ವಿರಾಟ್‌ ಉಳಿಸಲು ಆರ್‌ಸಿ ಯತ್ನ: ರಿಲಯನ್ಸ್‌, ಟಾಟಾ, ವಿಪ್ರೋಗೆ ಸಂಸದ ಮೊರೆ!

By Suvarna News  |  First Published Sep 20, 2020, 11:43 AM IST

‘ವಿರಾಟ್‌’ ಉಳಿಸಲು ಆರ್‌ಸಿ ಯತ್ನ| ರಿಲಯನ್ಸ್‌, ಟಾಟಾ, ವಿಪ್ರೋಗೆ ಸಂಸದ ಮೊರೆ|  ಟ್ರಸ್ಟ್‌ ಮಾಡಿ ದೇಶದ ನೌಕೆ ಉಳಿಸಲು ಕೋರಿಕೆ| ರಾಜೀವ್‌ ಪ್ರಯತ್ನಕ್ಕೆ ನಿವೃತ್ತ ಅಧಿಕಾರಿಗಳ ಬೆಂಬಲ


ಮುಂಬೈ(ಸೆ.20): ಭಾರತೀಯ ನೌಕಾಪಡೆಯಲ್ಲಿ 3 ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತವಾಗಿರುವ ‘ಐಎನ್‌ಎಸ್‌ ವಿರಾಟ್‌’ ನೌಕೆ ಗುಜರಾತಿನ ಹಡಗು ಒಡೆಯುವ ಕಾರ್ಖಾನೆಯತ್ತ ಶನಿವಾರ ಮುಂಬೈನಿಂದ ಪ್ರಯಾಣ ಬೆಳೆಸಿದೆ. ಇದರ ಬೆನ್ನಲ್ಲೇ, ಭಾರತದ ಹೆಮ್ಮೆಯಾಗಿರುವ ಈ ನೌಕೆಯನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಕರ್ನಾಟಕದ ಬಿಜೆಪಿ ಸಂಸದ ರಾಜೀವ್‌ ಚಂದ್ರಶೇಖರ್‌ ಅವರು ಕೊನೆಯ ಪ್ರಯತ್ನ ಆರಂಭಿಸಿದ್ದಾರೆ.

‘ಐಎನ್‌ಎಸ್‌ ವಿರಾಟ್‌ ಉಳಿಸಿಕೊಳ್ಳಲು ಕೊನೆಯ ಪ್ರಯತ್ನ ಮಾಡಲು ಮುಂದಾಗಿದ್ದೇನೆ. ರಿಲಯನ್ಸ್‌, ಟಾಟಾ, ಅದಾನಿ, ವಿಪ್ರೋ, ಎಚ್‌ಸಿಎಲ್‌, ಮಹಿಂದ್ರಾ, ಉದಯ್‌ ಕೋಟಕ್‌, ಪೂನಾವಾಲಾ, ಇನ್ಪೋಸಿಸ್‌ನಂತಹ ಐಟಿ ಕಂಪನಿಗಳು ನಮ್ಮ ಇತಿಹಾಸವನ್ನು ಉಳಿಸಿಕೊಳ್ಳಲು ಟ್ರಸ್ಟ್‌ಗೆ ಕೊಡುಗೆ ನೀಡುವ ಕುರಿತಂತೆ ಪರಿಶೀಲಿಸಬೇಕು. ಈ ವಿಷಯಕ್ಕೆ ಮಾಧ್ಯಮ ಸ್ನೇಹಿತರು ಹೆಚ್ಚು ಮಹತ್ವ ಕೊಡಬೇಕು’ ಎಂದು ವಿನಂತಿಸಿಕೊಂಡಿದ್ದಾರೆ.

Latest Videos

undefined

ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿರುವ ಐಎನ್‌ಎಸ್‌ ವಿರಾಟ್‌ ನೌಕೆ ತಮ್ಮ ಜೀವಿತಾವಧಿಯಲ್ಲೇ ನಾಶವಾಗುತ್ತಿರುವುದನ್ನು ಕಂಡು ಮರುಗುತ್ತಿರುವ ನೌಕಾಧಿಕಾರಿಗಳು ರಾಜೀವ್‌ ಅವರ ಈ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ್ದಾರೆ. ಗುಜರಾತಿನ ಅಲಾಂಗ್‌ ಅನ್ನು ತಲುಪಿ, ಕಟಿಂಗ್‌ ಆರಂಭವಾಗಲು ಇನ್ನೂ ಕೆಲವು ದಿನಗಳು ಉಳಿದಿವೆ. ಈಗಲೂ ನೌಕೆ ಉಳಿಸಿಕೊಳ್ಳುವ ಅವಕಾಶ ಇದೆ ಎಂದು ವಿರಾಟ್‌ ನೌಕೆಯನ್ನು ಒಂದು ಕಾಲದಲ್ಲಿ ಮುನ್ನಡೆಸಿ, ಬಳಿಕ ನೌಕಾಪಡೆ ಮುಖ್ಯಸ್ಥ ಹುದ್ದೆ ಅಲಂಕರಿಸಿದ್ದ ಅಡ್ಮಿರಲ್‌ ಅರುಣ್‌ ಪ್ರಕಾಶ್‌ ಹೇಳಿದ್ದಾರೆ. ನಿವೃತ್ತ ಕಮೋಡರ್‌ ಸಿ. ಉದಯ ಭಾಸ್ಕರ್‌ ಕೂಡ ರಾಜೀವ್‌ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ರಾಜೀವ್‌ ಅವರು ಹಳೆಯ ನೌಕೆ, ವಿಮಾನ ಉಳಿಸಲು ಪ್ರಯತ್ನ ಮಾಡುತ್ತಿರುವುದು ಇದೇ ಮೊದಲಲ್ಲ. ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಗುಜರಿ ಸೇರಿದ್ದ ಡಕೋಟಾ ಹೆಸರಿನ ವಿಮಾನವನ್ನು ಅವರು ಖರೀದಿಸಿ, 2018ರಲ್ಲಿ ಮತ್ತೆ ವಾಯುಪಡೆಗೆ ತಂದುಕೊಟ್ಟಿದ್ದರು.

ವಿರಾಟ್‌ ಕೊನೆಯ ಪಯಣ:

ಬ್ರಿಟಿಷ್‌ ನೌಕಾಪಡೆಯಲ್ಲಿ 27 ವರ್ಷಗಳ ಕಾಲ ಎಚ್‌ಎಂಎಸ್‌ ಹರ್ಮಿಸ್‌ ಹೆಸರಿನಲ್ಲಿ ಸೇವೆ ಸಲ್ಲಿಸಿದ್ದ ನೌಕೆಯನ್ನು ಐಎನ್‌ಎಸ್‌ ವಿರಾಟ್‌ ಹೆಸರಿನಲ್ಲಿ 1987ರ ಮೇ 12ರಂದು ಭಾರತೀಯ ನೌಕಾಪಡೆ ಸೇರ್ಪಡೆ ಮಾಡಿಕೊಂಡಿತ್ತು. 29 ವರ್ಷಗಳ ಕಾಲ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದ ವಿರಾಟ್‌ 2017ರ ಮಾಚ್‌ರ್‍ನಲ್ಲಿ ಸೇವೆಯಿಂದ ನಿವೃತ್ತಿಗೊಂಡಿತ್ತು. ಇದನ್ನು ರೆಸ್ಟೋರೆಂಟ್‌ ಅಥವಾ ಮ್ಯೂಸಿಯಂ ಆಗಿ ಪರಿವರ್ತಿಸುವ ಪ್ರಯತ್ನಗಳು ವಿಫಲವಾಗಿದ್ದವು. ಈ ಹಿನ್ನೆಲೆಯಲ್ಲಿ ಹರಾಜಿಗೆ ಇಡಲಾಗಿತ್ತು. ಗುಜರಾತಿನ ಅಲಾಂಗ್‌ ಮೂಲದ ಶ್ರೀರಾಂ ಗ್ರೂಪ್‌ ಕಂಪನಿ 38.54 ಕೋಟಿ ರು.ಗೆ ಖರೀದಿ ಮಾಡಿತ್ತು.

ಈ ನೌಕೆ ಇದೀಗ ಮುಂಬೈನಿಂದ ಶನಿವಾರ ಗುಜರಾತ್‌ನ ಅಲಾಂಗ್‌ ಕಡೆ ಪ್ರಯಾಣ ಬೆಳೆಸಿದೆ. ಅಲ್ಲಿಗೆ ತಲುಪಿದ ಬಳಿಕ ಅದನ್ನು ಒಡೆಯಲಾಗುತ್ತದೆ. ಅದರ ವಸ್ತುಗಳನ್ನು ಗುಜರಿಗೆ ಹಾಕಲಾಗುತ್ತದೆ.

ಈ ನೌಕೆ ಸೇವೆಯಲ್ಲಿದ್ದಾಗ ಅದೊಂದು ತೇಲುವ ನಗರದಂತೆ ಇತ್ತು. 1500 ಸಿಬ್ಬಂದಿ, ಅಧಿಕಾರಿಗಳು ಅದರಲ್ಲಿ ನಿತ್ಯ ಕಾರ್ಯನಿರ್ವಹಿಸುತ್ತಿದ್ದರು. ಅವರಲ್ಲಿ ಕೆಲವರು ಮುಂಬೈನ ಇಂಡಿಯಾ ಗೇಟ್‌ ಸನಿಹ ಶನಿವಾರ ನೆರೆದು ನೌಕೆಗೆ ಭಾವುಕ ವಿದಾಯ ಹೇಳಿದರು.

click me!