ಒಬ್ಬಳೇ ವಿದ್ಯಾರ್ಥಿನಿಗಾಗಿ ರಾಜಧಾನಿ ಎಕ್ಸ್‌ಪ್ರೆಸ್‌ ಓಡಿತು!

By Kannadaprabha NewsFirst Published Sep 5, 2020, 7:27 AM IST
Highlights

ಒಬ್ಬಳೇ ವಿದ್ಯಾರ್ಥಿನಿಗಾಗಿ ರಾಜಧಾನಿ ಎಕ್ಸ್‌ಪ್ರೆಸ್‌ ಓಡಿತು!| 535 ಕಿ.ಮೀ. ಏಕಾಂಗಿ ಸಂಚಾರ

ರಾಂಚಿ(ಸೆ.05): ಕಾನೂನು ವಿದ್ಯಾರ್ಥಿನಿಯೊಬ್ಬಳಿಗಾಗಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲೊಂದನ್ನು ರೈಲ್ವೆ ಇಲಾಖೆ 535 ಕಿ.ಮೀ. ದೂರ ಓಡಿಸಿದ ಅಪರೂಪದ ಪ್ರಸಂಗ ಜಾರ್ಖಂಡ್‌ನಲ್ಲಿ ವರದಿಯಾಗಿದೆ.

ದೆಹಲಿಯಿಂದ ರಾಂಚಿಗೆ ರಾಜಧಾನಿ ಎಕ್ಸ್‌ಪ್ರೆಸ್‌ 932 ಜನರನ್ನು ಹೊತ್ತು ಬರುತ್ತಿತ್ತು. ಆದರೆ ಟೋರಿ ಎಂಬ ಜಂಕ್ಷನ್‌ನಲ್ಲಿ 250 ಬುಡಕಟ್ಟು ಸಮುದಾಯದವರು ಪೂಜೆಗೆ ಕುಳಿತುಬಿಟ್ಟರು. ಭಜನೆ ಆರಂಭಿಸಿದರು. ಹೀಗಾಗಿ ಹಲವು ರೈಲುಗಳು ನಿಂತಲ್ಲೇ ನಿಂತುಬಿಟ್ಟವು. ಇದು ಯಾಕೋ ಮುಗಿಯುವುದಿಲ್ಲ ಎಂದು ಅರಿತ ರೈಲ್ವೆ ಅಧಿಕಾರಿಗಳು, ರೈಲು ಪ್ರಯಾಣಿಕರನ್ನು ಬಸ್‌ ಮೂಲಕ ರಾಂಚಿಗೆ ತಲುಪಿಸಿದರು. 931 ಪ್ರಯಾಣಿಕರು ಬಸ್‌ನಲ್ಲಿ ತೆರಳಿದರು. ಆದರೆ ಒಬ್ಬ ವಿದ್ಯಾರ್ಥಿನಿ ಮಾತ್ರ ಜಪ್ಪಯ್ಯ ಎಂದರೂ ಜಗ್ಗಲಿಲ್ಲ.

ಬಸ್‌ ಬೇಡವಾದರೆ, ಟ್ಯಾಕ್ಸಿಯಲ್ಲಿ ಕಳುಹಿಸುತ್ತೇವೆ ಎಂದು ರೈಲು ಅಧಿಕಾರಿಗಳು ಹೇಳಿದರು. ‘ರೈಲು ಪ್ರಯಾಣಕ್ಕೆ ಹಣ ಕೊಟ್ಟಿದ್ದೇನೆ. ರೈಲಿನಲ್ಲೇ ಹೋಗುತ್ತೇನೆ’ ಎಂದು ಬನಾರಸ್‌ ಹಿಂದೂ ವಿವಿಯ ವಿದ್ಯಾರ್ಥಿನಿ ಅನನ್ಯಾ ಪಟ್ಟು ಹಿಡಿದಳು. ಟ್ವೀಟರ್‌ ಮೂಲಕ ರೈಲ್ವೆಗೂ ಮಾಹಿತಿ ನೀಡಿದಳು. ಕೊನೆಗೆ ಬದಲಿ ಮಾರ್ಗದ ಮೂಲಕ ರೈಲು ಓಡಿಸಲಾಯಿತು. ಖಾಲಿ ರೈಲಿನಲ್ಲಿ ಒಬ್ಬಳೇ ಕುಳಿತು ಶುಕ್ರವಾರ ನಸುಕಿನ 1.45ಕ್ಕೆ ರಾಂಚಿ ತಲುಪಿದಳು.

ಒಟ್ಟು 535 ಕಿ.ಮೀ. ದೂರವನ್ನು ಈ ರೈಲು ಕ್ರಮಿಸಿದ್ದು, ಸಾಮಾನ್ಯ ಮಾರ್ಗಕ್ಕಿಂತ ಇದು 225 ಸುತ್ತು ಬಳಸಿನ ಹಾದಿಯಾಗಿದೆ.

ದಿಲ್ಲಿಯಿಂದ ಹೊರಟಿದ್ದ ರೈಲಿನಲ್ಲಿ 931 ಪ್ರಯಾಣಿಕರಿದ್ದರು. ರೈಲು ಗುರುವಾರ ಟೋರಿ ಜಂಕ್ಷನ್‌ ಸನಿಹ ಬರುತ್ತಿದ್ದಂತೆಯೇ ಅಲ್ಲಿ ರೈಲು ರೋಕೋ ಆದಿವಾಸಿ ಜನಾಂಗದ ಪ್ರತಿಭಟನೆಯೊಂದು ನಡೆದಿತ್ತು. ಆಗ ಸಾಕಷ್ಟುಗಂಟೆಗಳ ಕಾಲ ರೈಲು ಮುಂದಕ್ಕೆ ಸಾಗಲೇ ಇಲ್ಲ. ಹೀಗಾಗಿ ಪ್ರಯಾಣಿಕರನ್ನು ಬಸ್ಸಿನಲ್ಲಿ ಕಳಿಸಲು ಜಿಲ್ಲಾ ಆಡಳಿತದ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಿದರು.

930 ಪ್ರಯಾಣಿಕರು ರಾಂಚಿಗೆ ಬಸ್ಸಿನಲ್ಲಿ ತೆರಳಲು ಒಪ್ಪಿ ನಿರ್ಗಮಿಸಿದರು. ಆದರೆ ಅನನ್ಯಾ ಎಂಬ ಬನಾರಸ್‌ ಹಿಂದೂ ವಿವಿಯ ಕಾನೂನು ವಿದ್ಯಾರ್ಥಿನಿಯೊಬ್ಬಳು ಬಸ್ಸಿನಲ್ಲಿ ಹೋಗಲು ಒಪ್ಪಲಿಲ್ಲ. ‘ನಾನು ರೈಲು ಪ್ರಯಾಣಕ್ಕೆ ದುಡ್ಡು ಕೊಟ್ಟಿದ್ದೇನೆ. ನಾನು ಬಸ್ಸಿನಲ್ಲಿ ಅಥವಾ ಟ್ಯಾಕ್ಸಿಯಲ್ಲಿ ಹೋಗಲ್ಲ. ರೈಲಿನಲ್ಲೇ ಹೋಗುವೆ’ ಎಂದು ಹಟ ಹಿಡಿದಳು. ರೈಲ್ವೆ ಇಲಾಖೆಗೆ ಟ್ವೀಟರ್‌ನಲ್ಲಿ ದೂರಿದಳು.

ಕೊನೆಗೆ ಈಕೆಯ ಪಟ್ಟಿಗೆ ಅಧಿಕಾರಿಗಳು ಬೇಸ್ತು ಬಿದ್ದರು. ಪ್ರತಿಭಟನೆ ಕಾರಣ ನಿಂತಿದ್ದ ರೈಲನ್ನು ಗಾಮೋಹ್‌ ಮತ್ತು ಬೊಕಾರೋ ಮಾರ್ಗವಾಗಿ ಸುತ್ತುಬಳಸಿ ರಾಂಚಿಯತ್ತ ತಿರುಗಿಸಿದರು. ಇದರಿಂದಾಗಿ ರೈಲು 535 ಕಿ.ಮೀ. ಸಂಚರಿಸಿ ಶುಕ್ರವಾರ ಅಂತೂ ಒಬ್ಬಳನ್ನೇ ಹೊತ್ತು 15 ತಾಸು ತಡವಾಗಿ ರಾಂಚಿ ತಲುಪಿತು. ಇದು ದೈನಂದಿನ ಮಾರ್ಗಕ್ಕಿಂತ 225 ಕಿ.ಮೀ. ಹೆಚ್ಚು ಸುತ್ತುಬಳಸಿ ಬಂದ ಮಾರ್ಗವಾಗಿತ್ತು ಎಂದು ವರದಿಯಾಗಿದೆ.

ರೈಲ್ವೆ ಇಲಾಖೆ ನಕಾರ:

ಆದರೆ, ಧನಬಾದ್‌ ವಿಭಾಗದ ಹಿರಿಯ ವಿಭಾಗೀಯ ವ್ಯವಸ್ಥಾಪಕ ಎ.ಕೆ. ಪಾಂಡೆ ಅವರು, ‘ಮಹಿಳಾ ಪ್ರಯಾಣಿಕಳ ಒತ್ತಾಯದ ಮೇರೆಗೆ ರೈಲನ್ನು ಸುತ್ತುಬಳಸಿ ರಾಂಚಿಗೆ ಓಡಿಸಲಾಯಿತು’ ಎಂಬ ವರದಿಗಳನ್ನು ನಿರಾಕರಿಸಿದ್ದಾರೆ. ‘ಪ್ರಯಾಣಿಕಳ ಬೇಡಿಕೆಗೂ, ಖಾಲಿ ರೈಲನ್ನು ಸುತ್ತು ಬಳಸಿ ಓಡಿಸಿದ್ದಕ್ಕೂ ಸಂಬಂಧವಿಲ್ಲ. ತಾಂತ್ರಿಕ ಕಾರಣದಿಂದ ಸುತ್ತುಬಳಸಿ ಓಡಿಸಿದೆವು’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

click me!