
ರತ್ಲಾಮ್, ಮಧ್ಯಪ್ರದೇಶ (ಮೇ.17): ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ಭಾನುವಾರ ಮುಂಜಾನೆ ಚಲಿಸುತ್ತಿದ್ದ ತಿರುವನಂತಪುರಂ-ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ರೈಲ್ವೆ ಅಧಿಕಾರಿಗಳ ಸಮಯಪ್ರಜ್ಞೆಯಿಂದಾಗಿ ಬೋಗಿಯಲ್ಲಿದ್ದ ಎಲ್ಲಾ 68 ಪ್ರಯಾಣಿಕರನ್ನು ಕೇವಲ 15 ನಿಮಿಷಗಳಲ್ಲೇ ಸುರಕ್ಷಿತವಾಗಿ ಹೊರಗೆ ಕರೆತರಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸದೆ ದೊಡ್ಡ ದುರಂತವೊಂದು ತಪ್ಪಿದೆ.
ರೈಲ್ವೆ ಅಧಿಕಾರಿಗಳ ಪ್ರಕಾರ, ತಿರುವನಂತಪುರದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ರೈಲು ಸಂಖ್ಯೆ 12431 ರ ಬಿ-1 (B-1) ಕೋಚ್‌ನಲ್ಲಿ ಮುಂಜಾನೆ 5.15 ರ ಸುಮಾರಿಗೆ ಈ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆಯು ಕೋಟಾ ರೈಲ್ವೆ ವಿಭಾಗದ ವ್ಯಾಪ್ತಿಯ ವಿಕ್ರಮಗಢ ಅಲೋಟ್ ಮತ್ತು ಲುನಿರಿಚ್ಚಾ ನಿಲ್ದಾಣಗಳ ನಡುವೆ ಸಂಭವಿಸಿದೆ ಎಂದು ರತ್ಲಾಮ್ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ (PRO) ಮುಖೇಶ್ ಕುಮಾರ್ ತಿಳಿಸಿದ್ದಾರೆ. ಈ ರೈಲು ಮುಂಜಾನೆ 3.45 ಕ್ಕೆ ರತ್ಲಾಮ್ ಜಂಕ್ಷನ್‌ನಿಂದ ಹೊರಟಿತ್ತು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ರೈಲ್ವೆ, ಬೆಂಕಿ ಕಾಣಿಸಿಕೊಳ್ಳಲು ನಿಖರವಾದ ಕಾರಣವನ್ನು ಪತ್ತೆಹಚ್ಚಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಇದರೊಂದಿಗೆ, ದೇಶಾದ್ಯಂತ ಚಲಿಸುವ ಎಲ್ಲಾ ರೈಲುಗಳ ಬೋಗಿಗಳಲ್ಲಿನ ಅಗ್ನಿ ಸುರಕ್ಷತಾ ವ್ಯವಸ್ಥೆಗಳು ಮತ್ತು ಅದಕ್ಕೆ ಸಂಬಂಧಿಸಿದ ತಾಂತ್ರಿಕ ಕಾರ್ಯವಿಧಾನಗಳ ಬಗ್ಗೆ ರಾಷ್ಟ್ರವ್ಯಾಪಿ ತುರ್ತು ಆಡಿಟ್ (ಪರಿಶೀಲನೆ) ನಡೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ರೈಲಿನ ಗಾರ್ಡ್ ಮೊದಲು ಬೋಗಿಯಿಂದ ಹೊಗೆ ಮತ್ತು ಬೆಂಕಿಯ ಜ್ವಾಲೆಗಳು ಹೊರಹೊಮ್ಮುತ್ತಿರುವುದನ್ನು ಗಮನಿಸಿ, ತಕ್ಷಣವೇ ಲೋಕೋ ಪೈಲಟ್‌ಗೆ (ಚಾಲಕ) ಮಾಹಿತಿ ನೀಡಿದ್ದಾರೆ. ತಕ್ಷಣವೇ ರೈಲನ್ನು ನಿಲ್ಲಿಸಿ ತುರ್ತು ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಆರಂಭಿಸಲಾಯಿತು.
ರೈಲ್ವೆ ಅಧಿಕಾರಿಗಳು ತಕ್ಷಣವೇ ಮೇಲ್ಭಾಗದ ವಿದ್ಯುತ್ ಸಂಪರ್ಕವನ್ನು (OHE supply) ಕಡಿತಗೊಳಿಸಿ, ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಗೆ ಧುಮುಕಿದರು. ಆದರೆ, ಅಷ್ಟರಲ್ಲೇ ಬೆಂಕಿಯ ಕೆನ್ನಾಲಿಗೆಯು ಬಿ-1 ಕೋಚ್‌ನ ಹಿಂಭಾಗದಲ್ಲಿದ್ದ ಮತ್ತೊಂದು ಲಗೇಜ್-ಕಮ್-ಗಾರ್ಡ್ ವ್ಯಾನ್ (SLR) ಬೋಗಿಗೂ ವ್ಯಾಪಿಸಿತು.
"ಬೆಂಕಿ ಹತ್ತಿಕೊಂಡ ಬೋಗಿಯಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಯಾವುದೇ ಪ್ರಯಾಣಿಕರಿಗಾಗಲಿ ಅಥವಾ ರೈಲ್ವೆ ಸಿಬ್ಬಂದಿಗಾಗಲಿ ಯಾವುದೇ ಗಾಯ ಅಥವಾ ಪ್ರಾಣಾಪಾಯ ಸಂಭವಿಸಿಲ್ಲ. ಒಹೆಚ್‌ಇ ಸಂಪರ್ಕವನ್ನು ತಕ್ಷಣವೇ ಕಡಿತಗೊಳಿಸಲಾಗಿದ್ದು, ಹಾನಿಗೊಳಗಾದ ಬಿ-1 ಬೋಗಿಯನ್ನು ರೈಲಿನಿಂದ ಬೇರ್ಪಡಿಸಲಾಗಿದೆ" ಎಂದು ಪಶ್ಚಿಮ ಮಧ್ಯ ರೈಲ್ವೆಯ ಕೋಟಾ ವಿಭಾಗವು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದ ನಂತರ, ಹಾನಿಗೊಳಗಾದ ಬೋಗಿ ಮತ್ತು ಗಾರ್ಡ್ ವ್ಯಾನ್ ಅನ್ನು ರೈಲಿನಿಂದ ಬೇರ್ಪಡಿಸಲಾಯಿತು. ಬಳಿಕ ಬೆಳಗ್ಗೆ 9.45 ರ ಸುಮಾರಿಗೆ ರೈಲು ತನ್ನ ಮುಂದಿನ ಪ್ರಯಾಣವನ್ನು ಮುಂದುವರಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಟಾ ರೈಲ್ವೆ ವಿಭಾಗದ ಪಿಆರ್‌ಒ ರವೀಂದ್ರ ಲಖಾರಾ ಮಾತನಾಡಿ, ತೊಂದರೆಗೊಳಗಾದ ಬೋಗಿಯ ಪ್ರಯಾಣಿಕರನ್ನು ಕೋಟಾದವರೆಗಿನ ಮುಂದಿನ ಪ್ರಯಾಣಕ್ಕಾಗಿ ರೈಲಿನ ಇತರ ಕಂಪಾರ್ಟ್‌ಮೆಂಟ್‌ಗಳಲ್ಲಿ ಸದ್ಯಕ್ಕೆ ಹೊಂದಾಣಿಕೆ ಮಾಡಲಾಗಿದೆ. ರೈಲಿನ ಪೂರ್ಣ ಸಾಮರ್ಥ್ಯವನ್ನು ಮರುಸ್ಥಾಪಿಸಲು ಕೋಟಾ ನಿಲ್ದಾಣದಲ್ಲಿ ಹೆಚ್ಚುವರಿ ಬೋಗಿಯೊಂದನ್ನು ಜೋಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ ಎಂದಿದ್ದಾರೆ.
ಈ ಅಗ್ನಿ ಅವಘಡದಿಂದಾಗಿ ಬಿಜಿಯೆಸ್ಟ್ ರೈಲು ಮಾರ್ಗವಾದ ದೆಹಲಿ-ಮುಂಬೈ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಪಿಟಿಐ (PTI) ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಸುಮಾರು 8 ರಿಂದ 10 ಪ್ರಯಾಣಿಕರ ರೈಲುಗಳ ಸಂಚಾರದ ಮೇಲೆ ಇದು ಪರಿಣಾಮ ಬೀರಿದೆ. 5 ರಿಂದ 6 ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದ್ದು, ಹಲವು ರೈಲುಗಳನ್ನು ವಿಭಿನ್ನ ನಿಲ್ದಾಣಗಳಲ್ಲಿ ತಡೆಹಿಡಿಯಲಾಗಿತ್ತು. ರೈಲುಗಳ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆಯಲು ಬಯಸುವ ಪ್ರಯಾಣಿಕರಿಗಾಗಿ ರೈಲ್ವೆ ಇಲಾಖೆಯು ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.
ರತ್ಲಾಮ್ ವಿಭಾಗದ ರೈಲ್ವೆ ಮ್ಯಾನೇಜರ್ (DRM) ಅಜಯ್ ಕುಮಾರ್ ಕಾಲರಾ ಅವರು ಖುದ್ದಾಗಿ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದು, ರಕ್ಷಣೆ ಮತ್ತು ಪುನಃಸ್ಥಾಪನೆ ಕಾಮಗಾರಿಗಾಗಿ ಪರಿಹಾರ ರೈಲು ಹಾಗೂ ಟವರ್ ವ್ಯಾಗನ್ ಅನ್ನು ತಕ್ಷಣವೇ ಸ್ಥಳಕ್ಕೆ ರವಾನಿಸಿದ್ದಾರೆ. ಬೆಂಕಿಯ ಮೂಲವನ್ನು ಪತ್ತೆಹಚ್ಚಲು ತಜ್ಞರ ತಂಡವು ಹಾನಿಗೊಳಗಾದ ಬೋಗಿ ಮತ್ತು ಸಂಬಂಧಿತ ತಾಂತ್ರಿಕ ಉಪಕರಣಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸಿದೆ.
ಕಳೆದ ಎರಡು ವಾರಗಳ ಅವಧಿಯಲ್ಲಿ ರೈಲಿನಲ್ಲಿ ಇಂತಹ ಅಗ್ನಿ ಅವಘಡ ಸಂಭವಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಇದಕ್ಕೂ ಮುನ್ನ, ಮೇ 15 ರ ಶುಕ್ರವಾರ ಸಂಜೆ ಹೈದರಾಬಾದ್‌ನ ನಾಂಪಲ್ಲಿ ರೈಲು ನಿಲ್ದಾಣದಲ್ಲಿ ನಿಂತಿದ್ದ ಹೈದರಾಬಾದ್-ಜೈಪುರ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲಿನ ಎರಡು ಹವಾನಿಯಂತ್ರಿತ (AC) ಬೋಗಿಗಳಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿತ್ತು. ಸಂಜೆ 7 ಗಂಟೆಗೆ ಜೈಪುರಕ್ಕೆ ಹೊರಡಬೇಕಾಗಿದ್ದ ರೈಲಿನ 3-ಟೈರ್ ಎಸಿ ಕಂಪಾರ್ಟ್‌ಮೆಂಟ್‌ನ ಬಿ1 ಮತ್ತು ಬಿ2 ಬೋಗಿಗಳಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಅದೃಷ್ಟವಶಾತ್ ಆ ಘಟನೆಯಲ್ಲೂ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ