
ನವದೆಹಲಿ(ಜೂ,12): 4 ನೇ ಅಲೆಯ ಭೀತಿಯ ನಡುವೆ ದೇಶದಲ್ಲಿ ಕೋವಿಡ್ ಆರ್ಭಟ ಮತ್ತಷ್ಟುಹೆಚ್ಚಿದ್ದು, ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 8329 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದರಿಂದಾಗಿ 103 ದಿನಗಳ ನಂತರ ದೇಶದಲ್ಲಿ 8000ಕ್ಕೂ ಹೆಚ್ಚು ದೈನಂದಿನ ಕೋವಿಡ್ ಪ್ರಕರಣಗಳು ದಾಖಲಾದಂತಾಗಿದೆ.
ಇದೇ ವೇಳೆಯಲ್ಲಿ ಒಟ್ಟು 10 ಸೋಂಕಿತರು ಸಾವನ್ನಪ್ಪಿದ್ದಾರೆ. ಕೇರಳದಲ್ಲಿ 10, ದೆಹಲಿಯಲ್ಲಿ 2, ಗುಜರಾತ್, ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ತಲಾ 1 ಸಾವು ಸಂಭವಿಸಿವೆ. ಕಳೆದ 24 ಗಂಟೆಗಳಲ್ಲಿ ಗುಣಮುಖರಾದವರ ಸಂಖ್ಯೆಯು ಕಡಿಮೆಯಿದ್ದ ಕಾರಣ ಸಕ್ರಿಯ ಪ್ರಕರಣಗಳ ಸಂಖ್ಯೆ 4,103ರಷ್ಟುಹೆಚ್ಚಿದ್ದು, ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆಯು 40,370ಕ್ಕೆ ಏರಿಕೆಯಾಗಿದೆ.
ಕೇಸು ಹೆಚ್ಚಳದಲ್ಲಿ ಮಹಾರಾಷ್ಟ್ರ, ಕೇರಳ, ಕರ್ನಾಟಕ, ದಿಲ್ಲಿ ಕೊಡುಗೆ ಹೆಚ್ಚಿದೆ.
ದೈನಂದಿನ ಪಾಸಿಟಿವಿಟಿ ದರವು ಶುಕ್ರವಾರದ ಶೇ.2.16ರಿಂದ ಶನಿವಾರ ಶೇ. 2.41ಕ್ಕೆ ಏರಿದೆ. ವಾರದ ಪಾಸಿಟಿವಿಟಿ ದರವು ಶೇ. 1.75ಕ್ಕೆ ಏರಿಕೆಯಾಗಿದೆ. ಇದು ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯನ್ನು ಸೂಚಿಸಿದೆ. ಚೇತರಿಕೆ ದರವು ಶೇ. 98.69ಕ್ಕೆ ಇಳಿಕೆಯಾಗಿದೆ. ಈವರೆಗೆ ದೇಶದಲ್ಲಿ ಒಟ್ಟು 194.92 ಕೋಟಿ ಡೋಸು ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ.
ಹೀಗಿದೆ ರಾಜ್ಯದ ಸ್ಥಿತಿ
ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಕೇವಲ 10 ದಿನಕ್ಕೆ ಮೂರು ಪಟ್ಟು ಹೆಚ್ಚಳವಾಗಿವೆ. ಅಲ್ಲದೆ, ರಾಜಧಾನಿ ಬೆಂಗಳೂರಲ್ಲಿ ಮೂರೂವರೆ ತಿಂಗಳ ಬಳಿಕ ಹೊಸ ಪ್ರಕರಣಗಳು 500 ಗಡಿದಾಟಿವೆ.
ಶನಿವಾರ 562 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 352 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 3,387 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 27 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ ಶೇ.2.07ರಷ್ಟುದಾಖಲಾಗಿದೆ. ಶುಕ್ರವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 5 ಸಾವಿರ ಹೆಚ್ಚಾಗಿವೆ. ಹೀಗಾಗಿ, ಹೊಸ ಪ್ರಕರಣಗಳು 37 ಏರಿಕೆಯಾಗಿವೆ. (ಶುಕ್ರವಾರ 525, ಪ್ರಕರಣಗಳು, ಸಾವು ಶೂನ್ಯ).
ಜೂ.1 ರಂದು 178 ಇದ್ದ ಹೊಸ ಪ್ರಕರಣಗಳು ಸತತ ಐದು ದಿನಗಳ ಏರಿಕೆಯಾಗುತ್ತಾ ಸಾಗಿ 562ಕ್ಕೆ ಬಂದು ತಲುಪಿವೆ. ಈ ಮೂಲಕ ಕೇವಲ 10 ದಿನಗಳಲ್ಲಿ ಹೊಸ ಪ್ರಕರಣಗಳು ಮೂರು ಪಟ್ಟಾಗಿವೆ. ಇನ್ನೊಂದೆಡೆ ರಾಜ್ಯದ ಒಟ್ಟಾರೆ ಪ್ರಕರಣಗಳ ಪೈಕಿ 545(ಶೇ.97 ರಷ್ಟು) ಬೆಂಗಳೂರು ಒಂದರಲ್ಲಿಯೇ ಪತ್ತೆಯಾಗಿವೆ. ಅಲ್ಲದೆ, ಮೂರೂವರೆ ತಿಂಗಳ ಬಳಿಕ ಬೆಂಗಳೂರಿನಲ್ಲಿ ಹೊಸ ಪ್ರಕರಣಗಳು ಐದು ನೂರು ಗಡಿದಾಟಿವೆ. ಉಳಿದಂತೆ ಮೈಸೂರು 4, ದಕ್ಷಿಣ ಕನ್ನಡ 3, ಚಿತ್ರದುರ್ಗ 2, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಹಾಸನ, ತುಮಕೂರು, ಉತ್ತರ ಕನ್ನಡ, ಉಡುಪಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. 29 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.
106 ದಿನದ ಅಧಿಕ:
ಈ ಹಿಂದೆ ಫೆಬ್ರವರಿ 25 ರಂದು 628 ಕೊರೋನಾ ಪ್ರಕರಣಗಳು ವರದಿಯಾಗಿದ್ದವು. 106 ದಿನಗಳ ಬಳಿಕ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಕಳೆದ ಆರು ದಿನಗಳಿಂದ ಸೋಂಕಿತರ ಸಾವು ವರದಿಯಾಗಿಲ್ಲ. ಇನ್ನು ರಾಜ್ಯದಲ್ಲಿ ಈವರೆಗೆ 39.5 ಲಕ್ಷ ಮಂದಿಗೆ ಸೋಂಕು ತಗುಲಿದೆ. 39.1 ಲಕ್ಷ ಮಂದಿ ಗುಣಮುಖರಾಗಿದ್ದು, 40,066 ಮಂದಿ ಸಾವಿಗೀಡಾಗಿದ್ದಾರೆ.
ಪರೀಕ್ಷೆಗಳು ಐದು ಸಾವಿರ ಹೆಚ್ಚಳ:
ಪ್ರಸಕ್ತ ವಾರ ಆರಂಭದಲ್ಲಿ 17 ಸಾವಿರ ಆಸುಪಾಸಿನಲ್ಲಿದ್ದ ಕೊರೋನಾ ಸೋಂಕು ಪರೀಕ್ಷೆಗಳು ಗುರುವಾರ ಮತ್ತು ಶುಕ್ರವಾರ 22 ಸಾವಿರಕ್ಕೆ ಏರಿಕೆಯಾಗಿದ್ದವು. ಸದ್ಯ ಒಂದೇ ದಿನದಲ್ಲಿ ಐದು ಸಾವಿರ ಹೆಚ್ಚಳವಾಗಿ 27 ಸಾವಿರ ತಲುಪಿವೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಪರೀಕ್ಷೆಗಳು ಹೆಚ್ಚಳವಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ