ರಾಜಸ್ಥಾನ ಬಜೆಟ್ ಕಲಾಪಕ್ಕೆ ಬಿಜೆಪಿ ಸದಸ್ಯರ ಅಡ್ಡಿ; ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಹಳೇ ಬಜೆಟ್ ಮಂಡನೆ ಆರೋಪ

By Suvarna NewsFirst Published Feb 10, 2023, 2:08 PM IST
Highlights

ರಾಜಸ್ಥಾನ ವಿಧಾನಸಭೆಯಲ್ಲಿ ಇಂದು ರಾಜ್ಯ ಬಜೆಟ್ ಮಂಡನೆ ಸಂದರ್ಭದಲ್ಲಿ ಪ್ರತಿಪಕ್ಷ ಬಿಜೆಪಿ ಸದಸ್ಯರು ಗದ್ದಲ ಸೃಷ್ಟಿಸಿದ ಹಿನ್ನೆಲೆಯಲ್ಲಿ ಕಲಾಪಕ್ಕೆ ಕೆಲವು ಕಾಲ ಅಡ್ಡಿಯುಂಟಾಯಿತು. ರಾಜಸ್ಥಾನ ಮುಖ್ಯಮಂತ್ರಿ  ಅಶೋಕ್ ಗೆಹ್ಲೋಟ್ ಹಳೆಯ ಬಜೆಟ್ ಮಂಡಿಸಿದ್ದಾರೆ ಹಾಗೂ ಬಜೆಟ್ ಸೋರಿಕೆಯಾಗಿದೆ ಎಂದು ಬಿಜೆಪಿ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಈ ಆರೋಪವನ್ನು ಗೆಹ್ಲೋಟ್ ಅಲ್ಲಗಳೆದಿದ್ದಾರೆ. 

ನವದೆಹಲಿ (ಫೆ.10): ರಾಜಸ್ಥಾನ ವಿಧಾನಸಭೆಯಲ್ಲಿ ಇಂದು ಬಜೆಟ್ ಮಂಡನೆ ಸಂದರ್ಭದಲ್ಲಿ ಕೆಲವು ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ ಕಾರ್ಯಕಲಾಪಕ್ಕೆ ಅಡ್ಡಿಯುಂಟಾಯಿತು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಳೆಯ ಬಜೆಟ್ ಮಂಡಿಸುತ್ತಿದ್ದಾರೆ, ಅಲ್ಲದೆ ಬಜೆಟ್  ಸೋರಿಕೆಯಾಗಿದೆ ಎಂದು ಪ್ರತಿಪಕ್ಷ ಬಿಜೆಪಿ ಸದಸ್ಯರು ಗಂಭೀರ ಆರೋಪ ಮಾಡಿದರು. ಆದರೆ, ಈ ಆರೋಪವನ್ನು ಅಲ್ಲಗಳೆದ ರಾಜಸ್ಥಾನ ಮುಖ್ಯಮಂತ್ರಿ, 'ನನ್ನ ಬಜೆಟ್ ಪ್ರತಿಗೆ ಒಂದು ಪುಟ ಪ್ರಮಾದದಿಂದ ಸೇರಿಕೊಂಡಿತ್ತು. ಹೀಗಿರುವಾಗ ಬಜೆಟ್ ಸೋರಿಕೆಯಾಗಿದೆ ಎಂದು ಹೇಗೆ ಹೇಳುತ್ತೀರಿ?' ಎಂದು ಪ್ರತಿಪಕ್ಷದ ಸದಸ್ಯರನ್ನು ಪ್ರಶ್ನಿಸಿದ್ದಾರೆ. ಗೆಹ್ಲೋಟ್ ಹಣಕಾಸು ಖಾತೆಯನ್ನು ಕೂಡ ಹೊಂದಿದ್ದಾರೆ.ರಾಜಸ್ಥಾನ ಮುಖ್ಯಂತ್ರಿ ಅಶೋಕ್ ಗೆಹ್ಲೋಟ್ ರಾಜ್ಯ ಬಜೆಟ್ ಮಂಡಿಸಲು ಪ್ರಾರಂಭಿಸಿದ ತಕ್ಷಣ ಪ್ರತಿಪಕ್ಷ ಬಿಜೆಪಿ ಸದಸ್ಯರು ಗದ್ದಲ ಪ್ರಾರಂಭಿಸಿದರು. ಇದರಿಂದ ಕೆಲವು ಕಾಲ ಕಲಾಪವನ್ನು ಮುಂದೂಡಬೇಕಾಯಿತು ಕೂಡ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಸ್ಪೀಕರ್ ಸಿ.ಪಿ.ಜೋಶಿ ಸದನದಲ್ಲಿ ಶಾಂತಿ ಕಾಪಾಡುವಂತೆ ಸದಸ್ಯರಿಗೆ ಮನವಿ ಮಾಡಿದರು ಪ್ರಯೋಜನವಾಗಲಿಲ್ಲ. ಹೀಗಾಗಿ ಕಲಾಪವನ್ನು 30 ನಿಮಿಷಗಳ ಕಾಲ ಮುಂದೂಡಿದರು.  

'ಈ ಬಜೆಟ್ ಮಂಡನೆ ಸಾಧ್ಯವಿಲ್ಲ. ಇದು ಸೋರಿಕೆಯಾಗಿದೆಯಾ?' ಎಂದು ವಿಧಾನಸಭೆಯಲ್ಲಿ ಬಿಜೆಪಿ ನಾಯಕ ಗುಲಾಬ್ ಚಂದ್ ಕಟಾರಿಯ ಪ್ರಶ್ನಿಸಿದರು. 'ಸುಮಾರು ಎಂಟು ನಿಮಿಷಗಳ ಕಾಲ ಸಿಎಂ ಹಳೆಯ ಬಜೆಟ್ ಓದಿದರು. ನಾನು ಸಿಎಂ ಆಗಿರುವಾಗ ಬಜೆಟ್ ಮಂಡಿಸುವ ಮುನ್ನ ಅನೇಕ ಬಾರಿ ಪರಿಶೀಲಿಸುತ್ತಿದ್ದೆ ಹಾಗೂ ಓದಿ ನೋಡುತ್ತಿದ್ದೆ. ಹಳೆಯ ಬಜೆಟ್ ಓದುತ್ತಿರುವ ಸಿಎಂ ಕೈಯಲ್ಲಿ ರಾಜ್ಯ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ನೀವು ಊಹಿಸಿಕೊಳ್ಳಬಹುದು' ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕಿ ವಸುಂಧರ ರಾಜೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್ ಐ ವರದಿ ಮಾಡಿದೆ. 

Latest Videos

ಕೇಂದ್ರ ಬಜೆಟ್ ಬಗ್ಗೆ ತೇಜಸ್ವಿ ಸೂರ್ಯ ಶ್ಲಾಘನೆ: ಸಂಸತ್‌ನಲ್ಲಿ ಕನ್ನಡದಲ್ಲೇ ಭಾಷಣ ಮಾಡಿದ ಸಂಸದ

ಪ್ರತಿಪಕ್ಷ ಸದಸ್ಯರ ಆರೋಪವನ್ನು ಅಲ್ಲಗಳೆದಿರುವ ಗೆಹ್ಲೋಟ್ 'ನೀವು ನನ್ನ ಕೈಯಲ್ಲಿರುವ ಬಜೆಟ್ ಹಾಗೂ ಸದನದಲ್ಲಿ ಸದಸ್ಯರಿಗೆ ಹಂಚಿರುವ ಅದರ ಪ್ರತಿಗಳಲ್ಲಿ ಮುದ್ರಣವಾಗಿರೋದರಲ್ಲಿ ಏನಾದ್ರೂ ವ್ಯತ್ಯಾಸಗಳಿದ್ರೆ ಮಾತ್ರ ಅದನ್ನು ಗುರುತಿಸಬಹುದು. ಹೀಗಿರುವಾಗ ಪ್ರಮಾದದಿಂದ ನನ್ನ ಕೈಯಲ್ಲಿರುವ ಬಜೆಟ್ ಪ್ರತಿಗೆ ಒಂದು ಪುಟ ಸೇರ್ಪಡೆಗೊಂಡಿದ್ದರೆ, ಅದರಲ್ಲಿ ಬಜೆಟ್ ಸೋರಿಕೆಯಾಗಿರುವ ವಿಚಾರ ಎಲ್ಲಿಂದ ಬರುತ್ತದೆ?' ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಬಜೆಟ್ ಭಾಷಣ ಪ್ರಾರಂಭಿಸಿದ ಕೆಲವೇ ಸಮಯದಲ್ಲಿ ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಗದ್ದಲ ಸೃಷ್ಟಿಸಿದರು. ಸಭಾಪತಿ ಸಿ.ಪಿ.ಜೋಶಿ ಶಾಂತಿ ಕಾಪಾಡುವಂತೆ ಸದಸ್ಯರಿಗೆ ನಿರ್ದೇಶನ ನೀಡಿದರೂ ಪ್ರಯೋಜನವಾಗಲಿಲ್ಲ, ಗಲಾಟೆ ಮುಂದುವರಿಯಿತು. ಹೀಗಾಗಿ ಅವರು ಸದನವನ್ನು 30 ನಿಮಿಷಗಳ ಕಾಲ ಮುಂದೂಡಿದರು. ಆ ಬಳಿಕ ಕ್ಷಮೆ ಕೋರುವ ಮೂಲಕ ಸಿಎಂ ಗೆಹ್ಲೋಟ್ ತಮ್ಮ ಬಜೆಟ್ ಮಂಡನೆಯನ್ನು ಮತ್ತೆ ಪ್ರಾರಂಭಿಸಿದರು. 'ನಡೆದಿರುವುದರ ಬಗ್ಗೆ ನನಗೆ ಬೇಸರವಿದೆ. ಆದರೆ, ಅದು ಪ್ರಮಾದದಿಂದ ಆಗಿರುವುದು' ಎಂದು ಗೆಹ್ಲೋಟ್ ತಿಳಿಸಿದ್ದಾರೆ. 

ಭಾರತದಲ್ಲಿ ಟ್ವಿಟರ್ ಬ್ಲೂ ಟಿಕ್ ಲಾಂಚ್, ಇನ್ಮುಂದೆ ಬಳಕೆದಾರರು ತಿಂಗಳಿಗೆ ಪಾವತಿಸಬೇಕು ಇಂತಿಷ್ಟು!

ಇಂದು ಬೆಳಗ್ಗೆ ಅಶೋಕ್ ಗೆಹ್ಲೋಟ್ ರಾಜಸ್ಥಾನ ರಾಜ್ಯ ಬಜೆಟ್ ಮಂಡನೆಗೆ  ಬ್ರೀಫ್ ಕೇಸ್ ಜೊತೆಗೆ ರಾಜ್ಯ ವಿಧಾನಸಭೆಗೆ ಆಗಮಿಸಿದ್ದರು. 'ಉಳಿತಾಯ, ನಿರಾಳತೆ ಹಾಗೂ ಪ್ರಗತಿ' ಈ ಬಾರಿಯ ರಾಜಸ್ಥಾನ ಬಜೆಟ್ ನ ಧ್ಯೇಯವಾಗಿತ್ತು. ರಾಜಸ್ಥಾನದಲ್ಲಿ ಪ್ರಸ್ತುತ ಕಾಂಗ್ರೆಸ್ ಸರ್ಕಾರವಿದ್ದು, ಈ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಇದು ಗೆಹ್ಲೋಟ್ ನೇತೃತ್ವದ ಸರ್ಕಾರದ ಕೊನೆಯ ಬಜೆಟ್ ಆಗಿದೆ. ಇದೇ ಮೊದಲ ಬಾರಿಗೆ ರಾಜಸ್ಥಾನದ ಎಲ್ಲ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ರಾಜ್ಯ ಬಜೆಟ್ ಮಂಡನೆಯ ನೇರ ಪ್ರಸಾರ ಮಾಡಲಾಗಿತ್ತು. 


 

click me!