
ನವದೆಹಲಿ (ಮಾ.8): ರಾಜಸ್ಥಾನದ ಕೋಟಾದಲ್ಲಿ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಶುಕ್ರವಾರ ಹದಿನೇಳು ಮಕ್ಕಳು ಮತ್ತು ಮಹಿಳೆಯೊಬ್ಬರು ಎಲೆಕ್ಟ್ರಿಕ್ ಶಾಕ್‌ನಿಂದ ತಮ್ಮ ಮೈಪೂರ್ತಿ ಸುಟ್ಟುಕೊಂಡಿದ್ದಾರೆ. ಇವರ ಪೈಕಿ ಒಂದು ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಳಿ ಬಸ್ತಿ ಪ್ರದೇಶದಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದ ಮೆರವಣಿಗೆಯ ವೇಳೆ ಈ ಘಟನೆ ನಡೆದಿದೆ. ಈ ಘಟನೆ ನಡೆದ ಕುಂಹಾರಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಅರವಿಂದ ಭಾರಧ್ವಾಜ್ ಅವರು ನೀಡಿದ ಮಾಹಿತಿ ಪ್ರಕಾರ, ಮಕ್ಕಳ ತಂಡವು ಮೆರವಣಿಗೆಯ ಭಾಗವಾಗಿತ್ತು ಮತ್ತು ಒಂದು ದೇವಸ್ಥಾನದಿಂದ ಇನ್ನೊಂದು ದೇವಸ್ಥಾನಕ್ಕೆ ಕಲಶವನ್ನು (ಪಾತ್ರೆ) ಹೊತ್ತುಕೊಂಡು ಹೋಗುತ್ತಿತ್ತು ಈ ವೇಳೆ ಘಟನೆ ನಡೆದಿದೆ ಎಂದಿದ್ದಾರೆ.
ಕಾಲೋನಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಕ್ಕಳು ಕಬ್ಬಿಣದ ರಾಡ್‌ನಲ್ಲಿ ಧ್ವಜವನ್ನು ಹಾರಿಸಿದ್ದರು. ರಾಡ್ ಹೈಟೆನ್ಷನ್ ತಂತಿಗೆ ತಗುಲಿ ಮಹಿಳೆಯೊಂದಿಗೆ ಮಕ್ಕಳು ವಿದ್ಯುತ್ ಶಾಕ್‌ಗೆ ತುತ್ತಾಗಿದ್ದಾರೆ. ಅವರೆಲ್ಲರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.. ಮಕ್ಕಳ ಪೈಕಿ ಒಬ್ಬರಿಗೆ ಶೇ.70ರಷ್ಟು ಸುಟ್ಟ ಗಾಯಗಳಾಗಿದ್ದು, ಚಿಂತಾಜನಕವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕೋಟಾದ ಎಂಬಿಎಸ್ ಆಸ್ಪತ್ರೆಗೆ ದಾಖಲಾಗಿರುವ ಮಕ್ಕಳು 9 ರಿಂದ 16 ವರ್ಷದೊಳಗಿನವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಜಿಲ್ಲಾಧಿಕಾರಿ ರವೀಂದ್ರ ಗೋಸ್ವಾಮಿ ಅವರೊಂದಿಗೆ ಆಸ್ಪತ್ರೆಗೆ ತಲುಪಿದರು. ರಾಜಸ್ಥಾನದ ಇಂಧನ ಸಚಿವ ಹೀರಾಲಾಲ್ ನಗರ್ ಕೂಡ ಗಾಯಾಳುಗಳನ್ನು ಭೇಟಿ ಮಾಡಿದ್ದಾರೆ.
“ಇದೊಂದು ದುಃಖದ ಘಟನೆ. ತನಿಖೆ ನಡೆಯಲಿದೆ ಮತ್ತು ಎಲ್ಲರಿಗೂ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ಸಿಗುತ್ತದೆ. ಒಂದು ಮಗು ಗಂಭೀರವಾಗಿದೆ. ಬೇರೆ ಯಾವುದೇ ಆಸ್ಪತ್ರೆಗೆ ರೆಫರಲ್ ಅಗತ್ಯವಿದ್ದರೆ, ನಾವು ಅದನ್ನು ಒದಗಿಸುತ್ತೇವೆ' ಎಂದು ಬಿರ್ಲಾ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ