
ಪರೀಕ್ಷೆಯಲ್ಲಿ ಕಡಿಮೆ ಮಾರ್ಕ್ಸ್ ಬಂತು ಅಂದ್ರೆ ಸಾಕು, ಮಕ್ಕಳಿಗೆ ಬೈಯೋ ಪೋಷಕರೇ ಹೆಚ್ಚು. ಇದು ಮಕ್ಕಳ ಆತ್ಮವಿಶ್ವಾಸಕ್ಕೆ ಪೆಟ್ಟು ಕೊಡುತ್ತೆ. ತಾನು ಯಾರಿಗೂ ಬೇಡವಾದವನು, ಬೇರೆ ಮಕ್ಕಳಿಗಿಂತ ಕಳಪೆ ಅನ್ನೋ ಭಾವನೆ ಅವರಲ್ಲಿ ಮೂಡಬಹುದು. ಆದರೆ, ಇದಕ್ಕೆ ತದ್ವಿರುದ್ಧವಾದ ಪೋಷಕರೂ ಇದ್ದಾರೆ. ಮುಂಬೈನ ಒಂದು ಕುಟುಂಬ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. 10ನೇ ತರಗತಿ ಪರೀಕ್ಷೆಯಲ್ಲಿ 55% ಅಂಕ ಪಡೆದ ತಮ್ಮ ಮಗನಿಗೆ ಈ ಫ್ಯಾಮಿಲಿ ಸರ್ಪ್ರೈಸ್ ಪಾರ್ಟಿ ಕೊಟ್ಟು ಮಾದರಿಯಾಗಿದೆ.
ಮಗನಿಗೆ ಬೈಯೋದು ಅಥವಾ ಬೇರೆ ಮಕ್ಕಳ ಜೊತೆ ಹೋಲಿಸೋದು ಮಾಡದೆ, ಮನೆಗೆ ಬಂದ ಮಗನನ್ನು ಚಪ್ಪಾಳೆ ತಟ್ಟಿ, ಖುಷಿಯಿಂದ ಬರಮಾಡಿಕೊಂಡಿದ್ದಾರೆ. ನಂತರ, ಮಗನ ರಿಸಲ್ಟ್ ಪ್ರಿಂಟ್ ಮಾಡಿದ್ದ ಸ್ಪೆಷಲ್ ಕೇಕ್ ಕಟ್ ಮಾಡಿಸಿದ್ದಾರೆ. ಈ ದೃಶ್ಯದ ವಿಡಿಯೋ ಈಗ ಎಲ್ಲರ ಮನಗೆದ್ದಿದೆ.
ರುಖ್ಸಾರ್ ಪಟೇಲ್ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಈ ಸುಂದರ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಕೇಕ್ ಬಾಕ್ಸ್ ತೆರೆದಾಗ ಮಗನ ಅಂಕಪಟ್ಟಿ ಪ್ರಿಂಟ್ ಮಾಡಿದ ಕೇಕ್ ಕಾಣಿಸುತ್ತದೆ. ಇಂಗ್ಲಿಷ್‌ಗೆ 57, ಮರಾಠಿಗೆ 44, ಹಿಂದಿಗೆ 56, ಗಣಿತಕ್ಕೆ 59, ಸಮಾಜ ವಿಜ್ಞಾನಕ್ಕೆ 44 ಅಂಕಗಳು. ಒಟ್ಟು 500ಕ್ಕೆ 276 ಅಂಕ (55.20%) ಬಂದಿತ್ತು. ನಂತರ, ಹುಡುಗ ಖುಷಿಯಿಂದ ಕೇಕ್ ಕತ್ತರಿಸುವುದು ಮತ್ತು ಕುಟುಂಬಸ್ಥರು ಅವನನ್ನು ಹುರಿದುಂಬಿಸುವುದನ್ನು ವಿಡಿಯೋದಲ್ಲಿ ನೋಡಬಹುದು.
ಈ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿ, ಈ ಕುಟುಂಬವನ್ನು ಮತ್ತು ಹುಡುಗನನ್ನು ಅಭಿನಂದಿಸಿದ್ದಾರೆ. 'ಎಲ್ಲಾ ಪೋಷಕರು ಮಕ್ಕಳ ಯಶಸ್ಸನ್ನು ಹೀಗೆಯೇ ಸಂಭ್ರಮಿಸಬೇಕು' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 'ನನಗೆ 84% ಮಾರ್ಕ್ಸ್ ಬಂದಿದ್ದರೂ ಮನೆಯಲ್ಲಿ ಈ ಗೌರವ ಸಿಕ್ಕಿಲ್ಲ' ಎಂದು ಇನ್ನೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. '10ನೇ ಕ್ಲಾಸ್‌ನಲ್ಲಿ 95% ಮತ್ತು 12ನೇ ಕ್ಲಾಸ್‌ನಲ್ಲಿ 94.8% ಬಂದಿತ್ತು, ಆದ್ರೂ ಈ ತರಹದ ಪ್ರೀತಿ ಸಿಕ್ಕಿಲ್ಲ' ಎಂದು ಮತ್ತೊಬ್ಬರು ಬರೆದಿದ್ದಾರೆ.
ಕಾಮೆಂಟ್‌ಗಳಿಗೆ ಉತ್ತರಿಸಿದ ಹುಡುಗನ ತಾಯಿ ರುಖ್ಸಾರ್, 'ನನ್ನ ಪ್ರಕಾರ, ನನ್ನ ಮಗನ 55% ಅಂಕಗಳು 85 ಅಥವಾ 95% ಗಿಂತ ದೊಡ್ಡದು. ನಾವು ಅವನನ್ನು ಬೈದು ಬೇಸರಪಡಿಸುವುದಕ್ಕಿಂತ ಅವನ ಮನಸ್ಸು ಮುಖ್ಯ. ಅವನು ಬೇರೆಯವರಿಗಿಂತ ಕಮ್ಮಿ ಅಂತ ಅಂದುಕೊಳ್ಳಬಾರದು, ಯಾವಾಗಲೂ ಖುಷಿಯಾಗಿರಬೇಕು. ಪರೀಕ್ಷೆಗೋಸ್ಕರ ಮಕ್ಕಳಿಗೆ ಬೈದು, ಅವರನ್ನು ಕಳೆದುಕೊಂಡ ಪೋಷಕರು ನಮ್ಮ ಸುತ್ತಮುತ್ತ ಎಷ್ಟೋ ಜನರಿದ್ದಾರೆ' ಎಂದು ಬರೆದಿದ್ದಾರೆ. ತಾಯಿಯ ಈ ಮಾತುಗಳಿಗೂ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ