೆ ಶನಿವಾರ ಅಂಗೀಕರಿಸಿದೆ. ಈ ಪ್ರಕಾರ, ಕೊರೋನಾ ಕರ್ತವ್ಯದಲ್ಲಿ ನಿರತರಾಗಿರುವ ಅಥವಾ ಇತರ ಆರೋಗ್ಯ ಸೇವೆಗಳಲ್ಲಿ ತೊಡಗಿರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮೇಲೆ ದಾಳಿ ಮಾಡಿದರೆ 7 ವರ್ಷದವರೆಗೆ ಜೈಲು ಶಿಕ್ಷೆಯಾಗಲಿದೆ.
ಈ ಕುರಿತಾದ ‘ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ಕಾಯ್ದೆ ಮಸೂದೆ-2020’ ವಿಧೇಯಕವನ್ನು ಸರ್ವಾನುಮತದಿಂದ ಸದನ ಅಂಗೀಕರಿಸಿತು. ಕಳೆದ ಏಪ್ರಿಲ್ನಲ್ಲೇ ಈ ಕುರಿತ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಈಗ ಅಂಗೀಕಾರವಾಗಿರುವ ಮಸೂದೆಯು ಸುಗ್ರೀವಾಜ್ಞೆಯ ಸ್ಥಾನವನ್ನು ಅಲಂಕರಿಸಲಿದೆ.
‘ಕೊರೋನಾ ಆರಂಭವಾದ ಬಳಿಕ ದೇಶದ ಹಲವು ಭಾಗಗಳಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮೇಲೆ ದೌರ್ಜನ್ಯ ನಡೆದಿವೆ. ಇದು ನೋವಿನ ವಿಚಾರ. ಈ ಕಾರಣಕ್ಕೆ ಇವರ ರಕ್ಷಣೆಗೆ ಇಡೀ ದೇಶಕ್ಕೆ ಅನ್ವಯವಾಗುವ ಬಲವಾದ ಕಾನೂನು ಅಗತ್ಯ ಎಂದು ಭಾವಿಸಿ ಈ ಕಠಿಣ ಕಾನೂನು ತರಲಾಗಿದೆ’ ಎಂದು ಆರೋಗ್ಯ ಸಚಿವ ಡಾ| ಹರ್ಷವರ್ಧನ್ ಹೇಳಿದರು.
ಈ ಕುರಿತು ನಡೆದ ಚರ್ಚೆಯ ವೇಳೆ, ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ತುರ್ತು ಸೇವೆಗಳಲ್ಲಿ ನಿರತರಾಗಿರುವ ಪೊಲೀಸರು ಹಾಗೂ ಇತರ ಸಿಬ್ಬಂದಿಗಳನ್ನೂ ಕಾಯಿದೆಯ ವ್ಯಾಪ್ತಿಗೆ ತರಬೇಕು ಎಂಬ ಆಗ್ರಹ ಸದಸ್ಯರಿಂದ ಕೇಳಿಬಂತು. ಇನ್ನೂ ಕೆಲವರು ಖಾಸಗಿ ಆಸ್ಪತ್ರೆಗಳು ಕೊರೋನಾ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ವಸೂಲಿ ದಂಧೆಯಲ್ಲಿ ನಿರತವಾಗಿವೆ ಎಂದೂ ಆರೋಪಿಸಿದರು.
ಕಾಯ್ದೆಯಲ್ಲೇನಿದೆ?
- ವೈದ್ಯರು, ವೈದ್ಯ ಸಿಬ್ಬಂದಿಗೆ ಹಿಂಸಿಸಿದರೆ 3 ತಿಂಗಳಿನಿಂದ 5 ವರ್ಷದವರೆಗೆ ಜೈಲು. 50 ಸಾವಿರದಿಂದ 2 ಲಕ್ಷ ರು.ವರೆಗೆ ದಂಡ
- ಗಂಭೀರ ಸ್ವರೂಪದ ಗಾಯ ಮಾಡಿದರೆ 6 ತಿಂಗಳಿನಿಂದ 7 ವರ್ಷಗಳವರೆಗೆ ಜೈಲು. 1 ಲಕ್ಷ ರು.ನಿಂದ 5 ಲಕ್ಷ ರು.ವರೆಗೆ ದಂಡ
- ಮನೆ ಮಾಲೀಕರು ಅಥವಾ ನೆರೆಹೊರೆಯವರು ವೈದ್ಯಕೀಯ ಸಿಬ್ಬಂದಿಗೆ ಕಿರುಕುಳ ಕೊಟ್ಟರೆ ಅವರಿಗೂ ಶಿಕ್ಷೆ
- ಗಂಭೀರ, ಜಾಮೀನುರಹಿತ ಅಪರಾಧ ಎಂದು ಪರಿಗಣನೆ. ಪೊಲೀಸರು ಬಂಧಿಸಿದರೆ ಠಾಣಾ ಜಾಮೀನಿಲ್ಲ
- ಹಿಂಸೆ ವೇಳೆ ಆಸ್ತಿಪಾಸ್ತಿ ಹಾನಿ ಮಾಡಿದರೆ ನಷ್ಟವಸೂಲಿ. ಮಾರುಕಟ್ಟೆಯ ದುಪ್ಪಟ್ಟು ಮೌಲ್ಯದಂತೆ ಬೆಲೆ ತೆರಬೇಕು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ