ಮಹಾ ರೋಚಕ ಫಲಿತಾಂಶ: 6ನೇ ಸೀಟು ಅಚ್ಚರಿ ರೀತಿ ಗೆದ್ದ ಬಿಜೆಪಿ, ಆಡಳಿತಾರೂಢ ಕೂಟಕ್ಕೆ ಭಾರಿ ಹಿನ್ನಡೆ!

Published : Jun 12, 2022, 05:30 AM IST
ಮಹಾ ರೋಚಕ ಫಲಿತಾಂಶ: 6ನೇ ಸೀಟು ಅಚ್ಚರಿ ರೀತಿ ಗೆದ್ದ ಬಿಜೆಪಿ, ಆಡಳಿತಾರೂಢ ಕೂಟಕ್ಕೆ ಭಾರಿ ಹಿನ್ನಡೆ!

ಸಾರಾಂಶ

* ಮಹಾರಾಷ್ಟ್ರ ವಿಧಾನಸಭೆಯಿಂದ ರಾಜ್ಯಸಭೆಯ ಚುನಾವಣೆ * ಹನುಮಾನ್‌ ಚಾಲೀಸಾಗೆ ಅಪಮಾನ ಮಾಡಿದವರಿಗೆ ಸೋಲು ಆಗಿದೆ: ಫಡ್ನವೀಸ್‌ * ಫಡ್ನವೀಸ್‌ ಪವಾಡ: ಪವಾರ್‌ * ಕುದುರೆ ವ್ಯಾಪಾರಕ್ಕೆ ಸಿಕ್ಕ ಫಲಿತಾಂಶ: ಶಿವಸೇನೆ

ಮುಂಬೈ(ಜೂ.12): ಮಹಾರಾಷ್ಟ್ರ ವಿಧಾನಸಭೆಯಿಂದ ರಾಜ್ಯಸಭೆಯ 6 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಬಂದಿದೆ. ಅವಿರೋಧ ಆಯ್ಕೆಗೆ ಅವಕಾಶವಿದ್ದರೂ, ಸಂಖ್ಯಾ ಬಲ ತನ್ನ ಪರ ಇಲ್ಲದಿದ್ದರೂ ಹಟ ಹಿಡಿದು ಆರನೇ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಚುನಾವಣೆ ನಡೆಯುವಂತೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ಪಕ್ಷದ ಆರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಇದರ ಫಲವಾಗಿ ಮಹಾರಾಷ್ಟ್ರದ ಆಡಳಿತಾರೂಢ ಅಘಾಡಿ ಸರ್ಕಾರದ ಅಭ್ಯರ್ಥಿಗೆ ಸೋಲಾಗಿದ್ದು, ಆಡಳಿತ ಕೂಟಕ್ಕೆ ತೀವ್ರ ಮುಖಭಂಗವಾಗಿದೆ.

ಬಿಜೆಪಿಯಿಂದ ಕೇಂದ್ರ ಸಚಿವ ಪೀಯೂಷ್‌ ಗೋಯಲ್‌, ಮಾಜಿ ಸಚಿವ ಅನಿಲ್‌ ಬೊಂಡೆ, ಧನಂಜಯ ಮಹದಿಕ್‌ ಚುನಾಯಿತರಾಗಿದ್ದರೆ, ಅಘಾಡಿ ಕೂಟದಿಂದ ಶಿವಸೇನೆಯ ಸಂಜಯ ರಾವುತ್‌, ಎನ್‌ಸಿಪಿಯ ಪ್ರಫುಲ್‌ ಪಟೇಲ್‌, ಕಾಂಗ್ರೆಸ್ಸಿನ ಇಮ್ರಾನ್‌ ಪ್ರತಾಪ್‌ಗಢಿ ಅವರು ಆಯ್ಕೆಯಾಗಿದ್ದಾರೆ. ಆರನೇ ಸ್ಥಾನಕ್ಕೆ ಎನ್‌ಸಿಪಿಯಿಂದ ಸಂಜಯ್‌ ಪವಾರ್‌ ಹಾಗೂ ಬಿಜೆಪಿಯಿಂದ ಮಹದಿಕ್‌ ಅವರು ಸ್ಪರ್ಧಿಸಿದ್ದರು. ಪಕ್ಷೇತರರ ಬೆಂಬಲವನ್ನು ಅನಿರೀಕ್ಷಿತವಾಗಿ ಪಡೆಯುವಲ್ಲಿ ಫಡ್ನವೀಸ್‌ ಯಶಸ್ವಿಯಾಗಿದ್ದರಿಂದ ಮಹದಿಕ್‌ (41.56) ಅವರು ಶಿವಸೇನೆಯ ಅಭ್ಯರ್ಥಿ ಪವಾರ್‌ಗಿಂತ (41) ಹೆಚ್ಚು ಮತ ಪಡೆದು ಆಯ್ಕೆಯಾಗಿದ್ದಾರೆ. ಗೆಲುವಿಗೆ 41 ಮತಗಳ ಅಗತ್ಯವಿತ್ತು.

ಫಡ್ನವೀಸ್‌ ಪವಾಡ- ಪವಾರ್‌:

‘ವಿಭಿನ್ನ ಮಾರ್ಗಗಳನ್ನು ಅನುಸರಿಸಿ ಆಡಳಿತ ಕೂಟದಿಂದ ಪಕ್ಷೇತರ ಶಾಸಕರನ್ನು ಸೆಳೆಯುವಲ್ಲಿ ಫಡ್ನವೀಸ್‌ ಅವರು ಪವಾಡ ಮಾಡಿದ್ದಾರೆ. ಇದರಿಂದಾಗಿ ಅವರಿಗೆ ಗೆಲುವು ದಕ್ಕಿದೆ. ಈ ಫಲಿತಾಂಶದಿಂದ ಸರ್ಕಾರಕ್ಕೆ ಯಾವುದೇ ಅಪಾಯವಾಗದು’ ಎಂದು ಎನ್‌ಸಿಪಿ ನಾಯಕ ಶರದ್‌ ಪವಾರ್‌ ಹೇಳಿದ್ದರೆ, ‘ಬಿಜೆಪಿ ನಡೆಸಿದ ಕುದುರೆ ವ್ಯಾಪಾರಕ್ಕೆ ಜಯ ಸಿಕ್ಕಿದೆ’ ಎಂದು ಶಿವಸೇನೆ ಹರಿಹಾಯ್ದಿದೆ. ‘ಚುನಾವಣಾ ಆಯೋಗ ಬಿಜೆಪಿ ಪರವಾಗಿ ಕಾರ್ಯನಿರ್ವಹಿಸಿದೆ’ ಎಂದು ದೂರಿದೆ.

ಹನುಮಂತನ ಅವಮಾನಿಸಿದವರಿಗೆ ಶಾಸ್ತಿ:

ಈ ಮಧ್ಯೆ, ಹನುಮಾನ್‌ ಚಾಲೀಸಾಗೆ ಯಾರು ಅಪಮಾನ ಮಾಡಿದ್ದರೋ ಅವರಿಗೆ ಸೋಲಾಗಿದೆ. ಯಾರು ಅದಕ್ಕೆ ಗೌರವ ನೀಡಿದ್ದರೋ ಅವರಿಗೆ ಜಯ ಸಿಕ್ಕಿದೆ ಎಂದು ದೇವೇಂದ್ರ ಫಡ್ನವೀಸ್‌ ಅವರು ಹೇಳಿದ್ದಾರೆ.

ನಸುಕಿನ 3ಕ್ಕೆ ಫಲಿತಾಂಶ:

ಅಡ್ಡಮತದಾನ ಹಾಗೂ ಮತದಾನ ನಿಯಮ ಉಲ್ಲಂಘನೆ, ಮತ್ತಿತರೆ ಆರೋಪ ಮಾಡಿ ಬಿಜೆಪಿ ಹಾಗೂ ಶಿವಸೇನೆ ಎರಡೂ ಚುನಾವಣಾ ಆಯೋಗದ ಕದ ಬಡಿದಿದ್ದರಿಂದ ಮತ ಎಣಿಕೆ ರಾತ್ರಿ 1ಕ್ಕೆ ಆರಂಭವಾಯಿತು. ಅದಾದ 2 ಗಂಟೆಗಳ ತರುವಾಯ ಫಲಿತಾಂಶ ಪ್ರಕಟವಾಯಿತು. ಶಿವಸೇನೆಯ ಸುಹಾಸ್‌ ಕಾಂಡೆ ಅವರು ಚಲಾಯಿಸಿದ್ದ ಮತವನ್ನು ಚುನಾವಣಾ ಆಯೋಗ ಅಸಿಂಧುಗೊಳಿಸಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!