ಅಲ್ವಾರ್(ಫೆ.14): ಮಗನ ಮದುವೆಯಲ್ಲಿ ಡಾನ್ಸ್ ಮಾಡುತ್ತಿದ್ದ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮಗನ ತೋಳಿನಲ್ಲೇ ಪ್ರಾಣ ಬಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 55 ವರ್ಷದ ನೀಲಂ (Neelam) ಅವರು ಡಿಜೆ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮದುವೆ ಮೆರವಣಿಗೆ ಬರುತ್ತಿದ್ದ ವೇಳೆ ಡಿಜೆ ಸಾಂಗ್ ಹಾಕಿದ್ದರು. ಈ ಸಂಭ್ರಮದಲ್ಲಿ ವಧುವಿನ ತಾಯಿಯೂ ಕೂಡ ನರ್ತಿಸುತ್ತಿದ್ದು, ನೃತ್ಯ ಮಾಡುವಾಗ ಅವರು ಏಕಾಏಕಿ ಮಗನ ತೋಳುಗಳ ಮೇಲೆ ಕುಸಿದು ಅಲ್ಲೇ ಸಾವನ್ನಪ್ಪಿದ್ದಾರೆ.
ಬೀಳುತ್ತಿದ್ದ ತಾಯಿಯನ್ನು ವರನೂ ಆಗಿದ್ದ ಪುತ್ರ ನೀರಜ್ ಹಿಡಿದುಕೊಂಡಿದ್ದು, ಆತನ ತೋಳಿನಲ್ಲೇ ತಾಯಿ ಪ್ರಾಣ ಬಿಟ್ಟಿದ್ದಾರೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ವೈದ್ಯರು ನೀಲಂ ಮೃತಪಟ್ಟಿರುವುದಾಗಿ ಘೋಷಿಸಿದರು. ಮಾಧ್ಯಮ ವರದಿಗಳ ಪ್ರಕಾರ, ಫೆಬ್ರವರಿ 3 ರಂದು ಈ ಘಟನೆ ಸಂಭವಿಸಿದೆ. ನೀರಜ್ ಅವರ ಮದುವೆಯ ಮೆರವಣಿಗೆಯು ಚಿಕಾನಿ(Chikani) ಯಲ್ಲಿರುವ ಅವರ ಮನೆಯಿಂದ ಮರುದಿನ ಮದುವೆ ನಡೆಯಲಿರುವ ಅಲ್ವಾರ್ ಜಿಲ್ಲೆಯ ಕಿಶನ್‌ಗಢ್ ಬಾಸ್‌ಗೆ( Kishangarh Bas) ಹೊರಟಿದ್ದಾಗ ಈ ಘಟನೆ ಸಂಭವಿಸಿದೆ.
ಹೃದಯಾಘಾತವಾಗುವ ಮೊದಲು ನೀಲಂ ತನ್ನ ಮಗನ ಕೈ ಹಿಡಿದು ಕೇವಲ 20 ಸೆಕೆಂಡುಗಳ ಕಾಲ ನೃತ್ಯ ಮಾಡಿದ್ದಾರೆ ಎಂದು ಕುಟುಂಬದವರ ಹೇಳಿಕೆಯನ್ನು ಆಧರಿಸಿ ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮೃತರಿಗೆ ಮೊದಲೇ ಹೃದಯ ಸಂಬಂಧಿ ಸಮಸ್ಯೆಗಳಿದ್ದು, ಅದಕ್ಕಾಗಿ ಔಷಧೋಪಚಾರ ಮಾಡುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮದುವೆಯ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಗೆ ಸಜ್ಜಾಗಿದ್ದ ಕುಟುಂಬ ಈ ಘಟನೆಯ ನಂತರ ಶೋಕದಲ್ಲಿ ಮುಳುಗಿದೆ.
Brain Deathಗೂ ಸಾವಿಗೂ ಇದೆಯೇ ವ್ಯತ್ಯಾಸ?
ಎರಡು ದಿನಗಳ ಹಿಂದಷ್ಟೇ ರಾಜ್ಯದ ಕೋಲಾರದಲ್ಲಿ ಆರತಕ್ಷತೆಯಂದೇ ಮದುಮಗಳೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿತ್ತು. 26 ವರ್ಷದ ಚೈತ್ರ ಎಂಬ ವಧು ತನ್ನದೇ ಆರತಕ್ಷತೆಯಲ್ಲಿ ಅಸ್ವಸ್ಥಳಾಗಿ ಬಿದ್ದಿದ್ದಳು. ತಕ್ಷಣ ಚೈತ್ರಾ ಅವರನ್ನು ಬೆಂಗಳೂರಿನ ನಿಮ್ಹಾನ್ಸ್‌ಗೆ ದಾಖಲಿಸಲಾಗಿತ್ತು. ಆದರೆ, ಚೈತ್ರಾ ಅವರ ಬ್ರೈನ್ ಡೆಡ್ ಆಗಿದೆ ಎಂದು ನಿಮ್ಹಾನ್ಸ್ ವೈದ್ಯರು ಘೋಷಿಸಿದ್ದರು.
ಅಯ್ಯೋ ವಿಧೀಯೇ! ಆರತಕ್ಷತೆಯಲ್ಲೇ ಕೊನೆಯುಸಿರೆಳೆದ ವಧು, ಸಾವಿನಲ್ಲೂ ಸಾರ್ಥಕತೆ ಮೆರೆದ ಚೈತ್ರಾ
ನಂತರ ಚೈತ್ರಾ ಅವರ ಮೆದುಳು ನಿಷ್ಕ್ರಿಯಗೊ೦ಡಿದ್ದರಿಂದ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು. ಮೃತ ಚೈತ್ರಾ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದವರು ಎಂದು ತಿಳಿದು ಬಂದಿದೆ. ಈ ಬಗ್ಗೆ ಸ್ವತಃ ಆರೋಗ್ಯ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಕೊಡಚೆರವು ಗ್ರಾಮದ ಕೃಷಿಕ ರಾಮಪ್ಪ ಎಂಬುವರ ಮಗಳು ಚೈತ್ರಾ ಎಂಎಸ್ಸಿ ಬಯೋಕೆಮಿಸ್ಟ್ರಿ ಮಾಡಿ ಕೈವಾರ ಬಳಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಫೆ.6 ರಂದು ಸಂಜೆ ಶ್ರೀನಿವಾಸಪುರ ಪಟ್ಟಣದಲ್ಲಿ ಘಟನೆ ನಡೆದಿತ್ತು.
ಹೊಸಕೋಟೆ ಮೂಲದ ಯುವಕನೊಂದಿಗೆ ಚೈತ್ರಾ ಅವರ ಮದುವೆ ನಿಶ್ಚಯವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ